Mandya: ಏಪ್ರಿಲ್‌ನಲ್ಲಿ ವಿದ್ಯುತ್ ಬಿಲ್ 5 ಕೋಟಿ ಬಾಕಿ: ಅಧಿಕಾರಿಗಳಿಂದ ನಿರಂತರ ಸುತ್ತಾಟ
ಉಚಿತ ವಿದ್ಯುತ್ ಘೋಷಣೆ ಸೆಸ್ಕಾಂ ಸಿಬ್ಬಂದಿಯನ್ನು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಪಡಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಏಪ್ರಿಲ್ ತಿಂಗಳಲ್ಲಿ ಪಾವತಿಯಾಗಬೇಕಾದ ವಿದ್ಯುತ್ ಬಾಕಿ ಹಣದಲ್ಲಿ ಜಿಲ್ಲೆಯಲ್ಲಿ 5 ಕೋಟಿ ರು. ಖೋತಾ ಆಗಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಮೇ.31): ಉಚಿತ ವಿದ್ಯುತ್ ಘೋಷಣೆ ಸೆಸ್ಕಾಂ ಸಿಬ್ಬಂದಿಯನ್ನು ಇನ್ನಿಲ್ಲದ ಸಂಕಷ್ಟಕ್ಕೆ ಗುರಿಪಡಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಏಪ್ರಿಲ್ ತಿಂಗಳಲ್ಲಿ ಪಾವತಿಯಾಗಬೇಕಾದ ವಿದ್ಯುತ್ ಬಾಕಿ ಹಣದಲ್ಲಿ ಜಿಲ್ಲೆಯಲ್ಲಿ 5 ಕೋಟಿ ರು. ಖೋತಾ ಆಗಿದೆ. ಜಿಲ್ಲೆಯ ಐದು ಸೆಸ್ಕಾಂ ವಿಭಾಗಗಳಲ್ಲಿ ವಿದ್ಯುತ್ ಬಿಲ್ ಬಾಕಿ ವಸೂಲಿಯಲ್ಲಿ ಹಿನ್ನಡೆಯಾಗಿದೆ. ಇದರಿಂದ ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಹಣದ ಕೊರತೆ ಎದುರಾಗುವ ಸಾಧ್ಯತೆಗಳಿವೆ ಎಂದು ಸೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಅಲ್ಲಲ್ಲಿ ವಿದ್ಯುತ್ ಬಿಲ್ ಪಾವತಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಬಹುತೇಕರು ಹಣವನ್ನು ಪಾವತಿಸದೆ ಸರ್ಕಾರದ ನಿರ್ಧಾರವನ್ನು ಕಾದುನೋಡುತ್ತಿದ್ದಾರೆ. ವಿದ್ಯುತ್ ಬಾಕಿ ಹಣ ಬೇಡಿಕೆಯಷ್ಟುಪಾವತಿಯಾಗದಿರುವುದು ಅಧಿಕಾರಿ ವರ್ಗವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಬಾಕಿ ಹಣ ವಸೂಲಿಗೆ ಒತ್ತಡ: ವಿದ್ಯುತ್ ಬಾಕಿ ಹಣವನ್ನು ವಸೂಲಿ ಮಾಡುವಂತೆ ಸೆಸ್ಕಾಂ ಇಲಾಖೆಯ ಮೇಲಧಿಕಾರಿಗಳಿಂದ ಹಿಡಿದು ಕೆಳಹಂತದವರೆಗೂ ತೀವ್ರ ಒತ್ತಡ ಹೇರಲಾಗುತ್ತಿದೆ. ಇದರಿಂದ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಇಲಾಖೆಯಲ್ಲಿ ಎಕ್ಸಿಕ್ಯುಟೀವ್ ಎಂಜಿನಿಯರ್ ಅವರಿಂದ ಆರಂಭವಾಗಿ ಕೆಳಹಂತದ ಲೈನ್‌ಮನ್‌ವರೆಗೂ ವಿದ್ಯುತ್ ಬಾಕಿ ವಸೂಲಿಗೆ ಇಳಿಸಲಾಗಿದೆ. ಪ್ರತಿ ದಿನ ಒಂದೊಂದು ಹೋಬಳಿ, ವಿಭಾಗಗಳಿಗೆ ತೆರಳಿ ವಿದ್ಯುತ್ ಬಿಲ್ ಪಾವತಿಸುವಂತೆ ಜನರಿಗೆ ಬುದ್ಧಿಮಾತು ಹೇಳುತ್ತಿದ್ದಾರೆ, ಅವರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಪಕ್ಷಭೇದವಿಲ್ಲದೆ ಆದ್ಯತೆ ಮೇರೆಗೆ ಕೆಲಸ ಮಾಡಿ: ಶಾಸಕ ಧೀರಜ್ ಮುನಿರಾಜ್
ಆದರೆ, ನಿರೀಕ್ಷಿಸಿದಷ್ಟು ವಿದ್ಯುತ್ ಬಾಕಿ ಹಣ ಸಂಗ್ರಹವಾಗದಿರುವುದು ಅಧಿಕಾರಿ ವರ್ಗದವರನ್ನು ಚಿಂತೆಗೀಡುಮಾಡಿದೆ. ಹಲವಾರು ಗ್ರಾಮಗಳ ಜನರು ಉಚಿತ ವಿದ್ಯುತ್ ಎಂದು ಸರ್ಕಾರವೇ ಹೇಳಿದೆ. 200 ಯೂನಿಟ್‌ಗಿಂತಲೂ ಕಡಿಮೆ ಬಿಲ್ ಬಂದಿದೆ. ಅದರಿಂದ ನಾವು ಕಟ್ಟುವುದಿಲ್ಲ ಎಂದು ಬಿಗಿಪಟ್ಟು ಹಿಡಿದ್ದಾರೆ. ಉಚಿತ ವಿದ್ಯುತ್‌ಗೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅಲ್ಲಿಯವರೆಗೆ ಬಾಕಿ ಇರುವ ಹಣವನ್ನು ಪಾವತಿಸುವಂತೆ ತಿಳಿವಳಿಕೆ, ಅರಿವು ಮೂಡಿಸುತ್ತಿದ್ದರೂ ಆ ಕ್ಷಣಕ್ಕೆ ಬಿಲ್ ಪಾವತಿಗೆ ಮುಂದಾಗದಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕುವಂತೆ ಮಾಡಿದೆ.
