ಹುಬ್ಬಳ್ಳಿ(ಮೇ.04): ಬೆಂಗಳೂರಿನಿಂದ 16 ವಿಶೇಷ ಬಸ್‌ಗಳಲ್ಲಿ ಸುಮಾರು 500ಕ್ಕೂ ಅಧಿಕ ವಲಸೆ ಕಾರ್ಮಿಕರು ಹುಬ್ಬಳ್ಳಿ- ಧಾರವಾಡ ಜಿಲ್ಲೆಗೆ ಆಗಮಿಸಿ    ದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ಬಸ್‌ ನಿಲ್ದಾಣದಲ್ಲಿ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

ಕೊರೋನಾ ಲಾಕ್‌ಡೌನ್‌ ನಿಂದಾಗಿ ಬೆಂಗಳೂರಲ್ಲಿ ಈ ಕಾರ್ಮಿಕರು ಸಿಲುಕಿದ್ದರು. ಅವರನ್ನು ಕರೆ ತರಲು ಸರ್ಕಾರ ಬಸ್‌ ವ್ಯವಸ್ಥೆ ಮಾಡಿತ್ತು. ಈ ಕಾರಣದಿಂದಾಗಿ ಮೊದಲ ಹಂತದಲ್ಲಿ 16 ಬಸ್‌ಗಳಲ್ಲಿ 500ಕ್ಕೂ ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಕಾರ್ಮಿಕರು ಆಗಮಿಸಿದ್ದಾರೆ. ಪ್ರತಿ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ಯಾ‌ನಿಂಗ್‌ ಮಾಡುವ ಮೂಲಕ ಆರೋಗ್ಯ ತಪಾಸಣೆ ಮಾಡಲಾಯಿತು. ಧಾರವಾಡ ಹಾಗೂ ಹುಬ್ಬಳ್ಳಿ ಸ್ಥಳೀಯ ಪ್ರಯಾಣಿಕರಿಗೆ ಮನೆಗೆ ತೆರೆಳಲು ಅವಕಾಶ ಕಲ್ಪಿಸಲಾಯಿತು. ಇದಕ್ಕಾಗಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ಧಾರವಾಡ ಜಿಲ್ಲಾಡಳಿತದ ವತಿಯಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯವ ನೀರು, ಆಹಾರ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಬೆಂಗಳೂರಿನಿಂದ ಬಂದ ಕಾರ್ಮಿಕರಿಗೆ ಗುರುದ್ವಾರ ಫೌಂಡೇಶನ್‌ ವತಿಯಿಂದ ಆಹಾರ ಪೊಟ್ಟಣಗಳನ್ನೂ ವಿತರಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಹೊರತು ಪಡಿಸಿ ಜಿಲ್ಲೆಯ ಬೇರೆ ಬೇರೆ ಹಳ್ಳಿ ಸೇರಿದಂತೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಾಜ ಕಲ್ಯಾಣ ಹಾಸ್ಟೆಲ್‌ಗಳಲ್ಲಿ ತಂಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಬೆಳಗ್ಗೆ ಈ ಕಾರ್ಮಿಕರ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆಗೊಳಪಡಿಸಿ ಅವರವರ ಊರುಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಹೋಂ ಕ್ವಾರಂಟೈನ್‌:

ಎಲ್ಲರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಇಲಾಖೆಯ ಸೀಲ್‌ ಹಾಕಲಾಗುತ್ತಿದೆ. ಕಾರ್ಮಿಕರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಮನೆಯಿಂದ ಹೊರ ಬರುವಂತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಾಕೀತು ಮಾಡಿ ಕಳುಹಿಸುತ್ತಿದ್ದಾರೆ.

ಶಾಸಕರ ಭೇಟಿ:

ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ ಬಸ್‌ ನಿಲ್ದಾಣಣಕ್ಕೆ ಆಗಮಿಸಿ ಪ್ರಯಾಣಿಕರ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಕೊಂಡರು. ಜಿಲ್ಲಾಡಳಿತ, ಪೊಲೀಸ್‌, ಆರೋಗ್ಯ, ಸಾರಿಗೆ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ವಲಸೆ ಕಾರ್ಮಿಕರ ನೋಡಲ್‌ ಅಧಿಕಾರಿ ಪುರುಷೋತ್ತಮ, ಹುಬ್ಬಳ್ಳಿ ವಾಕರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ, ಹುಬ್ಬಳ್ಳಿ ನಗರ ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ಡಿಡಿಪಿಐ ಎಂ.ಎಲ್‌. ಹಂಚಾಟೆ, ವಾಕರಸಾಸಂ ಅಧಿಕಾರಿ ಅಶೋಕ ಪಾಟೀಲ, ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ ಉಪಸ್ಥಿತರಿದ್ದರು.