ಮಂಡ್ಯ(ಏ.08): ನಾಗಮಂಗಲ ಪಟ್ಟಣದ 12, 14, 15 ಮತ್ತು 16ನೇ ವಾರ್ಡ್‌ಗಳ ಎಲ್ಲ ಪ್ರದೇಶಗಳನ್ನು ಕೋವಿಡ್‌ -19 ಕಂಟೈನರ್‌ ಜೋನ್‌(ನಿಯಂತ್ರಿತ ಪ್ರದೇಶ) ಹಾಗೂ ಪಟ್ಟಣದ ಸುತ್ತಮುತ್ತಲಿನ 3 ಕಿ.ಮೀ.ವ್ಯಾಪ್ತಿಯನ್ನು ಬಫರ್‌ ಜೋನ್‌ ಪ್ರದೇಶವೆಂದು ಘೋಷಿಸಿ ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಮಂಗಳವಾರ ಆದೇಶ ಹೊರಡಿಸಿದರು.

ದೆಹಲಿಯ ನಿಜಾಮುದ್ದೀನ್‌ ಸಭೆಯಲ್ಲಿ ಪಾಲ್ಗೊಂಡ 10ಮಂದಿ 10 ದಿನಗಳ ಕಾಲ ಪಟ್ಟಣದ ಹನೀಫ್‌ ಮಸೀದಿಯಲ್ಲಿ ವಾಸ್ತವ್ಯ ಹೂಡಿ ಧರ್ಮಪ್ರಚಾರ ನಡೆಸಿದ್ದು, ಈ ವೇಳೆ ಪಟ್ಟಣದ 24ಮಂದಿ ಇವರ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್ ಸಚಿವರಿಂದಲೇ ಶುರುವಾಯ್ತು ರಕ್ತದಾನ

ಈ ಹಿನ್ನಲೆಯಲ್ಲಿ ಈ ಎಲ್ಲ 24ಮಂದಿಯನ್ನು ಈಗಾಗಲೇ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮುನ್ನೆಚ್ಚರಿಕೆಯಾಗಿ ಪಟ್ಟಣದ 12, 14, 15 ಮತ್ತು 16ನೇ ವಾರ್ಡ್‌ಗಳ ಎಲ್ಲ ಪ್ರದೇಶಗಳನ್ನೂ ಕೋವಿಡ್‌ -19 ಕಂಟೈನರ್‌ ಜೋನ್‌ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ಮನೆ ಮನೆ ಸಮೀಕ್ಷೆ,ಆರೋಗ್ಯ ತಪಾಸಣೆ:

ಕಂಟೈನ್ಮೆಂಟ್‌ ಜೋನ್‌ ಎಂದು ಘೋಷಣೆಯಾಗಿರುವ ಪಟ್ಟಣದ 12,14,15 ಮತ್ತು 16ನೇ ವಾರ್ಡ್‌ಗಳಲ್ಲಿನ ಪ್ರತಿ ಮನೆಮನೆ ಸಮೀಕ್ಷೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದಕ್ಕಾಗಿ ತಲಾ ನಾಲ್ಕು ಮಂದಿಯ 25 ತಂಡಗಳನ್ನು ರಚಿಸಲಾಗಿದೆ. ಆರೋಗ್ಯ ತಪಾಸಣೆ ವೇಳೆ ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಅವರನ್ನು ಈ ಪ್ರದೇಶದಲ್ಲಿಯೇ ತಾತ್ಕಾಲಿಕವಾಗಿ ತೆರೆದಿರುವ ಆರೋಗ್ಯ ಉಪಕೇಂದ್ರಗಳಿಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗುತ್ತಿದೆ,

ಹದ್ದಿನಕಣ್ಣಿಟ್ಟಿರುವ ಪೊಲೀಸರು

ಕಂಟೈನ್ಮೆಂಟ್‌ ಜೋನ್‌ ಎಂದು ಘೋಷಣೆಯಾಗಿರುವ ಪಟ್ಟಣದ 12,14,15 ಮತ್ತು 16ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಯಾವುದೇ ಸಣ್ಣಪುಟ್ಟಅಹಿತಕರ ಘಟನೆಗಳು ಸಂಭವಿಸಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕೆಯಾಗಿ ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿದೆ. ಈ ಪ್ರದೇಶದ ಜನರು ಅನಗತ್ಯವಾಗಿ ಮನೆಯಿಂದ ಆಚೆಬಂದು ರಸ್ತೆಯಲ್ಲಿ ಓಡಾಡಬಾರೆಂದು ಎಲ್ಲೆಡೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ತುರ್ತು- ಕಠಿಣ ಕ್ರಮಗಳು ಇಲ್ಲಿವೆ:

  • ಕಂಟೈನ್ಮೆಂಟ್‌ ಜೋನ್‌ನ ಎಲ್ಲಾ ಸ್ಥಳಗಳು ಪೊಲೀಸ್‌ ಪರಿವೀಕ್ಷಣೆಯಲ್ಲಿದ್ದು, ಈ ನಾಲ್ಕು ವಾರ್ಡ್‌ಗಳ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.
  • ಈ ಎಲ್ಲ ಪ್ರದೇಶಗಳಲ್ಲಿ ಪೊಲೀಸ್‌ ಕಣ್ಗಾವಲು ಹಾಕಲಾಗಿದೆ. ಯಾವುದೇ ವಾಹನಗಳು ಅನುಮತಿಯಿಲ್ಲದೆ ಸಂಚಾರ ಮಾಡುವುದನ್ನು ನಿಷೇಧಿಸಲಾಗಿದೆ.
  • ತುರ್ತು ಪರಿಸ್ಥಿತಿ ಮತ್ತು ಅತ್ಯಗತ್ಯ ಸೇವೆ ಹೊರತಾಗಿ ಬೇರೆ ಯಾವುದೇ ಕಾರಣಕ್ಕೂ ಜನರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಕಂಟೈನ್ಮೆಂಟ್‌ ಜೋನ್‌ನ ನಾಲ್ಕು ವಾರ್ಡ್‌ಗಳ ಎಲ್ಲ ಪ್ರದೇಶದ ಸ್ಥಳಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್‌ ಮಾಡಿದ್ದಾರೆ.