Asianet Suvarna News Asianet Suvarna News

ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮಧ್ಯಪ್ರದೇಶಕ್ಕೆ ಐದು ಆನೆಗಳ ಸ್ಥಳಾಂತರ, ಗೋಳಾಡುತ್ತಲೇ ಲಾರಿ ಏರಿದ ಸಾಕಾನೆಗಳು

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಹಲವು ವರ್ಷಗಳಿಂದ 32 ಆನೆಗಳೊಂದಿಗೆ ಖುಷಿ ಖುಷಿಯಾಗಿ ಇದ್ದ ಐದು ಆನೆಗಳು ತಮ್ಮ ಮಾವುತ ಕವಾಡಿಗರನ್ನು ಬಿಟ್ಟು ಮಧ್ಯಪ್ರದೇಶಕ್ಕೆ ಹೋಗಲು ಲಾರಿ ಏರುಲು ಬೇಸರ ವ್ಯಕ್ತಪಡಿಸಿದವು.

5 jumbos from Dubare Harangi camps leave for Madhya Pradesh gow
Author
First Published Dec 23, 2022, 8:57 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.23): ಮುದ್ದಿನಿಂದ ಸಾಕಿದ್ದ ಮಾವುತ ಕವಾಡಿಗರನ್ನು ಬಿಟ್ಟು ಗೊತ್ತಿಲ್ಲ ಊರಿಗೆ ಹೋಗಲು ಆ ಆನೆಗಳು ಪಟ್ಟ ನೋವು, ಗೋಳು ಅಷ್ಟಿಷ್ಟಲ್ಲ. ನಾಲ್ಕು ಕಾಲುಗಳನ್ನು ಮಡಚಿ ಭೂಮಿಗೆ ಮಂಡಿಯೂರಿ ಲಾರಿ ಏರಲು ಗೋಳಾಡುತ್ತಲೆ ಹೊರಳಾಡುತ್ತಿದ್ದ ಆ ದೃಶ್ಯಗಳು ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತಿತ್ತು.  ಈ ದೃಶ್ಯಗಳು ಕಂಡು ಬಂದಿದ್ದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ.  ಹಲವು ವರ್ಷಗಳಿಂದ 32 ಆನೆಗಳೊಂದಿಗೆ ಖುಷಿ ಖುಷಿಯಾಗಿ ಇದ್ದ ಐದು ಆನೆಗಳು ತಮ್ಮ ಮಾವುತ ಕವಾಡಿಗರನ್ನು ಬಿಟ್ಟು ಮಧ್ಯಪ್ರದೇಶಕ್ಕೆ ಹೋಗಲು ಲಾರಿ ಏರುವ ಸಂದರ್ಭದಲ್ಲಿ ಕಂಡುಬಂದ ಕರುಳು ಹಿಂಡುವ ದೃಶ್ಯಗಳಿವು.  ಮಧ್ಯಪ್ರದೇಶದಲ್ಲಿ ಆನೆಗಳ ಬೇಡಿಕೆ ಇದ್ದಿದ್ದರಿಂದ ರಾಜ್ಯ ಸರ್ಕಾರಕ್ಕೆ ಆನೆಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು.

ಹೀಗಾಗಿ ರಾಜ್ಯ ವನ್ಯಜೀವ ಸಂರಕ್ಷಣಾ ಪರಿಪಾಲಕರ ಸೂಚನೆಯಂತೆ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಹಾಗೂ ಹಾರಂಗಿ ಕುಶಾಲನಗರ ಸಮೀಪದ ಹಾರಂಗಿ ಸಾಕಾನೆ ಶಿಬಿರದಿಂದ 1 ಆನೆಯನ್ನು ಮಧ್ಯಪ್ರದೇಶಕ್ಕೆ ಲಾರಿಗಳು ಮೂಲಕ ಸಾಗಿಸಲಾಗಿದೆ. ಹೀಗೆ ಲಾರಿಯ ಮೂಲಕ ಆನೆಗಳನ್ನು ಸಾಗಿಸುವುದಕ್ಕಾಗಿ ಅವುಗಳನ್ನು ಲಾರಿಗೆ ತುಂಬುವಾಗ ಅವು ಲಾರಿ ಏರಿಲ್ಲ. ಬದಲಾಗಿ ಲಾರಿ ಏರುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ.

