Asianet Suvarna News Asianet Suvarna News

5 ವರ್ಷ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಶಾಸಕ ಕೆ. ಷಡಕ್ಷರಿ

ರಾಜ್ಯ ಸರ್ಕಾರ ತನ್ನ ಐದು ವರ್ಷಗಳ ಅವಧಿ ಮುಗಿಯುವವರೆಗೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ಸ್ಪಷ್ಟಪಡಿಸಿದರು.

5 year guarantee schemes will not stop: MLA K. Shadakshari snr
Author
First Published Feb 6, 2024, 10:42 AM IST

 ತಿಪಟೂರು :  ರಾಜ್ಯ ಸರ್ಕಾರ ತನ್ನ ಐದು ವರ್ಷಗಳ ಅವಧಿ ಮುಗಿಯುವವರೆಗೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ಸ್ಪಷ್ಟಪಡಿಸಿದರು.

ನಗರಸಭಾ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ ಇವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ಐದು ಗ್ಯಾರಂಟಿಗಳನ್ನೂ ಜಾರಿಗೊಳಿಸಿದ್ದು, ಅವುಗಳನ್ನು ಮಧ್ಯದಲ್ಲಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅಚಲವಾಗಿದೆ ಎಂದರು.

ಸಿಡಿಪಿಒ ಅಶೋಕ್ ಗೃಹಲಕ್ಷ್ಮೀಯೋಜನೆಯ ಅನುಷ್ಠಾನದ ವಿವರಗಳನ್ನು ನೀಡಿ ತಾಲೂಕಿನಲ್ಲಿ 58000 ಪಡಿತರ ಚೀಟಿಗಳಿದ್ದು, ಅದರಲ್ಲಿ 53 ಸಾವಿರ ಜನರು ಈ ಸ್ಕೀಂಗೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಯೋಜನೆ ಪ್ರಾರಂಭವಾದ ಇಲ್ಲಿಯವರೆಗೂ 50 ಸಾವಿರ ಜನರಿಗೆ ಪ್ರತಿ ತಿಂಗಳೂ ಎರಡು ಸಾವಿರ ರು. ಗಳಂತೆ 5 ಕಂತುಗಳನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದರು.

ಬೆಸ್ಕಾಂ ಎಇಇ ಮನೋಹರ್ ಮಾಹಿತಿ ನೀಡಿ, ಗೃಹಜ್ಯೋತಿ ಯೋಜನೆಗೆ ತಾಲೂಕಿನಲ್ಲಿ ಇದುವರೆಗೂ ೬೮೮೪೯ ಜನರು ನೋಂದಣಿ ಫಲಾನುಭವಿಗಳಾಗಿದ್ದು, ಯಾರಾದರೂ ನೋಂದಣಿ ಮಾಡಿಕೊಳ್ಳದಿದ್ದರೆ ಈಗಲೂ ಮಾಡಿಕೊಳ್ಳಬಹುದು ಎಂದರು.

ಆಹಾರ ಇಲಾಖೆಯ ರೇಣುಕಯ್ಯ ಅನ್ನಭಾಗ್ಯ ಯೋಜನೆಯ ಮಾಹಿತಿ ನೀಡಿ, ರೇಷನ್‌ಕಾರ್ಡ್ ಹೊಂದಿರುವ ಎಲ್ಲರಿಗೂ ಐದು ಕೆಜಿ ಅಕ್ಕಿ ಎರಡು ಕೆಜಿ ರಾಗಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇನ್ನು ಐದು ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಯಾರಿಗಾದರೂ ಹಣ ಬರದಿದ್ದರೆ ಗ್ರಾಮ ಒನ್‌ಗೆ ಭೇಟಿ ನೀಡಿ ಅಕೌಂಟ್, ಆಧಾರ್‌ಕಾರ್ಡ್ ಲಿಂಕ್ ಮಾಡಿಸಿ, ಇಕೆವೈಸಿ ಮಾಡಿಸಿದರೆ ಹಣ ಬರುತ್ತದೆ ಎಂದರು.

ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್ ಯುವನಿಧಿ ಹಾಗೂ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಾಶ್ರೀ, ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ. ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಒನ್, ಕರ್ನಾಟಕ ಒನ್, ಇನ್ನಿತರ ಸೇವೆಗಳನ್ನು ಸ್ಥಳದಲ್ಲಿಯೇ ದೊರೆಯುವಂತೆ ಮಾಡಲಾಗಿತ್ತು.

ನಮ್ಮ ತಾಲೂಕಿನಲ್ಲಿ ಯಾರೂ ಸೂರಿಲ್ಲದೇ ಇರಬಾರದು. ಅದಕ್ಕಾಗಿ ಮೊದಲ ಹಂತದಲ್ಲಿ ೧೧೦೦ ಮನೆಗಳನ್ನು ಜಿ-ಪ್ಲಸ್೨ ಮಾದರಿಯಲ್ಲಿ ಕಟ್ಟಿಸುತ್ತಿದೆ. ಇದಕ್ಕಾಗಿ ಹದಿನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಮನೆಗಳ ನಿರ್ಮಾಣ ಪೂರ್ತಿಗೊಳಿಸಿ ವಸತಿ ರಹಿತರಿಗೆ ನೀಡಲಾಗುವುದು. ಇದಕ್ಕಾಗಿ ಈಗಾಗಲೇ ಮೂರು ಸಾವಿರ ಅರ್ಜಿಗಳು ಬಂದಿದ್ದು, ನಿಯಮಾನುಸಾರ ಮನೆಗಳನ್ನು ಹಂಚಲಾಗುವುದು.

-ಕೆ.ಷಡಕ್ಷರಿ, ಶಾಸಕರು, ತಿಪಟೂರು.

Follow Us:
Download App:
  • android
  • ios