6 ದಿನ ಮಳೆ ಸಂಭವ : ಹವಾಮಾನ ಇಲಾಖೆ ಮುನ್ಸೂಚನೆ
ಜಿಲ್ಲೆಯಲ್ಲಿ ಮೇ 10 ರಿಂದ 15 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ವಿನಿಂದ ಸಾಧಾರಣ ಮಳೆ ಬರುವ ಸಂಭವವಿದೆ ಎಂದು ನಾಗನಹಳ್ಳಿ ಕೃಷಿ ಕ್ಷೇತ್ರ ವಿಭಾಗ ತಿಳಿಸಿದೆ.
ಮೈಸೂರು : ಜಿಲ್ಲೆಯಲ್ಲಿ ಮೇ 10 ರಿಂದ 15 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ವಿನಿಂದ ಸಾಧಾರಣ ಮಳೆ ಬರುವ ಸಂಭವವಿದೆ ಎಂದು ನಾಗನಹಳ್ಳಿ ಕೃಷಿ ಕ್ಷೇತ್ರ ವಿಭಾಗ ತಿಳಿಸಿದೆ. ಗರಿಷ್ಟಉಷ್ಣಾಂಶ 34 ರಿಂದ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ರಿಂದ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ. 93 ರಿಂದ 95 ರವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ. 60 ರಿಂದ 62 ರವರೆಗೆ ಮತ್ತು ಗಾಳಿಯು ಗಂಟೆಗೆ 1 ರಿಂದ 4 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಭತ್ತಕ್ಕೆ ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ, ದ್ವಿದಳ ಧಾನ್ಯಕ್ಕೆ ರಸ ಹೀರುವ ಕೀಟಗಳು, ಮೆಣಸಿನಕಾಯಿಗೆ ಥ್ರಿಫ್ಸ್ ಮತ್ತು ನುಸಿ ತಗಲುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್ ಮೊ. 94498 69914, ಸಹ ಸಂಶೋಧಕ ಡಾ.ಜಿ.ವಿ. ಸುಮಂತ್‌ಕುಮಾರ್ ಮೊ. 95353 45814 ಸಂಪರ್ಕಿಸಬಹುದು. ಸೋಮವಾರ ಸಂಜೆ ಹಾಗೂ ರಾತ್ರಿ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ.
ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ
ಬೆಂಗಳೂರು (ಮೇ.8): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ವಿಪರೀತ ಮಳೆಯಾಗಿದೆ. ಬಳ್ಳಾರಿ, ಕೊಡಗು, ಉತ್ತರ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸುರಿದಿರುವ ಭಾರೀ ಮಳೆಗೆ ಹಲವು ಕಡೆ ಹಾನಿಯಾಗಿದೆ.
ಬೆಂಗಳೂರಿನಲ್ಲಿಂದು ಸುರಿದ ಭಾರೀ ಮಳೆಗೆ ಮೂರು ಮನೆಗಳು ಕುಸಿದು ಬಿದ್ದಿದೆ. ಬೆಂಗಳೂರಿನ ಪಿಇಎಸ್ ಕಾಲೇಜ್ ಬಳಿಯ ವೀರಭದ್ರ ನಗರದ ಸ್ಲಂನಲ್ಲಿ ಘಟನೆ ನಡೆದಿದ್ದು, ಮನೆ ಜೊತೆಗೆ ಅಪಾರ್ಟ್ ಮೆಂಟ್ ನ ತಡೆಗೋಡೆ ಸಮೇತ ಸಂಪೂರ್ಣ ನೆಲ ಸಮವಾಗಿದೆ. ಇಂದು ಸಂಜೆ ಸುಮಾರು 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಯಾರೂ ಅದೃಷ್ಟವಶಾತ್ ಯಾರಿಗೆ ಏನೂ ಆಗಿಲ್ಲ. ಆದ್ರೆ ವಸುಂಧರ ಕೃತಿಕಾ ಅಪಾರ್ಟ್ ಮೆಂಟ್ ನ ತಡೆ ಗೋಡೆ ಸಮೇತ ಕುಸಿದು ಬಿದ್ದ ಕಾರಣ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದು ಮತ್ತೆರಡು ಕಾರುಗಳಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ.
ಇನ್ನು ಗೋಪಾಲ್ ಹಾಗೂ ಗೋವಿಂದಯ್ಯ ಎಂಬುವರ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೆಲಸಮವಾಗಿದ್ದು, ಅಪಾರ್ಟ್ ಮೆಂಟ್ ತಡೆಗೋಡೆ ಸರಿಯಾಗಿ ಕಟ್ಟಿಲ್ಲದಿದ್ದೇ ಘಟನೆ ಕಾರಣ ಅಂತ ಸ್ಲಂ ನಿವಾಸಿಗಳು ಆರೋಪ ಮಾಡಿದ್ದಾರೆ.
ಆದ್ರೆ ಸ್ಲಂನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ, ಪ್ರತಿನಿತ್ತ ಬರುವ ಕೊಳಚೆ ನೀರಿನಿಂದ ಕಾಂಪೌಂಡ್ ವಾಲ್ ಕುಸಿದಿದಿ ಎಂದು ಅಪಾರ್ಟ್ ಅಸೋಸಿಯೇಷನ್ ನವರು ಹೇಳುತ್ತಿದ್ದಾರೆ. ಇನ್ನೂ ಹಲವು ಮನೆಗಳು ಬೀಳುವ ಸ್ಥಿತಿಯಲ್ಲಿದ್ದು, ಘಟನೆಯಾಗಿ ಹಲವು ಗಂಟೆಗಳೇ ಕಳೆದ್ರು ಯಾವುದೇ ಅಧಿಕಾರಿಗಳ ಸ್ಥಳಕ್ಕೆ ಬಾರಲಿಲ್ಲ ಎಂದು ಮನೆ ಕಳೆದುಕೊಂಡ ಸ್ಲಂ ನಿವಾಸಿಗಳಿಂದ ಅಳಲು ತೋಡಿಕೊಂಡಿದ್ದಾರೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಚುನಾವಣಾ ಪ್ರಚಾರದ ಕೊನೆ ಕಸರತ್ತಿಗೆ ಮಳೆ ಅಡ್ಡಿಯಾಗಿತ್ತು. ನಗರದ ಹಲವೆಡೆ ಗಾಳಿ ಸಹಿತ ವರುಣನ ಅಬ್ಬರ ಜೋರಾಗಿತ್ತು. ಮಲ್ಲೇಶ್ವರಂ, ಶಿವಾನಂದ ಸರ್ಕಲ್, ವಿಜಯನಗರ, ಆರ್ಟಿ ನಗರ, ಕೆಅರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಕೊಡಗಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಮದ್ಯಾಹ್ನ ಬಳಿಕ ಮಳೆಯಾಗುತ್ತಿದೆ. ಇಂದು ಬೆಳಗ್ಗಿನಿಂದಲೇ ಕೂರ್ಗ್‌ನಲ್ಲಿ ಮೋಡ ಕವಿದ ವಾತಾವರಣ ಇತ್ತು.