ಬಿಜೆಪಿ ಕಾಲಾವಧಿಯಲ್ಲಿ 4000 ವಕ್ಫ್ ಖಾತೆ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ
ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು ನಡೆಸುತ್ತಿರುವ ಹೋರಾಟ ಇದಾಗಿದೆ. ವಕ್ಫ್ ಬಗ್ಗೆ ಮಾತನಾಡುತ್ತಾ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಜನರನ್ನು ಯಾಮಾರಿಸಲು ಮಾಡುತ್ತಿರುವ ಹೋರಾಟವಾಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಗದಗ(ಡಿ.05): ರಾಜಕೀಯ ಈ ಮೊದಲು ಸೇವಾ ಕ್ಷೇತ್ರವಾಗಿತ್ತು. ಅದಕ್ಕಾಗಿ ಅದನ್ನು ಸೇವಾಕರಣ ಎಂದು ಕರೆಯುತ್ತಿದ್ದರು. ಈಗ ರಾಜಕಾರಣ ಸ್ವಕಾರಣವಾಗಿ ಮಾರ್ಪಟ್ಟಿದೆ, ಸೇವಾಕರಣದ ಕೊನೆಯ ಕೊಂಡಿ ಡಿ.ಆರ್. ಪಾಟೀಲಯಾಗಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿನ ಶಿವಾನುಭವ ಮಂಟಪದಲ್ಲಿ ತೋಂಟದಾರ್ಯ ಮಠ, ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಮೂಲಕ ಪ್ರಕಟಗೊಂಡ ಸಂತರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ರಾಜಕೀಯಕ್ಕೆ ಬರುವವರು ಸೇವೆ ಮಾಡಬೇಕು. ಬಡವರಿಗೆ ನೋಂದವರಿಗೆ ಧ್ವನಿಯಾಗಬೇಕು ಎಂದು ಬರುತ್ತಿದ್ದರು. ಈಗ ರಾಜಕೀಯ ಬರುವವರು ಏನೆಲ್ಲ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಡಿ.ಆರ್.ಪಾಟೀಲ ಅವರಂತಹ ಹಿರಿಯರು, ತತ್ವ, ಸಿದ್ದಾಂತ, ನಿಷ್ಠೆಯ ಬದುಕು ಮಾದರಿಯಾಗಿದೆ ಎಂದರು.
ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ನಾನು ಮೊಟ್ಟ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಯಡಿಯೂರ ಸಿದ್ದಲಿಂಗೇಶ್ವರ ಟ್ರಸ್ಟ್ ಸದಸ್ಯ ನಾಗುವ ಅವಕಾಶ ದೊರೆಯಿತು. ತೋಂಟದಾರ್ಯ ಮಠಕ್ಕೂ ನನಗೂ ಅವಿನಾಭಾವ ಸಂಬಂಧ ಬೆಳೆಯಲು ಡಿ. ಆರ್. ಪಾಟೀಲ ಕಾರಣವಾಗಿದ್ದಾರೆ. ದಿ. ಕೆ.ಎಚ್. ಪಾಟೀಲರು ಜನಸೇವೆ ಆಶಯ ಈಡೇರಿಸುವುದಕ್ಕಾಗಿಯೇ ಡಿ.ಆರ್. ಪಾಟೀಲ ತಮ್ಮ ಅರ್ಧ ಜೀವನ ಸವೆಸಿದರು. ರಾಜಕೀಯವಾಗಿ ಅವರ ಮಾರ್ಗದರ್ಶನ ನನಗೆ ಸಾಕಷ್ಟಿದೆ. ನಮ್ಮ ತಂದೆ ತೀರಿ ಹೋದ ನಂತರ ಆ ಸ್ಥಾನವನ್ನು ಸಮರ್ಥವಾಗಿ ತುಂಬಿ ನಮ್ಮ ಮನೆಯ ಗೌರವವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಹೆಚ್ಚಿಸಿದ್ದು ಡಿ.