Asianet Suvarna News Asianet Suvarna News

ಹುಬ್ಬಳ್ಳಿ: ತಿಂಗಳಲ್ಲಿ ಬಂತು 3563 ಮೆ.ಟನ್‌ ಪ್ರಾಣವಾಯು..!

* ಒಡಿಶಾ, ಜಾರ್ಖಂಡ್‌, ಗುಜರಾತ್‌ಗಳಿಂದ ರಾಜ್ಯಕ್ಕೆ ಬಂದಿಳಿದ ಆಕ್ಸಿಜನ್‌
* ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ 31 ರೈಲುಗಳ ಮೂಲಕ ತಲುಪಿದ ಪ್ರಾಣವಾಯು
* ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಮಾಡಿದ್ದ ರೈಲ್ವೆ ಇಲಾಖೆ
 

3563 Metric Tonne of oxygen Arrived in the Karnataka in a Single Month grg
Author
Bengaluru, First Published Jun 13, 2021, 7:07 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.13): ಒಂದೇ ತಿಂಗಳಲ್ಲಿ ಬರೋಬ್ಬರಿ 3563 ಮೆಟ್ರಿಕ್‌ ಟನ್‌ ಆಕ್ಸಿಜನ್‌ ರೈಲುಗಳ ಮೂಲಕ ರಾಜ್ಯಕ್ಕೆ ಬಂದಿಳಿದಿದೆ!

ಏಪ್ರಿಲ್‌- ಮೇ ತಿಂಗಳಲ್ಲಿ ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ತೀವ್ರವಾಗಿ ಎಲ್ಲೆಡೆ ಆಕ್ಸಿಜನ್‌ ಕೊರತೆಯಾಗಿತ್ತು. ಎಲ್ಲೆಡೆ ಆಕ್ಸಿಜನ್‌ಗಾಗಿ ಹಾಹಾಕಾರ ಶುರುವಾಗಿತ್ತು. ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಾಗಿ ಸಾಕಷ್ಟು ಸಾವು- ನೋವು ಸಂಭವಿಸುತ್ತಿದ್ದವು. ಪ್ರಾಣವಾಯುಗಾಗಿ ಹರಸಾಹಸ ಪಡುವಂತಹ ಪರಿಸ್ಥಿತಿ ಎದುರಾಗಿತ್ತು.

ಬೇರೆ ಬೇರೆ ರಾಜ್ಯಗಳಷ್ಟೇ ಅಲ್ಲ, ವಿದೇಶಗಳಿಂದಲೂ ಆಕ್ಸಿಜನ್‌ ತರಿಸಿದ್ದುಂಟು. ಕರ್ನಾಟಕಕ್ಕೆ ಮುಖ್ಯವಾಗಿ ಒಡಿಶಾದ ಕಳಿಂಗನಗರ, ಗುಜರಾತ್‌ನ ಜಾಮನಗರ, ಜಾರ್ಖಂಡನ ಟಾಟಾನಗರ ಸೇರಿದಂತೆ ವಿವಿಧೆಡೆಗಳಿಂದ ಆಕ್ಸಿಜನ್‌ ತರಿಸಲಾಗಿದೆ. ಇದಕ್ಕಾಗಿ ಮುಖ್ಯವಾಗಿ ಬಳಕೆಯಾಗಿರುವುದು ರೈಲ್ವೆ. ಆಕ್ಸಿಜನ್‌ ಸರಬರಾಜಿಗಾಗಿ ರೈಲ್ವೆ ಇಲಾಖೆಯೂ ಗ್ರಿನ್‌ ಕಾರಿಡಾರ್‌ ಮೂಲಕ ಆಕ್ಸಿಜನ್‌ ಸರಬರಾಜು ಮಾಡಿದೆ.

ಮೇ 10ರಿಂದ ರೈಲುಗಳ ಮೂಲಕ ಆಕ್ಸಿಜನ್‌ ಸರಬರಾಜು ಶುರುವಾಗಿದೆ. ಅಲ್ಲಿಂದ ಈವರೆಗೆ 31 ರೈಲುಗಳ ಮೂಲಕ ಬರೋಬ್ಬರಿ 3563 ಮೆಟ್ರಿಕ್‌ ಟನ್‌ ಆಕ್ಸಿಜನ್‌ ರಾಜ್ಯಕ್ಕೆ ಬಂದಿಳಿದಿದೆ. ಹೀಗೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬಂದಿದ್ದ ಆಕ್ಸಿಜನ್‌ನ್ನು ಅನ್‌ಲೋಡ್‌ ಮಾಡಿಕೊಂಡು ಅಗತ್ಯವಿರುವ ಜಿಲ್ಲೆ, ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸರಬರಾಜು ಮಾಡಿತು. ಇದರಿಂದ ಆಕ್ಸಿಜನ್‌ ಕೊರತೆ ನೀಗಿ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗಲು ಸಹಕಾರಿಯಾಯಿತು.