ಆ ದೃಶ್ಯ ಎಂತವರ ಕರುಳಾದರೂ ಚುರುಕ್ ಎನ್ನುವಂತೆ ಮಾಡಿದೆ. ಆನೆಗಳು ಶಿಬಿರ ಬಿಟ್ಟು ಹೋಗದಿರಲು ಹಠ ಹಿಡಿದ ಹಿನ್ನೆಲೆ ಬೇರೆ ಆನೆಗಳ ಸಹಾಯದಿಂದ ನೂಕಿ ಲಾರಿಗೆ ಆನೆಗಳನ್ನು ತುಂಬಿ ಮಧ್ಯಪ್ರದೇಶಗಳಿಗೆ ಕಳುಹಿಸಲಾಗಿದೆ. ಈ ಆನೆಗಳು ಹೋಗಲು ಗೋಳಾಡಿದ ದೃಶ್ಯ ಮಾವುತ, ಕವಾಡಿಗರು ಕಣ್ಣೀರಿಡುವಂತೆ ಮಾಡಿದೆ. ಒಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರೀತಿಯಿಂದ ಮಾವುತ ಕವಾಡಿಗರ ಪಾಠ ಹೇಳಿಸಿಕೊಂಡು ಹತ್ತಾರು ಸ್ನೇಹಿತರೊಂದಿಗೆ ಇದ್ದ ಐದು ಆನೆಗಳು ಗೆಳೆಯರನ್ನು ಬಿಟ್ಟು ಮಧ್ಯಪ್ರದೇಶಕ್ಕೆ ಗೋಳಾಡುತ್ತಲೇ ಹೋಗಿವೆ.

ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ!

ಈ ಕರುಣಮಯ ಆನೆಗಳು ಮಧ್ಯಪ್ರದೇಶಕ್ಕೆ ಹೋಗಿರುವ ಕುರಿತು ಮಾತನಾಡಿರುವ ಮಡಿಕೇರಿ ಡಿಎಫ್ಓ ಪೂವಯ್ಯ ಅವರು ಬೇಡಿಕೆ ಇದ್ದು ಕರ್ನಾಟಕ ಸರ್ಕಾರಕ್ಕೆ ಮಧ್ಯ ಪ್ರದೇಶ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಮತ್ತು ಶಿಬಿರದಲ್ಲಿ ಆನೆಗಳ ಸಾಕಾಣಿಕೆಯ ಒತ್ತಡವನ್ನು ತಪ್ಪಿಸುವುದಕ್ಕಾಗಿ ಐದು ಆನೆಗಳನ್ನು ಕಳುಹಿಸಲಾಗುತ್ತಿದೆ. ಅವರೊಂದಿಗೆ ಮಾವುತ, ಕವಾಡಿಗರು ಹೋಗುತ್ತಿದ್ದು, ಹದಿನೈದು ದಿನಗಳ ಕಾಲ ಆನೆಗಳೊಂದಿಗೆ ಇದ್ದು ಅಲ್ಲಿನ ಮಾವುತ ಕವಾಡಿಗರಿಗೆ ಆನೆಗಳು ಪಳಗಿದ ಬಳಿಕ ವಾಪಸ್ ಬರಲಿದ್ದಾರೆ ಎಂದಿದ್ದಾರೆ. ಜಿಲ್ಲೆಯಲ್ಲಿ  ಪುಂಡಾಟ ನಡೆಸುತ್ತಿರುವ ನಾಲ್ಕು ಆನೆಗಳನ್ನು ಹಿಡಿಯಲು ಈಗಾಗಲೇ ಸರ್ಕಾರ ಆದೇಶ ನೀಡಿದೆ.

ಈ ಬಾರಿಯಾದ್ರೂ ಆನೆಗೊಂದಿ ಉತ್ಸವ ನಡೆಯುವುದೇ?

ಹೀಗಾಗಿ ಜಿಲ್ಲೆಯ ಎರಡು ಸಾಕಾನೆ ಶಿಬಿರದಿಂದ ಕಳುಹಿಸಿರುವ ಸಾಕಾನೆಗಳ ಬದಲಿಗೆ ಈಗ ಹಿಡಿಯುವ ನಾಲ್ಕು ಆನೆಗಳನ್ನು ಪಳಗಿಸಿ ಅವುಗಳನ್ನು ಸಾಕಾನೆ ಶಿಬಿರಕ್ಕೆ ಬಿಡಲಾಗುವುದು ಎಂದಿದ್ದಾರೆ. ಆನೆಗಳನ್ನು ಸಾಕಿ ಸಲುಹಿ ಈಗ ಮಧ್ಯಪ್ರದೇಶಕ್ಕೆ ಕರೆದೊಯ್ದ ಮಾವುತರು ಮಾತನಾಡಿ ಹಲವು ವರ್ಷಗಳಿಂದ ಆನೆಗಳನ್ನು ಮಕ್ಕಳಂತೆ ಸಾಕಿದ್ದೆವು. ಈಗ ಅವುಗಳನ್ನು ಬೇರೆಡೆಗೆ ಕಳುಹಿಸುತ್ತಿರುವುದು ತುಂಬಾ ಬೇಸರವಾಗುತ್ತಿದೆ. ನಮ್ಮ ಮಕ್ಕಳನ್ನೇ ಕಳುಹಿಸಿದಷ್ಟು ನೋವಾಗುತ್ತಿದೆ ಎಂದಿದ್ದಾರೆ.

Follow Us:
Download App:
  • android
  • ios