30 ಗಂಟೆ ಕಾರ್ಯಾಚರಣೆ- ದರ್ಗಾ ತೆರವು ಪೂರ್ಣ\ ವಿಧಿ-ವಿಧಾನದೊಂದಿಗೆ ಬೆಳಗಿನ ಜಾವ ಮೂರು ಸಮಾಧಿಗಳ ಸ್ಥಳಾಂತರ ಮುಂದುವರಿದ ಪೊಲೀಸ್‌ ಭದ್ರತೆ, ಗುರುವಾರವೂ ಬಸ್‌ ಮಾರ್ಗ ಬದಲು

ಹುಬ್ಬಳ್ಳಿ (ಡಿ.23) : ಇಲ್ಲಿಗೆ ಸಮೀಪದ ಬೈರಿದೇವರಕೊಪ್ಪದಲ್ಲಿ ಬಿಆರ್‌ಟಿಎಸ್‌ ಮಾರ್ಗದ ಅಂಚಿನಲ್ಲಿದ್ದ ಐತಿಹಾಸಿಕ ಸೂಫಿ ಸಂತ ‘ಹಜರತ್‌ ಸೈಯದ್‌ ಮಹ್ಮದ್‌ ಶಾ ಖಾದ್ರಿ’ ದರ್ಗಾವನ್ನು ನಿರಂತರ 30 ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ಪೂರ್ಣಪ್ರಮಾಣದಲ್ಲಿ ತೆರವುಗೊಳಿಸಲಾಗಿದೆ. ಜತೆಗೆ ದರ್ಗಾ ಆವರಣದಲ್ಲಿ ಹಜರತ್‌ ಸೈಯ್ಯದ್‌ ಮಹ್ಮದ್‌ ಶಾ ಖಾದ್ರಿ ಅವರದು ಸೇರಿ ಒಟ್ಟು 3 ಮಝಾರ್‌ಗಳನ್ನು ವಿಧಿ-ವಿಧಾನ ನೆರವೇರಿಸುವ ಮೂಲಕ ಸ್ಥಳಾಂತರ ಮಾಡಲಾಗಿದೆ.

ಹೈಕೋರ್ಟ್ ಆದೇಶದಂತೆ ಪೊಲೀಸ್‌ ಸರ್ಪಗಾವಲಿನಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ಆರಂಭವಾಗಿದ್ದು ಗುರುವಾರ ಬೆಳಗ್ಗೆ 11 ಗಂಟೆಗೆ ಪೂರ್ಣಗೊಳಿಸಲಾಗಿದೆ. ದರ್ಗಾ ಪಕ್ಕದ ಮಸೀದಿಯ ಪ್ರಾರ್ಥನಾ ಮಂದಿರ, ವಾಣಿಜ್ಯ ಮಳಿಗೆ ಸೇರಿ ಕಾಂಪೌಂಡ್‌ನ್ನು ಬುಧವಾರ ತೆರವು ಮಾಡಲಾಗಿತ್ತು. ಆದರೆ, ಮಝಾರ್‌ಗೆ (ಸಮಾಧಿ) ಯಾವುದೇ ಧಕ್ಕೆಯಾಗದಂತೆ ಸ್ಥಳಾಂತರ ಮಾಡಲು ಅಂಜುಮನ್‌ ಸಂಸ್ಥೆ ಕಾಲಾವಕಾಶ ಕೋರಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಅಧಿಕಾರಿಗಳು ಸಹ ಒಪ್ಪಿದ್ದರು.

Hubballi: ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

ಸ್ಥಳಾಂತರ ಕಾರ್ಯ ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ತಿಳಿಸಿದ್ದರು. ಅದರಂತೆ ಬುಧವಾರವೇ ದರ್ಗಾದ ಹಿಂದುಗಡೆ ಜಾಗ ಗುರುತಿಸಿ ಗುಂಡಿ ತೋಡಿ ಇಡಲಾಗಿತ್ತು. ಹಜರತ್‌ ಸೈಯ್ಯದ್‌ ಮಹ್ಮದ್‌ ಶಾ ಖಾದ್ರಿ ಅವರ ಸಮಾಧಿ 10ಗಿ10 ಉದ್ದ-ಅಗಲವಿದ್ದು, ಅವರಿಬ್ಬರು ಶಿಷ್ಯಂದಿರ ಸಮಾಧಿ 7ಗಿ7 ಉದ್ದ-ಅಗಲವಿದೆ. ಸಂಜೆಯಿಂದ ತಡರಾತ್ರಿಯವರೆಗೆ ನುರಿತ ಎಂಜಿನಿಯರ್‌ಗಳು, ತಜ್ಞರ ಸಲಹೆ ಪಡೆದು ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣ ಬಳಸಿ ಸ್ಥಳಾಂತರ ಕಾರ್ಯ ಮುಂದುವರಿಸಿದ್ದರು. ಗುರುವಾರ ಬೆಳಗಿನ ಜಾವ ವಿಧಿ-ವಿಧಾನ ನೆರವೇರಿಸುವ ಮೂಲಕ ಮುಸ್ಲಿಂ ಸಮುದಾಯದ ಮುಖಂಡರು, ಧರ್ಮ ಗುರುಗಳ ಸಮ್ಮುಖದಲ್ಲಿ ಸಮಾಧಿ ಸ್ಥಳಾಂತರ ಮಾಡಲಾಯಿತು.

