Asianet Suvarna News Asianet Suvarna News

ಜುಲೈ 29ರಂದು ಕುವೆಂಪು ವಿವಿ 30ನೇ ಘಟಿಕೋತ್ಸವ

ಕುವೆಂಪು ವಿವಿಯ ಘಟಿಕೋತ್ಸವ ಸರಳವಾಗಿ, ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

30th Kuvempu University convocation Programme will be held in July 29th
Author
Shivamogga, First Published Jul 28, 2020, 8:29 AM IST
  • Facebook
  • Twitter
  • Whatsapp

ಶಿವಮೊಗ್ಗ(ಜು.28): ಕುವೆಂಪು ವಿವಿ 30ನೇ ವಾರ್ಷಿಕ ಘಟಿಕೋತ್ಸವ ಜುಲೈ 29 ರಂದು ಆನ್‌ಲೈನ್‌ ಮೂಲಕ ವಿವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಘಟಿಕೋತ್ಸವ ಸರಳವಾಗಿ, ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅವರೆಲ್ಲರು ಸಂದೇಶ ಕಳಿಸಿದ್ದು, ಒಡಿಸ್ಸಾದ ಕೇಂದ್ರೀಯ ವಿವಿ ಕುಲಪತಿ ಪ್ರೊ.ಪಿ.ವಿ.ಕೃಷ್ಣಭಟ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಆದರೆ ಅವರು ಬರುವುದಿಲ್ಲ. ವೀಡಿಯೋ ಮೂಲಕ ಭಾಷಣ ಮಾಡಲಿದ್ದಾರೆ. ಕೇವಲ ಒಂದು ಗಂಟೆಯೊಳಗೆ ಇಡೀ ಘಟಿಕೋತ್ಸವ ಕಾರ್ಯಕ್ರಮ ಮುಗಿಯಲಿದೆ.

ಸಿಂಡಿಕೇಟ್‌ ಸದಸ್ಯರು ಸೇರಿ ವೇದಿಕೆಯಲ್ಲಿ ಸುಮಾರು 50 ಜನರು, ಕೆಳಗೆ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು ಸೇರಿ ಸುಮಾರು 50 ಮಂದಿ ಇರಲಿದ್ದಾರೆ. ಸುಮಾರು 1 ಸಾವಿರ ಜನರು ಕುಳಿತುಕೊಳ್ಳಬಹುದಾದ ಸಭಾಂಗಣದಲ್ಲಿ 100 ಜನರು ಮಾತ್ರ ಇದ್ದು, ಸಾಮಾಜಿಕ ಅಂತರ ಕಾಪಾಡಲಾಗುವುದು. ಎಲ್ಲರಿಗೂ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡಲಾಗುವುದು. ಥರ್ಮಲ್‌ ಟೆಸ್ಟ್‌ ಮಾಡಲಾಗುವುದು. ಇಡೀ ಸಭಾಂಗಣವನ್ನೇ ಸ್ಯಾನಿಟೈಸರ್‌ ಮಾಡಲಾಗುವುದು ಎಂದು ವಿವರಿಸಿದರು.

ಜುಲೈ ಮಾಸಾಂತ್ಯ ಕುವೆಂಪು ವಿವಿ ಘಟಿಕೋತ್ಸವ

ಈ ಬಾರಿ 9443 ಪುರುಷರು, 14289 ಮಹಿಳೆಯರು ಸೇರಿ ಒಟ್ಟು 23,732 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ 140 ಪುರುಷರು, 54 ಮಹಿಳೆಯರು ಸೇರಿದಂತೆ 194 ಅಭ್ಯರ್ಥಿಗಳು ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಘಟಿಕೋತ್ಸವದಲ್ಲಿ 119 ಸ್ವರ್ಣ ಪದಕಗಳಿದ್ದು, ಅವುಗಳನ್ನು 54 ಮಹಿಳೆಯರು, 13 ಪುರುಷರು ಸೇರಿದಂತೆ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಹಾಗೆಯೇ 4 ಪುರುಷರು,15 ಮಹಿಳೆಯರು ಸೇರಿದಂತೆ 19 ವಿದ್ಯಾರ್ಥಿಗಳು 24 ನಗದು ಬಹುಮಾನಗಳನ್ನು ಪಡೆದಿದ್ದಾರೆ. ಇದರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.

