ಪೊಲೀಸ್ ಅಧಿಕಾರಿ ಮೇಲೆಯೇ ವಾಹನ ಹಾಯಿಸಲು ಯತ್ನ: ಉದ್ಯಮಿ ಸೇರಿ ನಾಲ್ವರ ಸೆರೆ
ಜಗಳ ನಡೆಯುತ್ತಿದ್ದ ವೇಳೆ ಬುದ್ದಿವಾದ ಹೇಳಲು ಬಂದ ಪೊಲೀಸ್ ಅಧಿಕಾರಿಯನ್ನೇ ಹತ್ಯೆ ಮಾಡಲು ಯತ್ನಿಸಿದ್ದು ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಅಂಕೋಲಾ (ಮಾ.31): ಹಟ್ಟಿಕೇರಿಯ ಟೋಲ್‌ಗೇಟ್‌ನಲ್ಲಿ ಐಆರ್‌ಬಿ ಸಿಬ್ಬಂದಿ ಜೊತೆ ಜಗಳ ನಡೆಸಿ, ಈ ಕುರಿತು ಬುದ್ಧಿವಾದ ಹೇಳಲು ಬಂದ ಹೆಚ್ಚುವರಿ ಪೊಲೀಸ್ ವರಿಷ್ಠರ ಮೇಲೂ ಹಲ್ಲೆ ನಡೆಸಿ, ವಾಹನ ಚಲಾಯಿಸಲು ಯತ್ನಿಸಿದ ಉದ್ಯಮಿ ಮತ್ತು ಇತರೆ ಆರೋಪಿಗಳನ್ನು ಬಂಧಿಸಲಾಗಿದ್ದು, ಏ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಘಟನೆ ಕುರಿತ ವಿಡಿಯೋವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸೋಮವಾರ ರಾತ್ರಿ ಹಟ್ಟಿಕೇರಿ ಟೋಲ್‌ನಾಕಾದಲ್ಲಿ ಉದ್ಯಮಿ ಸುರೇಶ್ ಆರ್. ನಾಯಕ ಹಾಗೂ ಮೂವರು ಟೋಲ್ ಪಾವತಿ ಕುರಿತು ಜಗಳ ತೆಗೆದಿದ್ದು ಆಗ ಅದೇ ಮಾರ್ಗದಲ್ಲಿ ಬಂದ ಹೆಚ್ಚುವರಿ ಎಸ್ಪಿ ಎಸ್. ಭದ್ರಿನಾಥ, ಜಗಳ ಮಾಡಬೇಡಿ ಎಂದು ಬುದ್ಧಿ ಮಾತು ಹೇಳಿದ್ದರು. ಆದರೆ ಅವರ ಮೇಲೂ ತಂಡ ವಾಹನ ಹಾಯಿಸಲು ಯತ್ನಿಸಿತ್ತು. ನಂತರ ಆರೋಪಿಗಳಾದ ಸುರೇಶ್ ಆರ್. ನಾಯಕ, ಆತನ ಅಪ್ರಾಪ್ತ ಮಗ, ಬೊಮ್ಮಯ್ಯ ನಾಯಕ, ಸುರೇಶ್ ನಾಯಕ ಅವರು ಪರಾರಿಯಾಗಿದ್ದರು.
ಮಡಿಕೇರಿ; ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ತಿರುಗಿ ನಿಂತ ಕಾರು... ಜಸ್ಟ್ ಮಿಸ್! ...
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರವಾರದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ನಡು ರಸ್ತೆಯಲ್ಲಿ ಲಾಠಿ ರುಚಿ ತೋರಿಸುತ್ತ ಬಂಧಿಸಿ ಠಾಣೆಗೆ ತಂದಿದ್ದರು.
ವಿಡಿಯೋ ವೈರಲ್: ಹಟ್ಟಿಕೇರಿಯ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ಎಸ್ಪಿ ಮೇಲೆ ವಾಹನ ಹಾಯಿಸಲು ಯತ್ನಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಒಮ್ಮೆ ಪೊಲೀಸ್ ಅಧಿಕಾರಿ ಕಾಲಿಗೆ ವಾಹನದಿಂದ ಬಡಿದ ದೃಶ್ಯ, ಅದೇ ರೀತಿ ಪೊಲೀಸ್ ಅಧಿಕಾರಿ ವಾಹನ ನಿಲ್ಲಿಸುವಂತೆ ಹೇಳಿದರೂ ಮೈಮೇಲೆ ವಾಹನ ಚಲಾಯಿಸಲು ಮುಂದಾದ ಘಟನೆಗಳು ಟೋಲ್‌ನ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈಗ ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.