ಆರ್. ಪಾಟೀಲರು ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಪೂಡೆ ಪಿ. ಕೃಷ್ಣಾ ಮಾತನಾಡಿ, ಗ್ರಾಮೀಣ ಬದುಕು, ಹಳ್ಳಿ ಜನರ ಬಗ್ಗೆ ಅವರಿಗೆ ಇರುವ ಕಾಳಜಿ ಮಾತ್ರ ಎಲ್ಲರಿಗೂ ಪ್ರೇರಣೆದಾಯಕವಾಗಿದೆ. ಬಹುತ್ವದ ಬದುಕು ಎನ್ನುವ ಬದುಕು ಎನ್ನುವ ಕಲ್ಪನೆ ಸಾಕಾರಗೊಳಿಸಿದ್ದು ಡಿ. ಆರ್. ಪಾಟೀಲ ಜೀವನ ಎಂದರು. ರೋಣ ಶಾಸಕ ಜಿ.ಎಸ್. ಪಾಟೀಲ, ರುದ್ರಪ್ಪ ಲಮಾಣಿ, ವಿಪ ಸಭಾಪತಿ ಬಸವರಾಜ ಹೊರಟ್ಟಿ ಮುಂತಾದವರು ಮಾತನಾಡಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ದರಾಮಶ್ರೀಗಳು, ರಾಮಕೃಷ್ಣ ವಿವೇಕಾನಂದ ಅಶ್ರಮದ ನಿರ್ಭಯಾನಂದ ಶ್ರೀಗಳು ಆಶೀರ್ವಚನ ನೀಡಿದರು. ರಾಮಕೃಷ್ಣ ಆಶ್ರಮದ ಜಗನ್ನಾಥ ಶ್ರೀಗಳು. ಮಾಜಿ ಸಚಿವ ಎಸ್.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಟರ್‌ಾಬ ಬಬರ್ಚಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ. ರಾಮಕೃಷ್ಣ ದೊಡ್ಡಮನಿ, ಸತೀಶ ಕಾಡಶೆಟ್ಟಿ, ಆರ್. ರಘು, ನರೇಂದ್ರ ಎಂ.ಸಿ. ಜಿ.ಬಿ. ಶಿವರಾಜ, ಬಿ. ಎಫ್, ದಂಡೀನ, ಕೊಟ್ರೇಶಪ್ಪ ಬಸೇಗಣ್ಣಿ, ಎಲ್ .ಡಿ. ಚಂದಾವರಿ, ಬಿ.ಬಿ. ಅಸೂಟಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ ಸೇರಿದಂತೆ ಡಿ.ಆರ್. ಪಾಟೀಲ ಅಭಿಮಾನಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗ್ರಂಥ ರಚನೆಕಾರ ಜೆ.ಕೆ. ಜಮಾದಾರ, ಡಿ.ಆರ್. ಪಾಟೀಲ, ಎಂ.ಆರ್ .ಪಾಟೀಲ ಹಾಗೂ ಪಿ.ಕೆ.ಪಾಟೀಲ ದಂಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ದಿ.ಕೆ.ಎಚ್.ಪಾಟೀಲರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಕೆಲ ಕಾರಣಗಳಿಂದ ಆಗಲಿಲ್ಲ. ಈಗ ಎಚ್.ಕೆ.ಪಾಟೀಲರಿಗೆ ಎಲ್ಲ ರೀತಿಯ ಅರ್ಹತೆಗಳಿದ್ದು ಅವರಿಗೆ ಆ ಸ್ಥಾನ ಬೇಗ ಸಿಗಲಿ, ಅದಕ್ಕೆ ಅವರ ಸಹೋದರ ಡಿ.ಆರ್. ಪಾಟೀಲರ ಶ್ರಮಿಸಿದ ಬದುಕು, ಸಾರ್ವಜನಿಕರ ಸೇವೆ ಆದರ್ಶ ಪ್ರಾಯದ ಜೀವನ ಸಹಕಾರಿಯಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಡಿ.ಆರ್.ಪಾಟೀಲರ ಆತ್ಮೀಯರು ಪ್ರಮೋದ ಹೆಗಡೆ ತಿಳಿಸಿದ್ದಾರೆ.
