ಮಹದೇಶ್ವರ ಬೆಟ್ಟದಲ್ಲಿ ಈ 4 ದಿನ ದರ್ಶನವಿಲ್ಲ
ಪ್ರಸಿದ್ಧ ಮಹದೇಶ್ವರ ಬೆಟ್ಟದಲ್ಲಿ ಈ ನಾಲ್ಕು ದಿನಗಳ ಕಾಲ ಭಕ್ತರಿಗೆ ಪ್ರವೇಶ ಇರುವುದಿಲ್ಲ.
ಹನೂರು(ಚಾಮರಾಜನಗರ) (ಅ,15): ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೈ ಮಹದೇಶ್ವರ ಬೆಟ್ಟಮಾದಪ್ಪನ ದೇವಾಲಯಕ್ಕೆ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇರುವ ಕಾರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಅ.15 ಮತ್ತು 17, ಅ.25 ಮತ್ತು 27ರಂದು ಭಕ್ತರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಅ.15 ಮತ್ತು 16 ಮಾದಪ್ಪನಿಗೆ ಎಣ್ಣೆಮಜ್ಜನ ಹಾಗೂ ಅಮಾವಾಸ್ಯೆ ವಿಶೇಷ ಪೂಜೆಗಳು ಹಾಗೂ ಅ.25 ಮತ್ತು 26 ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯಕ್ತ ವಿಶೇಷ ಪೂಜೆಗಳು ಜರುಗಲಿವೆ.
ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಕಾರಣ ಕೊರೋನಾ ವಿರುದ್ಧ ಹೋರಾಡಲು ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಭಕ್ತರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.