Mysuru : JDS-BJP ಮೈತ್ರಿ- ನಾಲ್ಕು ಸ್ಥಾನಗಳಿಗೆ ಇನ್ನೂ ನಡೆಯದ ಚುನಾವಣೆ!
ಮೈಸೂರು ನಗರಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ ಇನ್ನೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಆಡಳಿತರೂಢ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹಗ್ಗಜಗ್ಗಾಟ ಇದಕ್ಕೆ ಕಾರಣ.
ಮಹೇಂದ್ರ ದೇವನೂರು
ಮೈಸೂರು(ಅ.26): ಮೈಸೂರು ನಗರಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ ಇನ್ನೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಆಡಳಿತರೂಢ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹಗ್ಗಜಗ್ಗಾಟ ಇದಕ್ಕೆ ಕಾರಣ.
ಕಾಂಗ್ರೆಸ್ (Congress) ಜತೆಗಿನ ಹೊಂದಾಣಿಕೆ ಮುರಿದು ಬಿದ್ದ ಬೆನ್ನಲ್ಲಿಯೇ ಬಿಜೆಪಿ (BJP) ಜೊತೆ ಸಖ್ಯ ಬೆಳೆಸಿದ ಜೆಡಿಎಸ್ ಸ್ವಯಂ ಕೃತ ಅಪರಾಧದಿಂದ ಉಪ ಮೇಯರ್ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ನಾಲ್ಕೂ ಸ್ಥಾಯಿ ಸಮಿತಿಯು ತನಗೆ ಬೇಕು ಎಂಬ ಬಿಗಿ ಪಟ್ಟಿನಲ್ಲಿದ್ದರೆ, ಇತ್ತ ಬಿಜೆಪಿಯಲ್ಲಿ ಇದು ಇನ್ನೂ ಬಗೆಹರಿಯದ ಕಗ್ಗಂಟಾಗಿದೆ.
ಜೆಡಿಎಸ್‌ಗೆ ಉಪ ಮೇಯರ್ ಸ್ಥಾನವನ್ನು ಬಿಜೆಪಿ ತಪ್ಪಿಸಿಲ್ಲ. ಬದಲಿಗೆ ತಾನೇ ಮಾಡಿದ ತಪ್ಪಿನಿಂದಾಗಿ ಉಪ ಮೇಯರ್ ಸ್ಥಾನವನ್ನು ಜೆಡಿಎಸ್ ಕಳೆದುಕೊಳ್ಳಬೇಕಾಯಿತು. ಇದರ ಪರಿಣಾಮ ಉಪ ಮೇಯರ್ ಸ್ಥಾನವೂ ಬಿಜೆಪಿ ಪಾಲಾಯಿತು. ಈಗ ಯಾವುದೇ ಅಧಿಕಾರವಿಲ್ಲದೆ ಬಿಜೆಪಿಗೆ ಬೆಂಬಲ ನೀಡಿ ಕುಳಿತಿರುವ ಜೆಡಿಎಸ್, ಎಲ್ಲಾ ನಾಲ್ಕು ಸ್ಥಾಯಿ ಸಮಿತಿಯನ್ನು ಅಧ್ಯಕ್ಷ ಸ್ಥಾನವನ್ನು ತನಗೆ ಬೇಟ್ಟುಕೊಡಬೇಕು ಎಂಬ ಬಿಗಿ ಪಟ್ಟು ಹಿಡಿದಿದೆ.