ನಿರಂತರ ಸುತ್ತಾಟ: ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಸೆಸ್ಕಾಂ ಅಧಿಕಾರಿಗಳು ಕಾರಿನ ಮೂಲಕ ಎಲ್ಲೆಡೆ ನಿರಂತರವಾಗಿ ಸುತ್ತಾಡುತ್ತಿದ್ದಾರೆ. ಬಾಕಿ ವಸೂಲಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಗ್ರಾಮೀಣ ಜನರನ್ನು ಹಣ ಕಟ್ಟಲೇಬೇಕೆಂದು ಒತ್ತಾಯಿಸಲಾಗುತ್ತಿಲ್ಲ. ಫಯಸ್ ಕಿತ್ತುಹಾಕುವ ಧೈರ್ಯವನ್ನು ತೋರಿಸುವ ಪ್ರಯತ್ನಕ್ಕೆ ಇಳಿಯಲೂ ಆಗುತ್ತಿಲ್ಲ. ಜನರ ವಿರೋಧವನ್ನು ಎದುರಿಸಲಾಗದೆ ವಾಪಸಾಗುತ್ತಿದ್ದಾರೆ. ಅರಿವು, ಜಾಗೃತಿ, ಮನವೊಲಿಸುವ ಪ್ರಯತ್ನಗಳಿಗೆ ಜನರು ಬಗ್ಗುತ್ತಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿ ವರ್ಗ ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರ ಪ್ರದೇಶದ ಹಲವಾರು ಭಾಗಗಳಲ್ಲಿ ವಿದ್ಯುತ್ ಬಾಕಿ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲ ಮನೆಗಳಿಗೂ ಹೋಗಿ ವಿದ್ಯುತ್ ಬಿಲ್ ಪಾವತಿಸುವಂತೆ ಕೇಳಲಾಗುತ್ತಿಲ್ಲ. ಅವರೂ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಮುಂದಾಗುತ್ತಿಲ್ಲ. ಇವೆಲ್ಲವೂ ಸೆಸ್ಕಾಂಗೆ ಆರ್ಥಿಕವಾಗಿ ಹೊಡೆತವನ್ನು ನೀಡುತ್ತಿವೆ.
ಕಾವೇರಿ ನದಿ ಪ್ರವಾಹ ಭೀತಿ: ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳಿಂದ ನೋಟಿಸ್
ವಿದ್ಯುತ್ ಕಡಿತ ಏಕಾಏಕಿ ಮಾಡಲಾಗದು: ವಿದ್ಯುತ್ ಬಿಲ್ ಬಾಕಿ ಪಾವತಿಸದ ಗ್ರಾಮಗಳಿಗೆ ಏಕಾಏಕಿ ವಿದ್ಯುತ್ ಕಡಿತ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಇದರಿಂದ ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಅವರ ಆಕ್ರೋಶವನ್ನು ಎದುರಿಸುವ ಸ್ಥಿತಿಯಲ್ಲಿ ಸೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಇಲ್ಲ. ಕೇವಲ ವಿದ್ಯುತ್ ಬಾಕಿ ಹಣ ಪಾವತಿಸುವಂತೆ ರೈತರು ಹಾಗೂ ಜನರ ಮನವೊಲಿಸುವುದೊಂದೇ ಅಧಿಕಾರಿಗಳಿಗೆ ಇರುವ ದಾರಿಯಾಗಿದೆ. ಅದೇ ಕಾರ್ಯದಲ್ಲಿ ಅಧಿಕಾರಿ ವರ್ಗದವರು ನಿರಂತರವಾಗಿ ಮುಂದುವರೆದಿದ್ದಾರೆ. ಜೂ.1ರಿಂದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುವ ಸಾಧ್ಯತೆಗಳಿವೆ. ಉಚಿತ ವಿದ್ಯುತ್ ಬಗ್ಗೆ ಯಾವ ಮಾನದಂಡ, ನಿಯಮಾವಳಿಗಳನ್ನು ರೂಪಿಸಲಿದೆ ಎನ್ನುವುದನ್ನು ರೈತರು, ಜನಸಾಮಾನ್ಯರು ಎದುರುನೋಡುತ್ತಿದ್ದಾರೆ. ಸರ್ಕಾರದ ಆದೇಶ ಶೀಘ್ರ ಹೊರಬಿದ್ದಲ್ಲಿ ಮಾತ್ರ ಸೆಸ್‌್ಕ ಅಧಿಕಾರಿಗಳ ಪ್ರಾಣಸಂಕಟ ಕೊನೆಗೊಳ್ಳಲಿದೆ.