ಪದಕ ವಿದ್ಯಾರ್ಥಿಗಳು

ಕನ್ನಡ ಅಧ್ಯಯನ ಎಂ.ಎ. ವಿಭಾಗದ (ಕನ್ನಡ)ದಲ್ಲಿ ವಿದ್ಯಾರ್ಥಿ ಎಚ್‌.ರಂಗನಾಥ್‌ 10 ಸ್ವರ್ಣ ಪದಕ ಹಾಗೂ ಮೂರು ನಗದು ಬಹುಮಾನ ಪಡೆಯುವ ಮೂಲಕ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಎಂ.ಆರ್‌.ಸಂಚಿತ (ಎಂಎಸ್ಸಿ ಜೈವಿಕ ತಂತ್ರಜ್ಞಾನ), ಬಿ.ಬಿ.ರುಕ್ಕಯ್ಯ (ಬಿ.ಕಾಂ), ತಲಾ 5 ಸ್ವರ್ಣ ಪದಕ ಪಡೆದಿರುತ್ತಾರೆ. ಎಚ್‌.ವಾಣಿ (ಸಮಾಜ ಶಾಸ್ತ್ರ, ಎಂಎ) ಎನ್‌.ಜಿ.ಪೂಜಾ (ಎಂಎಸ್ಸಿ ಪರಿಸರ ವಿಜ್ಞಾನ), ಕೆ.ವಿ.ಅಮೃತ (ಎಂಬಿಎ), ತಲಾ 4 ಸ್ವರ್ಣ ಪದಕ ಪಡೆದಿರುತ್ತಾರೆ.

ಸೀಮಾ ಎಸ್‌.ಡಿ. ಎಂಎಸ್ಸಿ ಗಣಿತಶಾಸ್ತ್ರದಲ್ಲಿ 3 ಪದಕ,. 3 ನಗದು ಬಹುಮಾನ, ಎಂಸಿಎ ವಿಭಾಗದಲ್ಲಿ ಕೆ.ಆರ್‌.ಆಶ್ವಿನಿ 3 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದಿರುತ್ತಾರೆ. ಎಂಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಬಿ.ಎಂ.ನವೀನ, ಎಂ.ಎ.ಇತಿಹಾಸ ವಿಭಾಗದಲ್ಲಿ ಪಿ.ದೀಪ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಶಾಶ್ವತಿ ಹೆಚ್‌.ಎಸ್‌, 3 ಸ್ವರ್ಣ ಪದಕ ಬಹುಮಾನ ಪಡೆದಿರುತ್ತಾರೆ.

194 ವಿದ್ಯಾರ್ಥಿಗಳಿಗೆ ಪಿಎಚ್‌.ಡಿ

ಪಿಎಚ್‌ಡಿ ಪದವಿ 194 ವಿದ್ಯಾರ್ಥಿಗಳು ಪಡೆದಿದ್ದು ಇಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ 80, ವಾಣಿಜ್ಯ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 5, ಕಾನೂನು ನಿಕಾಯದಲ್ಲಿ 1, ವಿಜ್ಞಾನ ನಿಕಾಯದಲ್ಲಿ 93 ವಿದ್ಯಾರ್ಥಿಗಳು ಸೇರಿ 194 ಜನರಿಗೆ ಪಿಹೆಚ್‌ಡಿ ಪದವಿ ನೀಡಲಾಗಿದೆ.

