ಮಂಗಳೂರು(ಮೇ 21): ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ವಿಮಾನ ಬುಧವಾರ ಗಲ್‌್ಫನಿಂದ ವಯಾ ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.10ಕ್ಕೆ ತಲುಪಿತು. ಮಸ್ಕತ್‌ನಿಂದ ಸಂಜೆ 3 ಗಂಟೆ ಸುಮಾರಿಗೆ ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ 817 ವಿಮಾನ, ಸಂಜೆ 6.30ಕ್ಕೆ ಬೆಂಗಳೂರು ತಲುಪಿತು. ಅಲ್ಲಿಂದ ರಾತ್ರಿ 7.15ಕ್ಕೆ ಹೊರಟು 8.10ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.

ಈ ವಿಮಾನದಲ್ಲಿ ಒಟ್ಟು 178 ಪ್ರಯಾಣಿಕರ ಪೈಕಿ 115 ಮಂದಿ ಬೆಂಗಳೂರಿಗೆ ಹಾಗೂ 63 ಮಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಅವರೆಲ್ಲರನ್ನು ನಿಗದಿತ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಮಂಗಳೂರಲ್ಲಿ ಸುಗಮ ವ್ಯವಸ್ಥೆ

ಗಲ್ಫ್‌ನಿಂದ ಮಂಗಳೂರಿಗೆ ವಂದೇ ಭಾರತ್‌ ಮಿಷನ್‌ನ ಮೂರನೇ ಕಾರ್ಯಾಚರಣೆ ಇದಾಗಿದೆ. ಮೊದಲ ಕಾರ್ಯಾಚರಣೆಯಲ್ಲಾದ ಒಂದಷ್ಟುಲೋಪಗಳನ್ನು ಸರಿಪಡಿಸಿಕೊಂಡ ಬಳಿಕ 2 ಮತ್ತು 3ನೇ ಕಾರ್ಯಾಚರಣೆಯಲ್ಲಿ ಯಾನಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಮಾನ ನಿಲ್ದಾಣ ಹಾಗೂ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿತ್ತು.

ವಿಮಾನ ಮಂಗಳೂರಿನಲ್ಲಿ ಇಳಿದು ಏರೋಡ್ರಮ್‌ನಿಂದ ಆಗಮಿಸಿದ ಕೂಡಲೇ ಪ್ರಯಾಣಿಕರಿಗೆ ಮೊದಲಿಗೆ ಹಣ್ಣಿನ ಪೊಟ್ಟಣ ನೀಡಲಾಯಿತು. ಬಳಿಕ ಪ್ರಯಾಣಿಕರ ಥರ್ಮಲ್‌ ಸ್ಕಾ್ಯನಿಂಗ್‌ ನಡೆಸಲಾಯಿತು. ಅಲ್ಲಿಂದ ಮುಂದೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಪಿಪಿಇ ಕಿಟ್‌ ಧರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ಅಶಕ್ತರ ಲಗೇಜು ಸಾಗಿಸಲು ನೆರವಾದರು.

ಯುವತಿಗೆ ಕೊರೋನಾ: ತರಲಘಟ್ಟ ಗ್ರಾಮ ಸೀಲ್‌ಡೌನ್‌

ಇಮಿಗ್ರೆಷನ್‌ ಪ್ರಕ್ರಿಯೆ ಮುಕ್ತಾಯಗೊಳಿಸಿದ ಬಳಿಕ ಪ್ರಯಾಣಿಕರಿಗೆ ಆಹಾರ ಕಿಟ್‌ ನೀಡಲಾಯಿತು. ಅಲ್ಲಿಂದ ಬಸ್‌ಗಳ ಮೂಲಕ ಮಂಗಳೂರಿನಲ್ಲಿ ನಿಗದಿತ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಯಿತು. ಪ್ರೊಬೆಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಶಿಂಧೆ ವಿದೇಶಿ ಕನ್ನಡಿಗರ ಆಗಮನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಂಗಳೂರಿಗೆ ಆಗಮಿಸಿದ 63 ಮಂದಿ ಪ್ರಯಾಣಿಕರ ಕೋವಿಡ್‌ ಟೆಸ್ಟ್‌ ಗುರುವಾರ ನಡೆಯಲಿದೆ.