ನಾಯಕತ್ವ ಬದಲಾವಣೆ ಚರ್ಚೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಕ್ ಪ್ರತಿಕ್ರಿಯೆ

ಸ್ಪೀಡ್‌ ಕೂಡ ಹೆಚ್ಚಳ:

ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು ಎಂದೇ ನಾಮಾಂಕಿತದಿಂದ ಸಂಚರಿಸಿದ ಈ ರೈಲುಗಳಿಗೆ ಯಾವುದೇ ಅಡೆತಡೆಯಾಗಬಾರದೆಂಬ ಉದ್ದೇಶದಿಂದ ಗ್ರೀನ್‌ ಕಾರಿಡಾರ್‌ ಮಾಡಲಾಗಿತ್ತು. ಸಹಜವಾಗಿ ಗೂಡ್ಸ್‌ ರೈಲುಗಳ ಸ್ಪೀಡ್‌ ಪ್ರತಿ ಗಂಟೆಗೆ ಸರಾಸರಿ 45 ಕಿಮೀ ಇರುತ್ತದೆ. ಇನ್ನು ಸೂಪರ್‌ ಫಾಸ್ಟ್‌ ರೈಲುಗಳ ಸ್ಪೀಡ್‌ ಪ್ರತಿ ಗಂಟೆಗೆ 55 ಕಿಮೀಕ್ಕಿಂತ ಜಾಸ್ತಿ ಇರಬೇಕು. ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳು ಪ್ರತಿ ಗಂಟೆಗೆ ಸರಾಸರಿ 65 ಕಿಮೀವರೆಗಿನ ಸ್ಪೀಡ್‌ನಲ್ಲಿ ಸಂಚರಿಸಿವೆ. ಅಂದರೆ ಸೂಪರ್‌ ಫಾಸ್ಟ್‌ ರೈಲಿಗಿಂತ ಸ್ಪೀಡ್‌ ಸಂಚರಿಸಿವೆ. ಈ ಕಾರಣದಿಂದಾಗಿ ರೈಲುಗಳು ಸಕಾಲದಲ್ಲಿ ತಲುಪಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಜನರಿಗೆ ಪ್ರಾಣವಾಯು ಕೊಡಲು ರೈಲ್ವೆ ಇಲಾಖೆ ಕೊರೋನಾ ವೇಳೆ ವಿಶೇಷ ಪ್ರಯತ್ನ ಮಾಡಿರುವುದಂತೂ ಸತ್ಯ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಿಳಾ ಪೈಲಟ್‌ಗಳು

ಹೀಗೆ ರಾಜ್ಯಕ್ಕೆ ಬಂದ 31 ರೈಲುಗಳ ಪೈಕಿ 3 ರೈಲುಗಳನ್ನು ಚಲಾಯಿಸಿದ್ದು ಮಹಿಳಾ ಪೈಲಟ್‌ಗಳು ಎಂಬುದು ವಿಶೇಷ. ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯ ಜೋಲಾರಪೇಟೆ ಜಂಕ್ಷನ್‌ನಿಂದ ಬೆಂಗಳೂರವರೆಗೆ 3 ರೈಲುಗಳನ್ನು ಸಿರೀಶಾ ಜಿ. ಎಂಬ ಪೈಲಟ್‌ ಚಲಾಯಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕಿ ಬಾತ್‌ನಲ್ಲೂ ಪ್ರಸ್ತಾಪಿಸಿ ಮಹಿಳಾ ಪೈಲಟ್‌ಗಳಿಗೆ ಪ್ರೋತ್ಸಾಹಿಸಿದ್ದಾರೆ.

ಮೇ 10ರಿಂದ ಜಾರ್ಖಂಡ್‌, ಗುಜರಾತ್‌, ಒಡಿಶಾದಿಂದ 31 ರೈಲುಗಳು ಬರೋಬ್ಬರಿ 3563 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಕಂಟೈನರ್‌ಗಳನ್ನು ಹೊತ್ತು ರಾಜ್ಯಕ್ಕೆ ಬಂದಿವೆ. ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಗ್ರೀನ್‌ ಕಾರಿಡಾರ್‌ ಮಾಡಲಾಗಿತ್ತು. ವಲಯದ ವ್ಯಾಪ್ತಿಯ ಜೋಲಾರಪೇಟೆಯಿಂದ ಬೆಂಗಳೂರವರೆಗೂ 3 ರೈಲುಗಳನ್ನು ಮಹಿಳಾ ಪೈಲಟ್‌ ಚಲಾಯಿಸಿದ್ದು ವಿಶೇಷ ಎಂದು ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ತಿಳಿಸಿದ್ದಾರೆ.  
 

Follow Us:
Download App:
  • android
  • ios