ಬೆಂಗಳೂರು : ಅತ್ಯಂತ ಅಪರೂಪದಲ್ಲಿ ಕಾಣಸಿಗುವ ಆರು ಅಡಿ ಉದ್ದದ ಬಿಳಿ ಬಣ್ಣದ ನಾಗರ ಹಾವೊಂದು ನಗರದ ನ್ಯಾಯಾಂಗ ಬಡಾವಣೆಯಲ್ಲಿ ಕಾಣಿಸಿಕೊಂಡಿದೆ.

ಶನಿವಾರ ಬೆಳಗ್ಗೆ ನ್ಯಾಯಾಂಗ ಬಡಾವಣೆಯ ಮೊದಲನೇ ಅಡ್ಡರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ಹಾವು ಕಾಣಿಸಿಕೊಂಡಿದ್ದು, ಉರಗ ತಜ್ಞರಾಗಿರುವ ಬಿಬಿಎಂಪಿಯ ಸ್ವಯಂಸೇವಕ ಮೋಹನ್‌ ಎಂಬುವರು ಅದನ್ನು ರಕ್ಷಿಸಿದ್ದಾರೆ. ಈ ಕುರಿತು ಮಾತನಾಡಿದ ಮೋಹನ್‌, ನ್ಯಾಯಾಂಗ ಬಡಾವಣೆಯಲ್ಲಿ ಹಾವು ಕಾಣಿಸಿಕೊಂಡಿರುವ ಸಂಬಂಧ ಮಾಹಿತಿ ಬಂತು. ತಕ್ಷಣ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಣೆ ಮಾಡಿದ್ದೇನೆ. ಅಲ್ಲದೆ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದರು.

ಅತ್ಯಂತ ಅಪರೂಪದ ಬಿಳಿ ಹಾವಿನ ಸಂತತಿ ಉಳಿಸಬೇಕಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಮತ್ತು ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ ಜಿಕೆವಿಕೆಯ ಆವರಣದಲ್ಲಿ ಬಿಡಲು ನಿರ್ಧರಿಸಿದ್ದೇನೆ ಎಂದರು.