ಸಕ್ರೆಬೈಲು ಶಿಬಿರದಲ್ಲಿ ಒಂದೇ ವರ್ಷದಲ್ಲಿ 4 ಆನೆಗಳ ಸಾವು
ಸಕ್ರೆಬೈಲು ಆನೆ ಶಿಬಿರದಲ್ಲಿ ಒಂದೇ ವರ್ಷದಲ್ಲಿ ನಾಲ್ಕು ಆನೆಗಳು ಸಾವಿಗೀಡಾಗಿವೆ. ಅಲ್ಲದೇ ಈ ಎಲ್ಲಾ ಆನೆಗಳು ಮಧ್ಯ ಹಾಗೂ ಎಳೆ ವಯಸ್ಸಿನವಾಗಿವೆ.
ಗೋಪಾಲ್ ಯಡಗೆರೆ
ಶಿವಮೊಗ್ಗ [ಆ.26]: ರಾಜ್ಯದ ಪ್ರಮುಖ ಆನೆ ತರಬೇತಿ ಕೇಂದ್ರಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರದಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ನಿರಂತರ ಗಜಪಡೆಯ ಸಾವು ಇಲಾಖೆಯಲ್ಲಿ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲಿಯೂ ತೀವ್ರ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೆರೆಯಾಗಿ ಸಕ್ರೆಬೈಲು ಬಿಡಾರದಲ್ಲಿ ನೆಲೆ ಕಂಡುಕೊಂಡಿದ್ದ ಆನೆ ನಾಗಣ್ಣ (25) ಶುಕ್ರವಾರ ಸಂಜೆ ಅನಾರೋಗ್ಯ ಕಾರಣದಿಂದ ಮೃತಪಟ್ಟಿದೆ. ಇದರೊಂದಿಗೆ ಕಳೆದ ಕೆಲ ವರ್ಷಗಳಿಂದೀಚೆಗೆ 9 ಆನೆಗಳು ಮೃತಪಟ್ಟಿವೆ. ಈ ವರ್ಷದಲ್ಲಿಯೇ ನಾಲ್ಕು ಆನೆಗಳು ಸಾವನ್ನಪ್ಪಿವೆ. ಸರಣಿ ಸಾವಿನಲ್ಲಿ ವಯೋಸಹಜ ಸಾವಿಗಿಂತ ಎಳೆಯ ಮತ್ತು ಮಧ್ಯ ವಯಸ್ಕ ಆನೆಗಳ ಸಾವು ಆತಂಕಕ್ಕೆ ಕಾರಣವಾಗುತ್ತಿದೆ. ಸದ್ಯ 24 ಆನೆಗಳು ಬಿಡಾರದಲ್ಲಿ ಉಳಿದಿವೆ.
ವೃಯೋ ಸಹಜತೆಯಿಂದಲ್ಲದೆ, ತೀವ್ರ ಅನಾರೋಗ್ಯದ ಕಾರಣದಿಂದ ಹೆಚ್ಚು ಸಾವುಗಳು ಸಂಭವಿಸುತ್ತಿರುವುದರಿಂದ ಇಲ್ಲಿ ಆನೆಗಳ ಸಾಕಾಣಿಕೆಯ ಮೇಲೆ ಇಡಲಾಗುತ್ತಿರುವ ನಿಗಾ ಕಡಿಮೆಯಾಯಿತೇ ಎಂಬ ಅನುಮಾನ ಸೃಷ್ಟಿಸಿದೆ.
ಮಡಿಕೇರಿ: ಪ್ರವಾಹದಿಂದ ತತ್ತರಿಸಿದ ರೈತರಿಗೆ ಈಗ ಕಾಡಾನೆ ಉಪಟಳ
ಈ ಎಲ್ಲ ಸಾವಿಗೂ ಬಿಡಾರದ ಅಧಿಕಾರಿಗಳು ಮುಖ್ಯವಾಗಿ ಸೋಂಕು ಇದಕ್ಕೆ ಕಾರಣವೆನ್ನುತ್ತಾರೆ. ಅಧಿಕಾರಿಗಳು, ವೈದ್ಯರು ಮತ್ತು ಮಾವುತರ ನಡುವೆ ಸಮನ್ವಯದ ಕೊರತೆ ಇದೆ ಎನ್ನಲಾಗುತ್ತಿದೆ. ಮಾವುತರ ಸಲಹೆಗಳನ್ನು ಕಡೆಗಣಿಸುತ್ತಿರುವುದು, ಆಹಾರ ನೀಡಿಕೆಯಲ್ಲಿ ಪೌಷ್ಟಿಕತೆ ಕಾಯ್ದುಕೊಳ್ಳದಿರುವುದು ಹಾಗೂ ಆನೆಗಳ ಕರುಳು ಸೋಂಕಿಗೆ ಕಾರಣವಾಗುತ್ತಿರುವ ಅಂಶದ ಕುರಿತು ನಿರೀಕ್ಷಿತ ಮಟ್ಟದಲ್ಲಿ ಗಮನ ಹರಿಸದಿರುವುದು ಆನೆಗಳ ಸಾವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.