ನಾವು ಮತ್ತು ಜೆಡಿಎಸ್ ತಲಾ ಎರಡೆರಡು ಸ್ಥಾಯಿ ಸಮಿತಿ ಸ್ಥಾನವನ್ನು ಹಂಚಿಕೆ ಮಾಡಿಕೊಳ್ಳುವುದು ಒಳಿತು ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ. ಆದರೆ ಜಿಲ್ಲೆಯ ಪ್ರಮುಖ ನಾಯಕರೊಬ್ಬರು, ನಮ್ಮಿಂದ ಜೆಡಿಎಸ್‌ಗೆ ಅನ್ಯಾಯ ಆಗುವುದು ಬೇಡ, ನಾವು ಮಾತಿಗೆ ತಪ್ಪಿದ್ದಾರೆ ಎಂಬ ಆರೋಪದಿಂದ ಮುಕ್ತವಾಗಲು ನಾಲ್ಕೂ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟುಕೊಡೋಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಪಕ್ಷದಲ್ಲಿನ ಕಾರ್ಯಕರ್ತರು ಮತ್ತು ಇತರ ನಾಯಕರಲ್ಲಿ ಸ್ವಲ್ಪಮಟ್ಟಿನ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಜೆಡಿಎಸ್‌ಗೆ ನಾಲ್ಕೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಮಾತುಕೊಟ್ಟಿರಲಿಲ್ಲ. ಬದಲಿಗೆ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನಷ್ಟೇ ಹಂಚಿಕೊಳ್ಳಲು ಮಾತಾಗಿತ್ತು. ಅದರಂತೆ ಬಿಜೆಪಿಯವರು ಜೆಡಿಎಸ್‌ಗೆ ಬೆಂಬಲ ನೀಡಲು ಸಿದ್ಧರಿದ್ದರು. ಆದರೆ ಉಪ ಮೇಯರ್ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ನಾಮಪತ್ರದೊಡನೆ ಜಾತಿ ಪ್ರಮಾಣ ಪತ್ರವನ್ನು ನೀಡದೆ ಅಸಿಂಧುವಾದ ಹಿನ್ನೆಲೆಯಲ್ಲಿ ಉಪ ಮೇಯರ್ ಸ್ಥಾನ ಬಿಜೆಪಿಗೆ ಒಲಿಯಿತು.
ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯದಿರುವುದಕ್ಕೆ ದಸರಾ ಕೆಲಸದ ಒತ್ತಡದ ಜೊತೆಗೆ ಹೊಂದಾಣಿಕೆಯ ಕಾರಣಗಳಿವೆ. ಆದ್ದರಿಂದ ದೀಪಾವಳಿ ಮುಗಿಯುತ್ತಿದ್ದಂತೆಯೇ ಉಭಯ ಪಕ್ಷಗಳ ನಾಯಕರು ಸೇರಿ ಅಧಿಕಾರ ಹಂಚಿಕೆ ಕುರಿತು ಸಮಾಲೋಚಿಸಲು ಮುಂದಾಗಬೇಕು ಎಂಬ ಒತ್ತಾಯ ಸದಸ್ಯರಲ್ಲಿ ವ್ಯಕ್ತವಾಗಿದೆ.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳು ಇವೆ. ಇದರಲ್ಲಿ ಜೆಡಿಎಸ್ ನಾಲ್ಕು ಸ್ಥಾನ ಕೊಡುವಂತೆ ಬಿಜೆಪಿ ನಾಯಕರ ಮೇಲೆ ಒತ್ತಡ ಏರುತ್ತಿದ್ದಾರೆ. ಆದರೆ ಬಿಜೆಪಿ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಏಕೆಂದರೆ ತೆರಿಗೆ, ಹಣಕಾಸು, ಲೆಕ್ಕಪತ್ರ ಸಮಿತಿಯು ತನ್ನ ಬಳಿಯೇ ಇದ್ದರೆ ಒಂದಷ್ಟುಆಡಳಿತಾತ್ಮಕ ಅನುಕೂಲವಾಗಲಿದೆ ಎಂಬುದು ಬಿಜೆಪಿ ವಾದ.
ಸ್ಥಾಯಿ ಸಮಿತಿ ಚುನಾವಣೆ ಸಂಬಂಧ ಉಸ್ತುವಾರಿ ಸಚಿವರೊಡನೆ ಮಾತನಾಡಿದ್ದೇನೆ. ನಾಲ್ಕೂ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ನೀಡಬೇಕು ಎಂದು ಕೇಳಿದ್ದೇನೆ. ದೀಪಾವಳಿ ನಂತರ ಚುನಾವಣೆ ನಡೆಸೋಣ ಎಂದಿದ್ದಾರೆ.
- ಕೆ.ಟಿ. ಚಲುವೇಗೌಡ, ಜೆಡಿಎಸ್ ನಗರಾಧ್ಯಕ್ಷರು