ಬಿಜೆಪಿ ಕಾಲಾವಧಿಯಲ್ಲಿ 4 ಸಾವಿರ ವಕ್ಫ್ ಖಾತೆ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ
ಗದಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲವಧಿಯಲ್ಲಿಯೇ 4 ಸಾವಿರ ವಕ್ಫ್ ಖಾತೆ ಬದಲಾಗಿವೆ. ಈಗಹೋರಾಟಮಾಡುತ್ತಿರುವವರು ಆಗ ಎಲ್ಲಿ ಹೋಗಿದ್ದರು? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು ನಡೆಸುತ್ತಿರುವ ಹೋರಾಟ ಇದಾಗಿದೆ. ವಕ್ಫ್ ಬಗ್ಗೆ ಮಾತನಾಡುತ್ತಾ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಜನರನ್ನು ಯಾಮಾರಿಸಲು ಮಾಡುತ್ತಿರುವ ಹೋರಾಟವಾಗಿದೆ. ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಜನತೆ ತೋರುತ್ತಿರುವ ಪ್ರೀತಿ ಅಭಿಮಾನ ಸಹಿಸಲಾಗದೇ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಬಫರ್ ರೋನ್ ತಗ್ಗಿಸುವ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಫಾರೆಸ್ಟ್ ಮಿತಿಯಿಂದ ಎಷ್ಟು ಬಫರ್ ಇರಬೇಕು ಎನ್ನುವುದನ್ನು ಚರ್ಚಿಸಬೇಕಿದೆ. ಫಾರೆಸ್ಟ್ ಗಡಿದಾಟಿ ಎಷ್ಟು ವಿಸ್ತೀರ್ಣದಲ್ಲಿ ಬಫರ್ ಇರಬೇಕು ಎನ್ನುವ ವಿಷಯದಲ್ಲಿ ಕೇಂದ್ರ ಸರ್ಕಾರ ಹೇಳಿರುವಂತೆ ಕನಿಷ್ಠ ಒಂದು ಕಿಲೋ ಮೀಟರ್ ಇರಬೇಕು. ಫಾರೆಸ್ಟ್ ಜಮೀನು ಮೀರಿ ರೈತರ ಜಮೀನಲ್ಲಿ ಎಷ್ಟು ಬಫರ್‌ನ್ ಮಾಡಬೇಕು ಎನ್ನುವ ವಿಷಯದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಇಲಾಖೆಯ ಕಾನೂನು, ಸುಪ್ರೀಂಕೋರ್ಟ್ ರೂಲಿಂಗ್ ಮೂಲಕ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯರ ಭಾವನೆಗೂ ಮನ್ನಣೆ ಕೊಡಲು ಸರ್ಕಾರ ಸಿದ್ದವಿದೆ. ಖಾಸಗಿ ಜಮೀನಿನಲ್ಲಿ ಬಫರ್ ಝನ್ ಮಾಡಿದರೆ ಮೊಟಕುಗೊಳಿಸಿದಂತೆ ಆಗುತ್ತದೆ. ನಾಳೆ ಅವರು ಮನೆ ಕಟ್ಟಬೇಕಾದರೂ ಕೆಲ ನಿಯಮ ಅನ್ವಯ ತೊಂದರೆಯಾಗುತ್ತದೆ. ಈ ಕುರಿತು ಅರಣ್ಯ ಸಚಿವರು ತೀರ್ಮಾನ ಮಾಡುತ್ತಾರೆ. ನಾವೂ ಚರ್ಚೆ ಮಾಡುತ್ತೇವೆ ಎಂದರು.