1 ರೂ ಆಸೆ ತೋರಿಸಿ ಮಗು ಕೊಂದ ಪಾಪಿ!
1 ರೂ ಆಸೆ ತೋರಿಸಿ ಮುಗ್ದ ಮಗು ಕೊಲೆ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕು! ಮಗು ಕೊಂದು ಪರಾರಿಯಾದ ಪರಗೊಂಡ ಜಕಾತಿ! ಆರೋಪಿ ಬಂಧನಕ್ಕೆ ಜಾಲ ಬೀಸಿದ ಪೊಲೀಸರು
ಬಾಗಲಕೋಟೆ(ಆ.4): ನಾಲ್ಕು ವರ್ಷದ ಬಾಲಕನಿಗೆ ಒಂದು ರುಪಾಯಿ ಆಸೆ ತೋರಿಸಿ ರಸ್ತೆ ಬದಿಯಿದ್ದ ಕಬ್ಬಿನ ತೋಟಕ್ಕೆ ಕರೆದುಕೊಂಡು ಕುತ್ತಿಗೆ, ಗಲ್ಲ, ಮರ್ಮಾಂಗ ಕುಯ್ದು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ- ಬನಹಟ್ಟಿ ತಾಲೂಕಿನಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಬಂಡಿಗಣಿ ಗ್ರಾಮದ ವಿಠ್ಠಲ ಮಂದಿರ ಹತ್ತಿರವಿರುವ ಯಲ್ಲಪ್ಪ ಅಮಜವ್ವಗೋಳ ಎಂಬಾತನ ಪುತ್ರ ಮುತ್ತಪ್ಪ ಹತ್ಯೆಯಾದ ಬಾಲಕ. ಆರೋಪಿತನಾದ ಸಾಬು ಪರಗೊಂಡ ಜಕಾತಿ ಅಲಿಯಾಸ್ ಕಟಗೇರಿ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ.
ಸಾವಿಗೀಡಾದ ಮಗು ಮುತ್ತಪ್ಪ ಯಲ್ಲಪ್ಪ ಅಮಜವ್ವಗೋಳ ಎಂದಿನಂತೆ ಶುಕ್ರವಾರ ಬೆಳಗ್ಗೆ ತಮ್ಮ ಮನೆಯ ಸಮೀಪದಲ್ಲಿರುವ ಅಂಗನವಾಡಿಗೆ ತೆರಳಿದ್ದಾನೆ. ಮಧ್ಯಾಹ್ನ ೪ ಗಂಟೆ ಸುಮಾರಿಗೆ ಮರಳಿ ಮನೆಗೆ ಬರುವಾಗ ತೋಟದ ರಸ್ತೆಯಲ್ಲಿ ಆರೋಪಿ ಸಾಬು ಪರಗೊಂಡ ಜಕಾತಿ ಮುತ್ತಪ್ಪನಿಗೆ ಒಂದು ರುಪಾಯಿ ಆಸೆ ತೋರಿಸಿ ಬದಿಯಿರುವ ಕಬ್ಬಿನ ತೋಟಕ್ಕೆ ಕರೆದೊಯ್ದು ಹರಿತ ಆಯುಧದಿಂದ ಮರ್ಮಾಂಗ ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಮೃತ ಮಗುವಿನ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಗು ಸಂಜೆ ೫ ಗಂಟೆಯಾದರೂ ಅಂಗನವಾಡಿಯಿಂದ ಮನೆಗೆ ವಾಪಸಾಗಿಲ್ಲ ಎಂದು ಪೋಷಕರು ಮಗು ಹೋದ ಮಾರ್ಗದಲ್ಲಿಯೇ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ಮಗುವಿನ ಚಡ್ಡಿ ಸಿಕ್ಕಿದೆ. ನಂತರ ಎಲ್ಲ ಕಡೆ ಶೋಧ ನಡೆಸಿದ್ದಾರೆ. ಆದರೆ, ಶುಕ್ರವಾರ ರಾತ್ರಿಯಾದರೂ ಮಗು ಸಿಕ್ಕಿರಲಿಲ್ಲ.
ನಂತರ ಇಂದು ಬೆಳಗ್ಗೆ ಅನುಮಾನಗೊಂಡು ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಕಬ್ಬಿನ ಗದ್ದೆಗೆ ಹೋದಾಗ ಮಗುವಿನ ಮರ್ಮಾಂಗ, ಗಲ್ಲ, ಕುತ್ತಿಗೆ ಕುಯ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಮಗುವನ್ನು ನಿಧಿಗಾಗಿ ಹತ್ಯೆ ಮಾಡಲಾಗಿದೆಯೇ ಅಥವಾ ವೈಷಮ್ಯದ ಹಿನ್ನೆಲೆಯಲ್ಲಿ ಈ ರೀತಿಯಾಗಿ ಹತ್ಯೆ ಮಾಡಿದರೆ ಎಂಬ ಕಾರಣ ಇನ್ನೂ ಸಿಕ್ಕಿಲ್ಲ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪೊಲೀಸ್ ವಿಭಾಗಾಧಿಕಾರಿ ರಾಮನಗೌಡ ಹಟ್ಟಿ, ಸಿಪಿಐ ಎಸ್.ಬಿ. ಮಂಟೂರ, ಠಾಣಾಕಾರಿ ಎಸ್.ಎಂ. ಅವಜಿ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.