ಬೆಳಗಿನ ಜಾವ ಸಮಾಧಿ ಸ್ಥಳಾಂತರವಾಗಿರುವ ಸುದ್ದಿ ತಿಳಿದ ಸುತ್ತಲಿನ ಜನರು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆಯೇ ಎಂದು ದರ್ಗಾದತ್ತ ಆಗಮಿಸುತ್ತಿದ್ದರು. ಪೊಲೀಸರು ನಾಳೆ ವರೆಗೆ ಯಾರನ್ನೂ ಬಿಡುವುದಿಲ್ಲ ಎಂದು ವಾಪಸ್‌ ಕಳುಹಿಸಿದರು. ಮಂಗಳವಾರ ರಾತ್ರಿ ಹಾಕಿದ್ದ ಬ್ಯಾರಿಕೇಡ್‌ ಹಾಗೂ ಬಂದೋಬಸ್‌್ತ ಮುಂದುವರಿದಿತ್ತು. ವಾಹನ ಸವಾರರು, ಸಾರ್ವಜನಿಕರು ಏನಾಗುತ್ತಿದೆ ಎಂದು ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡುಬಂತು.

ಮುಂದುವರಿದ ವಾಹನ ದಟ್ಟಣೆ:

ಬುಧವಾರದಂತೆ ಗುರುವಾರವೂ ಬೈರಿದೇವರಕೊಪ್ಪ ಹಾಗೂ ಎಪಿಎಂಸಿ ಭಾಗದ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕಂಡುಬಂತು. ದರ್ಗಾ ತೆರವು ಹಿನ್ನೆಲೆ ಹುಬ್ಬಳ್ಳಿ ಕಡೆಯಿಂದ ಧಾರವಾಡಕ್ಕೆ ತೆರಳುವ ವಾಹನವನ್ನು ಬೈರಿದೇವರಕೊಪ್ಪದಿಂದ ಸಂಗೊಳ್ಳಿ ರಾಯಣ್ಣ ನಗರದ ಮೂಲಕ ಸನಾ ಕಾಲೇಜಿನ ಪಕ್ಕದ ರಸ್ತೆಗೆ ಬದಲಾಯಿಸಲಾಗಿತ್ತು. ಧಾರವಾಡದಿಂದ ಬರುವ ವಾಹನವನ್ನು ಎಪಿಎಂಸಿ ಮೊದಲ ಗೇಟ್‌ನಿಂದ ಬಿಡಲಾಗಿತ್ತು. ಮುಖ್ಯರಸ್ತೆ ಬಂದ್‌ ಆಗಿದ್ದ ಕಾರಣ ಎರಡೂ ಕಡೆಯ ಒಳರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ವಾಹನ ಸವಾರರು ಕೆಲವೆಡೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ತನ್ನ ಉದ್ದೇಶ ಈಡೇರಿಸಿಕೊಂಡ ಬಿಜೆಪಿ

ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆಯಲ್ಲಿ ಸಮಾಧಿ ಉಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ಒತ್ತಡ ಹೇರಿದ್ದೆವು. ಆದರೆ ಬಿಜೆಪಿ ತನ್ನ ಉದ್ದೇಶ ಈಡೇರಿಸಿಕೊಂಡಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಅಗಲೀಕರಣದ ವೇಳೆ ಗುಡಿ, ಮಸೀದಿ ಮಂದಿರಗಳನ್ನು ತೆರವು ಮಾಡಲಾಗಿದೆ. ಆದರೆ ಇಲ್ಲಿ ಮುಸ್ಲಿಂ ಗುರುಗಳ ಸಮಾಧಿ ಇರುವುದರಿಂದ ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ತೆರವು ಮಾಡುವಂತೆ ವಿನಂತಿಸಿದ್ದೆವು. ಆದರೆ ಸಮಾಜದಲ್ಲಿ ಎಲ್ಲರೂ ಶಾಂತಿಯಿಂದ ಇರುವುದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಅದಕ್ಕೆ ಬೆಲೆ ನೀಡದೆ ಗಲಭೆ ಹುಟ್ಟು ಹಾಕಲು ಪ್ರಯತ್ನಿಸಿತ್ತು ಎಂದು ದೂರಿದ ಅವರು, ಮುಸ್ಲಿಂ ಮುಖಂಡರು ಯಾವುದೇ ರೀತಿ ಗಲಭೆಗೆ ಅವಕಾಶ ನೀಡದೆ ಕಾನೂನು, ನ್ಯಾಯಾಲಯದ ಆದೇಶ ಪಾಲನೆ ಮಾಡಿ ಗೌರವಿಸಿದ್ದಾರೆ ಎಂದರು.