ಕೆಲವರಿಗೆ ಮಾತ್ರ ಆಮಂತ್ರಣ

ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೆಚ್ಚು ಜನರಿಲ್ಲದೇ ಸೀಮಿತವಾಗಿ ಆನ್‌ಲೈನ್‌ ಮೂಲಕ ಘಟಿಕೋತ್ಸವ ಆಯೋಜಿಸಲಾಗಿದೆ. ರ‍್ಯಾಂಕ್‌ ವಿದ್ಯಾರ್ಥಿಗಳಲ್ಲೂ ಕೆಲವರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಅವರ ಪೋಷಕರು ಕಾರ್ಯಕ್ರಮಕ್ಕೆ ಹಾಜರಾಗುವಂತಿಲ್ಲ. ಉಳಿದ ವಿದ್ಯಾರ್ಥಿಗಳಿಗೆ ಅಂಚೆ ಮೂಲಕವೇ ಅವರ ಪ್ರಮಾಣಪತ್ರ ಮತ್ತು ನಗದು ಬಹುಮಾನ ಹಾಗೂ ಪದಕ ಕಳುಹಿಸಲಾಗುವುದು. ಈ ಬಾರಿ ಕೊರಳಿಗೆ ಹಾಕುವ ಪದಕದ ಬದಲು ಫೋಟೋ ಫ್ರೇಮ್‌ ಪದಕಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮ ವೀಕ್ಷಣೆಗಾಗಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವೆಬಿನಾರ್‌ ವ್ಯವಸ್ಥೆ ಮಾಡಲಾಗುವುದು. ರ‍್ಯಾಂಕ್‌ ವಿಜೇತರು, ಪಿಎಚ್‌ಡಿ ಪದವೀಧರರು,ಪೋಷಕರಿಗೆ ಬೇರೆ ಬೇರೆ ಲಿಂಕ್‌ಗಳನ್ನು ಜೋಡಿಸಲಾಗುವುದು. ಈಗಾಗಲೇ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಈ ಲಿಂಕನ್ನು ಕಳುಹಿಸಲಾಗಿದೆ ಎಂದರು. ಆಡಳಿತ ವಿಭಾಗದ ಕುಲಸಚಿವ ಪ್ರೊ.ಎನ್‌.ಎಸ್‌.ಪಾಟೀಲ್‌, ಹಣಕಾಸು ಅಧಿ​ಕಾರಿ ಎಸ್‌.ರಾಮಕೃಷ್ಣ, ಪಿಆರ್‌ಓ ಸತ್ಯಪ್ರಕಾಶ್‌ ಇದ್ದರು.

ಘಟಿಕೋತ್ಸವದಲ್ಲಿ ಖಾದಿ ವಸ್ತ್ರ

ಪ್ರಾದೇಶಿಕ ಪರಂಪರೆ ಉಳಿಸುವ ದೃಷ್ಟಿಯಿಂದ ಈ ಬಾರಿ ಘಟಿಕೋತ್ಸವದಲ್ಲಿ ಖಾದಿ ವಸ್ತ್ರ ಧರಿಸಲಾಗುತ್ತಿದೆ. ಈ ಗೌನ್‌ ಶಿವಪ್ಪನಾಯಕ ತೊಡುತ್ತಿದ್ದ ಉಡುಪನ್ನು ಹೋಲುತ್ತಿದೆ. ಶಿವಪ್ಪನಾಯಕ ತೊಡುತ್ತಿದ್ದ ಪೇಟ ಈ ಬಾರಿ ಅನಿವಾರ್ಯ ಕಾರಣಗಳಿಂದ ಇರುವುದಿಲ್ಲ. ಅದರ ಬದಲು ಮೈಸೂರು ಪೇಟ ಧರಿಸಲಾಗುವುದು. ಈ ಬಾರಿ ವಿವಿಯಿಂದ ಯಾರಿಗೂ ಗೌರವ ಡಾಕ್ಟರ್‌ ಇಲ್ಲ ನೀಡಲಾಗುತ್ತಿಲ್ಲ. ನಿಯಮಗಳಂತೆ ವಿವಿ ಸಮಿತಿ ರಚಿಸಿ ಗೌರವ ಡಾಕ್ಟರೇಟೇಟ್‌ಗೆ ಹೆಸರುಗಳನ್ನು ಸೂಚಿಸಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯಪಾಲರು ಯಾವುದೇ ವಿವಿಗಳಿಂದ ಗೌರವ ಡಾಕ್ಟರೇಟ್‌ ನೀಡಲು ಸಮ್ಮತಿಸಿಲ್ಲ.
 

Follow Us:
Download App:
  • android
  • ios