ಬೆಂಗಳೂರು(ಏ.08): ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಅಬ್ಬರ ಇನ್ನಷ್ಟು ಹೆಚ್ಚಾಗಿದ್ದು, ಬುಧವಾರ 4991 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ಕಳೆದ ಆರು ತಿಂಗಳ ಅವಧಿಯಲ್ಲಿ ಪತ್ತೆಯಾದ ಅತ್ಯಧಿಕ ಸೋಂಕಿತರ ಸಂಖ್ಯೆಯಾಗಿದ್ದು, 2020 ಅಕ್ಟೋಬರ್‌ 6ರಂದು ಐದು ಸಾವಿರ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.

ಬುಧವಾರ ಸೋಂಕಿನಿಂದ 25 ಮಂದಿ ಮೃತಪಟ್ಟಿದ್ದು ಈವರೆಗೂ ಮೃತಪಟ್ಟವರ ಸಂಖ್ಯೆ 4718ಕ್ಕೆ ಏರಿಕೆಯಾಗಿದೆ. 1782 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಗುಣಮುಖರಾದ ಸಂಖ್ಯೆ ಒಟ್ಟು 4,19,508ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳು 35,789ಕ್ಕೆ ಏರಿಕೆಯಾಗಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4,60,016ಕ್ಕೆ ಏರಿಕೆಯಾಗಿದೆ. ಸದ್ಯ 169 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

149 ಮಕ್ಕಳಲ್ಲಿ ಸೋಂಕು: ನಗರದಲ್ಲಿ 9 ವರ್ಷದೊಳಗಿನ 146 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಬುಧವಾರ ದೃಢಪಟ್ಟ4991 ಸೋಂಕು ಪ್ರಕರಣಗಳ ಪೈಕಿ 10ರಿಂದ 19 ವರ್ಷದೊಳಗಿನ 398, 20ರಿಂದ 29 ವರ್ಷದೊಳಗಿನನ 1128 ಮತ್ತು 30ರಿಂದ 39 ವಯಸ್ಸಿನೊಳಗಿನ 1131 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 6976 ಕೇಸ್, ಯಾವ ಜಿಲ್ಲೆಯಲ್ಲಿ ಎಷ್ಟು?

40ರಿಂದ 49 ವರ್ಷದೊಳಗಿನ 835 ಮಂದಿ, 50ರಿಂದ 59 ವಯಸ್ಸಿನೊಳಗಿನ 551, 60ರಿಂದ 69 ವರ್ಷದೊಳಗಿನ 430 ಜನರಲ್ಲಿ ಸೋಂಕು ಪತ್ತೆಯಾಗಿದೆ. 70 ವರ್ಷ ವಯೋಮಿತಿಯ ನಂತರದ 285 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

ಹಿರಿಯರ ಸಾವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮೃತಪಟ್ಟ 25 ಮಂದಿ ಪೈಕಿ 70 ವರ್ಷ ಮೇಲ್ಪಟ್ಟ4 ಮಂದಿ ಮಹಿಳೆಯರು ಮತ್ತು 5 ಮಂದಿ ಪುರುಷರಾಗಿದ್ದಾರೆ. 40ರಿಂದ 49 ವರ್ಷದೊಳಗಿನ ಇಬ್ಬರು ಮಹಿಳೆಯರು, ಓರ್ವ ಪುರುಷ, 50ರಿಂದ 59 ವಯೋಮಿತಿಯ ನಾಲ್ವರು ಪುರುಷರು, ಒಬ್ಬ ಮಹಿಳೆ, 60ರಿಂದ 69 ವರ್ಷದೊಳಗೆ ಪುರುಷ ಹಾಗೂ ಮಹಿಳೆ ಸೇರಿ ತಲಾ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟು 14 ಪುರುಷರು ಮತ್ತು 11 ಮಂದಿ ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ನಿಯಮ ಪಾಲಿಸದ ಸೂಪರ್‌ ಮಾರ್ಕೆಟ್‌ಗಳಿಗೆ ಬೀಗ

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಹಾಕದೆ ನಿರ್ಲಕ್ಷ್ಯ ತೋರುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಬುಧವಾರ ಬೊಮ್ಮನಹಳ್ಳಿ ವ್ಯಾಪ್ತಿಯ ಹೋಟೆಲ್‌, ದೇವಸ್ಥಾನ, ಛತ್ರ, ಮಾಲ್‌ಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ದಾಳಿ ಮಾಡಿ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ ಹೋಟೆಲ್‌, ಸೂಪರ್‌ ಮಾರ್ಕೆಟ್‌ಗಳನ್ನು ಬಂದ್‌ ಮಾಡಿಸಿ ಜಂಟಿ ಆಯುಕ್ತ ರಾಮಕೃಷ್ಣ ಅವರು ದಂಡ ವಿಧಿಸಿದರು. ಕೊರೋನಾ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಲ್ಲದೇ, ಬಿಬಿಎಂಪಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದರು. ಪ್ರತಿಷ್ಠಿತ ಎಂ.ಟಿ.ಆರ್‌. ಹೋಟೆಲ್‌ನಲ್ಲಿ ಕೋವಿಡ್‌ ನಿಯಮ ಪಾಲಿಸದ ಕಾರಣ 10 ಸಾವಿರ ದಂಡ ವಿಧಿಸಲಾಯಿತು. ಬಿಬಿಎಂಪಿ ಆರೋಗ್ಯಾಧಿಕಾರಿ ಸವಿತಾ, ಆರೋಗ್ಯಾಧಿಕಾರಿ ಡಾ. ನಾಗೇಂದ್ರ, ಡಾ. ಕುಮಾರ್‌, ಆರೋಗ್ಯಕ ನಿರೀಕ್ಷಕ ವಿನೋದ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.