ಬೆಂಗಳೂರು(ನ.29): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣ-ಹಾಲ್ಟ್‌ ರೈಲು ನಿಲ್ದಾಣದ ನಡುವೆ 3 ಜೊತೆ ಆರು ರೈಲುಗಳು ಕಾರ್ಯಾಚರಣೆ ಮಾಡಲು ನೈಋುತ್ಯ ರೈಲ್ವೆ ಯೋಜನೆ ರೂಪಿಸಿದೆ.

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಕಾರ್ಯಾಚರಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಆರು ರೈಲುಗಳ ಪೈಕಿ ಎರಡು ಕೆಎಸ್‌ಆರ್‌ ರೈಲು ನಿಲ್ದಾಣ ಹಾಗೂ ಒಂದು ಯಲಹಂಕ ರೈಲು ನಿಲ್ದಾಣದಿಂದ ಹಾಲ್ಟ್‌ ನಿಲ್ದಾಣಕ್ಕೆ ಸಂಚರಿಸಲಿದೆ. ದೇವನಹಳ್ಳಿಯಿಂದ ಹಾಲ್ಟ್‌ ರೈಲು ನಿಲ್ದಾಣದ ಮೂಲಕ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಮೂರು ರೈಲುಗಳನ್ನು ಕಾರ್ಯಾಚರಿಸಲು ಸಿದ್ಧಪಡಿಸಿರುವ ವೇಳಾಪಟ್ಟಿಯನ್ನು ಒಪ್ಪಿಗೆಗಾಗಿ ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ ಎಂದು ನೈಋುತ್ಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಮಯ ಉಳಿತಾಯ:

ಈ ರೈಲು ಕಾರ್ಯಾಚರಣೆಯಿಂದ ಪ್ರಯಾಣಿಕರು ಮೆಜೆಸ್ಟಿಕ್‌ನ ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಹಾಲ್ಟ್‌ ರೈಲು ನಿಲ್ದಾಣಕ್ಕೆ ಅಂದಾಜು 30-40 ನಿಮಿಷದಲ್ಲಿ ತಲುಪಬಹುದು. ಬಳಿಕ ಅಲ್ಲಿಂದ ಶೆಟಲ್‌ ಬಸ್‌ನಲ್ಲಿ 10ರಿಂದ 15 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಬಹುದು. ಒಟ್ಟಾರೆ ಪ್ರಯಾಣಿಕರು 50 ನಿಮಿಷದೊಳಗೆ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣ ತಲುಪಬಹುದು.

ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ..!

ನೈಋುತ್ಯ ರೈಲ್ವೆ ಹಾಗೂ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ಸಹಯೋಗದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಹಾಲ್ಟ್‌ ರೈಲು ನಿಲ್ದಾಣ ನಿರ್ಮಿಸಿದೆ. ಈ ರೈಲು ನಿಲ್ದಾಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಪಸ್‌ಗೆ ಹೊಂದಿಕೊಂಡಿದ್ದು, ನಿಲ್ದಾಣದ ಮುಖ್ಯ ಟರ್ಮಿನಲ್‌ಗೆ ಸುಮಾರು 4.5 ಕಿ.ಮೀ. ದೂರದಲ್ಲಿದೆ.

ನಿಲ್ದಾಣದಲ್ಲಿ ಹಲವು ಸೌಲಭ್ಯ: 

ಈ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್‌ನಲ್ಲಿ ಟಿಕೆಟ್‌ ಕೌಂಟರ್‌, ರಾರ‍ಯಂಪ್‌, ಓಪನ್‌ ಪಾರ್ಕಿಂಗ್‌, 10 ವಾಟರ್‌ ಸಿಂಕ್ಸ್‌, 10 ಬೆಂಚ್‌ಗಳು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.