ಕಾಡೊಳಗೆ 24 ಗಂಟೆ ಏಕಾಂಗಿಯಾಗಿ ಕಳೆದ 6ರ ಪುಟ್ಟ ಬಾಲೆ
ಪುಟ್ಟ ಬಾಲಕಿಯೋರ್ವಳು 24 ಗಂಟೆ ಕಾಡಲ್ಲಿ ಕಳೆದು ನಂತರ ಪತ್ತೆಯಾಗಿದ್ದಾಳೆ. ಸುರಕ್ಷಿತವಾಗಿ ಮನೆ ಸೇರಿದ್ದಾಳೆ
ದಾವಣಗೆರೆ (ನ.13): ಮೆಕ್ಕೆಜೋಳದ ತೆನೆ ಮುರಿಯಲು ಹೊಲಕ್ಕೆ ಹೋಗಿದ್ದ 6 ವರ್ಷದ ಬಾಲಕಿ ಆಟವಾಡುತ್ತಾ ಕಾಡು ತಲುಪಿ, 24 ಗಂಟೆ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಹರಿಹರ ತಾಲೂಕು ಮಲೆಬೆನ್ನೂರು ಸಮೀಪದ ಕೊಮಾರನಹಳ್ಳಿ ಅರಣ್ಯದಲ್ಲಿ ಸಂಭವಿಸಿದೆ.
ಕೊಮಾರನಹಳ್ಳಿಯ ಬಾಲಕಿ ಜೋಯಾ ಕುಟುಂಬದವರು ಮೆಕ್ಕೆಜೋಳ ಕೀಳಲೆಂದು ಹೊಲಕ್ಕೆ ಹೋಗಿದ್ದರು. ಮಂಗಳವಾರ ಮಧ್ಯಾಹ್ನ ಆ ಎಲ್ಲರ ಜೊತೆಗೆ ಜೋಯಾ ಸಹ ಹೋಗಿದ್ದ ವೇಳೆ ಹೊಲದ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕಿ ಕಾಡು ಹಾದಿಯನ್ನು ತುಳಿದಿದ್ದಾಳೆ. ಹೊಲಕ್ಕೆ ಮರಳಲಾಗದೇ ಯಾವ ಕಡೆ ಹೋಗುತ್ತಿದ್ದೇನೆಂಬುದೇ ಗೊತ್ತಿಲ್ಲದೇ ಕಾಡಿನೊಳಗೆ ಐದಾರು ಕಿಮೀನಷ್ಟುದೂರಕ್ಕೆ ಹೆಜ್ಜೆ ಹಾಕಿದ್ದಾಳೆ. ಇಡೀ 24 ಗಂಟೆ ಕಾಲ ಕಾಡಿನಲ್ಲೇ ಬಾಲಕಿ ಜೋಯಾ ಅಳುತ್ತಾ, ಭಯದಿಂದಲೇ ಕಳೆದಿದ್ದಾಳೆ.
ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ...
ಇತ್ತ ಜೋಯಾ ಕಾಣೆಯಾಗಿದ್ದರಿಂದ ಕುಟುಂಬ ಸದಸ್ಯರು, ಗ್ರಾಮಸ್ಥರು ಸಹ ಹೊಲ ಹಾಗೂ ಸುತ್ತಮುತ್ತಲೆಲ್ಲಾ ನಿರಂತರ ಹುಡುಕಾಡಿದ್ದಾರೆ. ಬಾಲಕಿ ಮಾತ್ರ ಸಿಕ್ಕಿಲ್ಲ. ಬುಧವಾರ ಸಂಜೆ ವೇಳೆಗೆ ಕಾಡಿನೊಳಗೆ ಐದಾರು ಕಿಮೀನಷ್ಟುಮುಂದೆ ಹೋಗಿ ಹುಡುಕುತ್ತಿದ್ದಾಗ ಬಾಲಕಿಯೊಬ್ಬಳು ಅಳುತ್ತಿರುವ ಸದ್ದು ಕೇಳಿ ಬಂದು, ಅರಣ್ಯದಲ್ಲಿ ಭಯದಿಂದ ನಡುಗುತ್ತಿದ್ದ ಬಾಲಕಿಯನ್ನು ಕುಟುಂಬದವರು, ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ನಂತರ ಬಾಲಕಿಗೆ ಧೈರ್ಯ ಹೇಳಿ ಮನೆಗೆ ಕರೆ ತರಲಾಯಿತು. ಅದೃಷ್ಟವಶಾತ್ ಬಾಲಕಿ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾಳೆ.
ಹೆತ್ತ ತಾಯಿ, ಕುಟುಂಬ ವರ್ಗ ಜೋಯಾ ಕಾಣೆಯಾದಾಗಿನಿಂದ ತೀವ್ರ ಆತಂಕಕ್ಕೊಳಗಾಗಿದ್ದರು. ಬಾಲಕಿ ಕಾಡಿನಲ್ಲಿ ತಪ್ಪಿಸಿಕೊಂಡಿದ್ದು, ಸಿಕ್ಕಿರುವ ವಿಚಾರವನ್ನು ಮನೆಯವರಿಗೆ ಫೋನ್ ಮೂಲಕ ತಿಳಿಸಿದ ನಂತರವಷ್ಟೇ ಎಲ್ಲರೂ ನೆಮ್ಮದಿಯ ನಿಟ್ಟಿಸಿರು ಹಾಕಿದ್ದಾರೆ. ಕಾಡಿನಲ್ಲಿ ಒಂದು ಕಡೆ ಕಲ್ಲಿನ ಮೇಲೆ ಅಳುತ್ತಾ ಕುಳಿತಿದ್ದ ಬಾಲಕಿಯನ್ನು ಸುರಕ್ಷಿತವಾಗಿ ಕುಟುಂಬಸ್ಥರು, ಗ್ರಾಮಸ್ಥರು ಹುಡುಕಿ ಕರೆ ತಂದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅದೃಷ್ಟವಶಾತ್ ಕಗ್ಗತ್ತಲಲ್ಲಿದ್ದರೂ ಯಾವುದೇ ಕಾಡು ಪ್ರಾಣಿ, ವಿಷ ಜಂತುಗಳ ಬಾಯಿಗೆ ತುತ್ತಾಗದೇ ಬಾಲಕಿ ಸುರಕ್ಷಿತವಾಗಿ ಪಾಲಕರ ತೆಕ್ಕೆಗೆ ಸೇರಿದ ನಂತರವೇ ಗ್ರಾಮಸ್ಥರೂ ನಿಟ್ಟಿಸಿರು ಬಿಟ್ಟಿದ್ದಾರೆ.