ಬೆಂಗಳೂರು (ಫೆ.23): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಚಾಲನಾ ಸಿಬ್ಬಂದಿಯನ್ನು ಮಾರ್ಗಗಳಿಗೆ ನಿಯೋಜಿಸುವಾಗ ಪಾರದರ್ಶಕತೆ ಕಾಯ್ದುಕೊಳ್ಳಲು ಕೊರೋನಾ ಪೂರ್ವದ ಮಾದರಿಯಲ್ಲಿ ನಾಲ್ಕು ಪಾಳಿಯ ಕರ್ತವ್ಯ ನಿಯೋಜನಾ ಪದ್ಧತಿ (ಡ್ಯೂಟಿ ರೋಟಾ ಸಿಸ್ಟಂ) ಜಾರಿಗೆ ಮುಂದಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದ್ದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇದರಿಂದ ನಾಲ್ಕು ಪಾಳಿ ಕರ್ತವ್ಯ ತೆಗೆದು ಕೇವಲ ಎರಡು ಪಾಳಿ ಮಾತ್ರ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಎಲ್ಲ ಚಾಲನಾ ಸಿಬ್ಬಂದಿಗೂ ಕರ್ತವ್ಯ ನಿಯೋಜಿಸಲು ಆಗುತ್ತಿರಲಿಲ್ಲ. ಇದೀಗ ಬಿಎಂಟಿಸಿ ಕೊರೋನಾ ಪೂರ್ವ ಮಾದರಿಯಲ್ಲಿ ನಾಲ್ಕು ಪಾಳಿ ಕರ್ತವ್ಯ ನಿಯೋಜನಾ ಪದ್ಧತಿ ಜಾರಿಗೆ ಮುಂದಾಗಿದೆ.

ಸಾರಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌..! .

ಈ ಪದ್ಧತಿ ಅಳವಡಿಸಿಕೊಳ್ಳಲು ಡಿಪೋಗಳಲ್ಲಿ ರಾತ್ರಿ ಪಾಳಿ, ವಸತಿ ಪಾಳಿ, ಸಾಮಾನ್ಯ ಪಾಳಿ ಹಾಗೂ ರಾತ್ರಿ ಸೇವೆ ಎಂದು ಪಾಳಿವಾರು ನಾಲ್ಕು ಪಟ್ಟಿಮಾಡಿಕೊಳ್ಳಬೇಕು. ಚಾಲನಾ ಸಿಬ್ಬಂದಿಯ ಸೇವಾ ಹಿರಿತನದ ಅನುಸಾರ ಜೇಷ್ಠತಾ ಪಟ್ಟಿಸಿದ್ಧಪಡಿಸಿ, ಅವರ ಇಚ್ಛೆ ಮತ್ತು ಮಾರ್ಗ ಲಭ್ಯತೆಗೆ ಅನುಗುಣವಾಗಿ ಕರ್ತವ್ಯಕ್ಕೆ ನಿಯೋಜಿಸಬೇಕು. ಚಾಲಕಂ ಕಂ ನಿರ್ವಾಹಕ ಒಂದು ವೇಳೆ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅವರನ್ನು ಚಾಲಕರ ಜೇಷ್ಠತಾ ಪಟ್ಟಿಗೆ ಸೇರಿಸಿಕೊಳ್ಳಬೇಕು.

ಮಹಿಳಾ ನಿರ್ವಾಹಕಿಯರನ್ನು ಕರ್ತವ್ಯಕ್ಕೆ ನಿಯೋಜಿಸುವಾಗ ಮೊದಲ ಪಾಳಿಗೆ ಆದ್ಯತೆ ನೀಡಬೇಕು. ಅದರಲ್ಲೂ ಗರ್ಭಿಣಿಯರು, 55 ವರ್ಷ ದಾಟಿದ ನಿರ್ವಾಹಕಿಯರು, ಎರಡು ವರ್ಷಕ್ಕಿಂತ ಚಿಕ್ಕವಯಸ್ಸಿನ ಮಕ್ಕಳಿರುವ ನಿರ್ವಾಹಕಿಯರಿಗೆ ಆದ್ಯತೆ ನೀಡಬೇಕು. ಕೌನ್ಸೆಲಿಂಗ್‌ ವೇಳೆ ಸೂಕ್ತ ಮಾರ್ಗ ಆಯ್ಕೆ ಮಾಡಿಕೊಳ್ಳಲು ಅನುವಾಗುವಂತೆ ಕೌನ್ಸೆಲಿಂಗ್‌ಗೂ ಮೂರು ದಿನ ಮುಂಚಿತವಾಗಿ ಘಟಕಗಳ ಒಟ್ಟು ಬಸ್‌ಗಳ ವಿವರ ಹಾಗೂ ಚಾಲನಾ ಸಿಬ್ಬಂದಿ ಜೇಷ್ಠತೆ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ಡಿಪೋಗಳಿಗೆ ನೀಡಲಾಗಿದೆ.