ಶಿವಮೊಗ್ಗ(ಜು.10): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಏರಿಕೆ, ಅದೇ ರೀತಿ ಕ್ವಾರಂಟೈನ್‌ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗುರುವಾರ 1 ವರ್ಷದ ಹೆಣ್ಣು ಹಾಗೂ 2 ವರ್ಷದ ಗಂಡು ಮಗು ಸೇರಿದಂತೆ 37 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆತಂಕಕಾರಿ ಸಂಗತಿಯೆಂದರೆ ಏಳು ಮಂದಿಗೆ ಸೋಂಕು ಹೇಗೆ ತಗುಲಿದೆ ಎಂಬುದು ಪತ್ತೆಯಾಗಿಲ್ಲ. ಇನ್ನು 12 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೋನಾ ತಗುಲಿದೆ. 8 ಮಂದಿ ಬೆಂಗಳೂರಿನಿಂದ ಹಿಂತಿರುಗಿದವರಾಗಿದ್ದಾರೆ. ಆಂಧ್ರಪ್ರದೇಶದಿಂದ ಜಿಲ್ಲೆಗೆ ಬಂದಿದ್ದ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. 9 ಮಂದಿಗೆ ಕೆಮ್ಮು, ಜ್ವರ, ಶೀತದ ಲಕ್ಷಣ ಕಂಡು ಬಂದಿದೆ. ತಪಾಸಣೆ ನಡೆಸಿದಾಗ ಕೊರೋನ ಇರುವುದು ಪತ್ತೆಯಾಗಿದೆ.

ಹೊಸನಗರ ತಾ ಗರ್ತಿಕೆರೆ ಸಮೀಪದ ಹಾಲಂದೂರು ಗ್ರಾಮದ ವ್ಯಕ್ತಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿಗೆ ಇವರು ಬೆಂಗಳೂರಿನಿಂದ ಹಿಂತಿರುಗಿದ್ದರು. ಗುರುವಾರ 37 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಹಿನ್ನೆಲೆಯಲ್ಲಿ ಸೋಂಕಿತರು ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲ ಪ್ರದೇಶ ಸೀಲ್‌ಡೌನ್‌ ಮಾಡಲಾಗಿದೆ.

ಗಾಂಧಿ ಬಜಾರಿನ ತುಳಜಾಭವಾನಿ ರಸ್ತೆ, ಹಳೆ ಅಂಚೆ ಕಚೇರಿ ರಸ್ತೆ, ಓಟಿ ರಸ್ತೆ, ಕಸ್ತೂರಬಾ ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ. ವಿನೋಬನಗರದ ನಿವಾಸಿಯೊಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಶರಾವತಿ ನಗರದ ಚಾನೆಲ್‌ ಹತ್ತಿರ 57 ವರ್ಷದ ವ್ಯಕ್ತಿಗೆ ಪಾಸಿಟಿವ್‌ ಕಂಡುಬಂದಿದೆ. ಶಿವಮೊಗ್ಗದ ಕುಂಬಾರಗುಂಡಿ ಏರಿಯಾದ 39 ವರ್ಷ ವಯೋಮಾನದ ವ್ಯಕ್ತಿಗೂ ಸೋಂಕು ತಗುಲಿದೆ.

ಕೊರೋನಾ ವಾರಿಯರ್ಸ್‌ ಜೀವಕ್ಕೆ ಬೆಲೆ ಇಲ್ವಾ? ಸಿಎಂ ಸಾಹೇಬ್ರೆ ಸ್ವಲ್ಪ ಈ ಸ್ಟೋರಿ ನೋಡಿ..!

ರಾಜೇಂದ್ರನಗರ 100ಅಡಿ ರಸ್ತೆ ಖಾಸಗಿ ಆಸ್ಪತ್ರೆಯೊಂದರ ಸಮೀಪದ 46 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ನ್ಯೂ ಮಂಡ್ಲಿ ಎರಡನೇ ಕ್ರಾಸ್‌ ನ ವ್ಯಕ್ತಿಯೋರ್ವರಿಗೆ ಹಾಗೂ ತಾಲೂಕಿನ ಕುಂಸಿಯಲ್ಲಿನ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಂಡು ಬಂದಿದೆ. ಶಿವಮೊಗ್ಗ ನಗರ ಹಾಗೂ ತಾಲೂಕಿನಲ್ಲಿ -17, ಸಾಗರದಲ್ಲಿ -06, ಭದ್ರಾವತಿಯಲ್ಲಿ -04, ಶಿಕಾರಿಪುರ, ಹೊಸನಗರ ಹಾಗೂ ಸೊರಬದಲ್ಲಿ ತಲಾ 3 ಪ್ರಕರಣ, ತೀರ್ಥಹಳ್ಳಿಯಲ್ಲಿ 1 ಪ್ರಕರಣ ಕಂಡುಬಂದಿದೆ.

ಗುರುವಾರ ಪತ್ತೆಯಾದ ಪಿ-29105 ರಿಂದ ಪಿ-29141 ರವರೆಗಿನ ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳು ಹಾಗೂ 20 ಪುರುಷರು ಹಾಗೂ 15 ಮಹಿಳೆಯರಿದ್ದಾರೆ. ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೋನ ವ್ಯಾಪಕವಾಗಿ ಹರಡತೊಡಗಿದೆ. ಜಿಲ್ಲೆಯಲ್ಲಿ ಈವರೆಗೆ 372 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 141 ಗುಣಮುಖರಾಗಿದ್ದಾರೆ.

ಮತ್ತೊಂದು ಸಾವು:

ಈ ನಡುವೆ ಜಿಲ್ಲೆಯಲ್ಲಿ ಕೊರೋನಾ ಮತ್ತೊಂದು ಬಲಿ ಪಡೆದಿದೆ ಎಂದು ತಿಳಿದುಬಂದಿದೆ. ಆದರೆ ಜಿಲ್ಲಾಡಳಿತ ಇದನ್ನು ದೃಢಪಡಿಸಿಲ್ಲ. ಶಿಕಾರಿಪುರ ತಾಲೂಕಿನ ವ್ಯಕ್ತಿಯೊಬ್ಬರು ಕೊರೋನದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. 64 ವರ್ಷ ವಯಸ್ಸಿನ ಇವರು ವಾರದ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ತಗುಲಿರುವುದು ಒಳಪಟ್ಟಿತ್ತು. ಹೀಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.