ಬೀದರ್(ಜ.23): ಶತಮಾನದಷ್ಟು ಹಳೆಯದಾದ ನಗರದ ಮಂಗಲಪೇಟ್ ಮೆಥೋಡಿಸ್ಟ್ ಮಿಷನ್ ಆಸ್ಪತ್ರೆಯ ದುರಸ್ತಿ, ನವೀಕರಣಕೆ 4 ಕೋಟಿ ರು. ಅನುದಾನ ಒದಗಿಸುವಂತೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮನವಿಗೆ ಸಚಿವರು ಸ್ಪಂದಿಸಿ ಅನುದಾನ ಬಜೆಟ್‌ನಲ್ಲಿ ಕಾಯ್ದಿರಿಸಲು ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ. 

ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದು ಮಿಷನ್ ಆಸ್ಪತ್ರೆಯು ಇಲ್ಲಿನ ಜನರಿಗೆ ಒದಗಿಸಿದ ಆರೋಗ್ಯ ಸೇವೆ ಸ್ಮರಣೀಯವಾಗಿದೆ. ಈ ಆಸ್ಪತ್ರೆಯನ್ನು ಪೂರ್ಣ ನವೀಕರಣಗೊಳಿಸಿ ಮತ್ತೊಮ್ಮೆ ನಗರ, ಜಿಲ್ಲೆಯ ಜನರ ಆರೋಗ್ಯ ಸೇವೆಗೆ ಸಮರ್ಪಿಸುವ ಅಗತ್ಯವಿದೆ. ಲಕ್ಷಾಂತರ ಜನರಿಗೆ ಈ ಆಸ್ಪತ್ರೆ ಸೇವೆ ಒದಗಿಸಿದೆ. ಸಹಸ್ರಾರು ಉಚಿತ ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆದಿರುವುದು ದಾಖಲೆಯಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಿಷನ್ ಆಸ್ಪತ್ರೆ ಆರಂಭದ ಕುರಿತಾಗಿ ಬೆಂಗಳೂರಿನ ಬಿಷಪ್ ವಂದನೀಯ ಎನ್.ಎಲ್. ಕರಕರೆ ಅವರು ತಮಗೆ ಭೇಟಿಯಾಗಿ ಅನುದಾನಕ್ಕಾಗಿ ಮನವಿಯನ್ನು ಸಲ್ಲಿಸಿದ್ದಾರೆ, ಇದಕ್ಕೆ ಸುಮಾರು 6 ಕೋಟಿ ರು. ಗಳ ಅಗತ್ಯವಿದೆ. ಈ ಹಣದಲ್ಲಿ 2 ಕೋಟಿ ರು.ಗಳನ್ನು ತಾವು ಭರಿಸುವುದಾಗಿ ಬಿಷಪ್ ಎನ್.ಎಲ್. ಕರಕರೆ ಅವರು ಹೇಳಿದ್ದಾರೆ. ಹೀಗಾಗಿ ಉಳಿದ ಅಗತ್ಯವಿರುವ 4 ಕೋಟಿ ರು.ಗಳನ್ನು ಸರ್ಕಾರ ಒದಗಿಸಿ ಆಸ್ಪತ್ರೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಸೂರ್ಯಕಾಂತ ನಾಗಮಾರಪಳ್ಳಿ ಅವರ ಮನವಿಗೆ ಸ್ಪಂದಿಸಿರುವ ಸಚಿವ ಶ್ರೀರಾಮುಲು, ಜ. 22 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಮಿಷನ್ ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ನವೀಕರಣ ಮಾಡಲು ಸರ್ಕಾರದಿಂದ 4 ಕೋಟಿ ರು., ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ. 

ಈ ಮಧ್ಯ ಸಚಿವ ಶ್ರೀರಾಮುಲು ಅವರು ಸಿಎಂ ಅವರಿಗೂ ಈ ಕುರಿತು ಪತ್ರವನ್ನು ಬರೆದು, ಜನಾರೋಗ್ಯದ ದೃಷ್ಟಿಯಿಂದ ಮಿಷನ್ ಆಸ್ಪತ್ರೆಗೆ 2020-21 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ 4 ಕೋಟಿ ರು., ಅನುದಾನ ಕಾಯ್ದಿರಿಸುವಂತೆ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಬೀದರ್ ಜಿಲ್ಲೆಯ ಅತ್ಯಂತ ಹಳೆಯ ಆಸ್ಪತ್ರೆ ಇದಾಗಿದ್ದು, ನಗರದ ಶೇ. ೫೦ರಷ್ಟು ಜನ ಅಲ್ಲಿಯೇ ಜನಿಸಿದವರೆಂದರೆ ತಪ್ಪಾಗಲಿಕ್ಕಿಲ್ಲ. ನಾನೂ ಸಹ ಅಲ್ಲಿಯೇ ಜನ್ಮ ತಾಳಿದ್ದು. ಸರ್ಕಾರವು ಆದಷ್ಟು ಬೇಗ ಮಿಷನ್ ಆಸ್ಪತ್ರೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಸೂಕ್ತ ಅನುದಾನ ಒದಗಿಸಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.