ಬೆಂಗಳೂರು [ಜು.1] :  ಹತ್ತು ರುಪಾಯಿ ಬೆಲೆಯ ನೋಟುಗಳನ್ನು ಕೆಳಗೆ ಬೀಳಿಸಿದ ದುಷ್ಕರ್ಮಿಗಳು ಕಾರು ಚಾಲಕನ ಗಮನವನ್ನು ನೋಟಿನ ಕಡೆಗೆ ಸೆಳೆದು 4 ಲಕ್ಷ ರು. ಇದ್ದ ಬ್ಯಾಗ್‌ ಕದ್ದೊಯ್ದಿರುವ ಘಟನೆ ಸಿ.ಟಿ.ಮಾರ್ಕೆಟ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ರಿಚ್ಮಂಡ್‌ ಟೌನ್‌ ನಿವಾಸಿ ಮಹಮದ್‌ ಖಲೀಲ್‌ ಹಣ ಕಳೆದುಕೊಂಡವರು.

ಶನಿವಾರ ಸಂಜೆ 8ರ ಸುಮಾರಿಗೆ ಖಲೀಲ್‌ ಬಿವಿಕೆ ಅಯ್ಯಂಗಾರ್‌ ರಸ್ತೆಯ ಗಣೇಶ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ತಮ್ಮ ಸ್ನೇಹಿತರೊಬ್ಬರ ಜತೆ ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿಗೆಂದು ಹೋಗಿದ್ದರು. ವಾಪಸ್‌ ಹೋಗಲು ಖಲೀಲ್‌ ಕಾರು ಹತ್ತಿದ್ದರು. ಈ ವೇಳೆ ಖಲೀಲ್‌ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಬಂದಿದ್ದ ಮೂವರು ಅಪಚಿತರು ಮುಂದೆ ನಮ್ಮ ಕಾರಿದ್ದು, ಹಿಂದಿರುವ ನಿಮ್ಮ ಕಾರು ತೆರವು ಮಾಡಿದರೆ ನಮಗೆ ಅನುಕೂಲವಾಗುತ್ತದೆ ಎಂದಿದ್ದಾನೆ.

ಖಲೀಲ್‌ ಕಾರು ತೆಗೆಯುವಾಗ 10 ರು. ಮುಖಬೆಲೆಯ ನಾಲ್ಕು ನೋಟುಗಳನ್ನು ರಸ್ತೆಯಲ್ಲಿ ಬೀಳಿಸಿ ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದದು ಹೇಳಿದ್ದಾರೆ. ಆದರೂ ಖಲೀಲ್‌ ಅವರ ಮಾತಿಗೆ ಕಿವಿ ಕೊಡದೆ ಕಾರು ಹಿಂದಕ್ಕೆ ತೆಗೆಯುವ ಪ್ರಯತ್ನದಲ್ಲಿದ್ದಾಗಲೇ ಒಬ್ಬಾತ ತಾನೇ ಕೆಳಗೆ ಬಿದ್ದಿದ್ದ ಹಣ ತೆಗೆದುಕೊಡಲು ಮುಂದಕ್ಕೆ ಹೋಗಿದ್ದಾನೆ. ಆ ವೇಳೆ ಕಾರನ್ನು ನಿಲ್ಲಿಸಿದ ಚಾಲಕ ಹಣ ತೆಗೆದುಕೊಡುತ್ತಿದ್ದವನ ಬಳಿ ನೋಡುತ್ತಿದ್ದಾಗ ಮತ್ತೊಬ್ಬ ಕಾರಿನ ಹಿಂಬಾಗಿಲು ತೆರೆದು ಹಣವಿದ್ದ ಬ್ಯಾಗ್‌ ಸಮೇತ ಪರಾರಿಯಾಗಿದ್ದಾನೆ.

ಖಲೀಲ್‌ ಕಾರಿನಿಂದ ಕೆಳಗೆ ಇಳಿಯುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಸ್ಥಳದಲ್ಲಿನ ಸಿಸಿವಿಟಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.