Asianet Suvarna News Asianet Suvarna News

ಬೆಂಗಳೂರು: ಕೆಂಪೇಗೌಡ ಲೇಔಟ್‌ ರಸ್ತೆಗೆ 3 ಅಂಡರ್‌ಪಾಸ್‌

ಮಾಗಡಿ ರಸ್ತೆ-ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಮೀ ಉದ್ದದ ಮುಖ್ಯ ರಸ್ತೆ, ಈ ರಸ್ತೆ ಸಂಪರ್ಕಿಸಿರುವ ಇತರ ಬ್ಲಾಕ್‌ಗಳ ನಿವಾಸಿಗಳಿಗೆ ಅನುಕೂಲ. 

3 Underpass to Kempegowda Layout Road in Bengaluru grg
Author
First Published Apr 2, 2023, 6:00 AM IST

ಸಂಪತ್‌ ತರೀಕೆರೆ

ಬೆಂಗಳೂರು(ಏ.02):  ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಹಾದು ಹೋಗಿರುವ ಮೇಜರ್‌ ಆರ್ಟಿರಿಯಲ್‌ ರಸ್ತೆಗೆ ಸಂಪರ್ಕಿಸುವ ರಸ್ತೆಗಳ ಕೊರತೆ ನೀಗಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂರು ಅಂಡರ್‌ಪಾಸ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ಮಾಗಡಿ ರಸ್ತೆ-ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ. ಉದ್ದದ ಮೇಜರ್‌ ಆರ್ಟಿರಿಯಲ್‌ ರಸ್ತೆಯಲ್ಲಿ (ಎಂಎಆರ್‌) ಮಾಗಡಿ ರಸ್ತೆಯಿಂದ ಆರಂಭಗೊಂಡು 2.90 ಕಿ.ಮೀ ದೂರದಲ್ಲಿ 2 ಮತ್ತು 9ನೇ ಬ್ಲಾಕ್‌ ಮಧ್ಯ, 5.10 ಕಿ.ಮೀ ದೂರದಲ್ಲಿ 3 ಮತ್ತು 8ನೇ ಬ್ಲಾಕ್‌ ಮಧ್ಯೆ ಹಾಗೂ 9.7 ಕಿ.ಮೀನಲ್ಲಿ 5 ಮತ್ತು 6ನೇ ಬ್ಲಾಕ್‌ ನಡುವೆ ಅಂಡರ್‌ಪಾಸ್‌ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕೆಂಪೇಗೌಡ ಲೇಔಟಲ್ಲಿ 180 ಎಕರೆಯ ಸೈಟ್‌ ಅಕ್ರಮವಾಗಿ ಪರಿವರ್ತಿಸಿ ಮಾರಾಟ..?

ರೈಲ್ವೆಗಾಗಿ ಪ್ರಮುಖ ಆರ್ಟಿರಿಯಲ್‌ ರಸ್ತೆಯ ಚೈನೇಜ್‌ 10.35 ಕಿ.ಮೀ.ನಲ್ಲಿ ಬಾಕ್ಸ್‌ ಪುಷಿಂಗ್‌ ಆರ್‌ಯುಬಿಯನ್ನು (ರೈಲ್ವೆ ಅಂಡರ್‌ ಬ್ರಿಡ್ಜ್‌) ನಿರ್ಮಾಣ ಮಾಡಲು ಟೆಂಡರ್‌ ಕರೆಯಲಾಗಿದೆ. ಕಾಮಗಾರಿಯ ಒಟ್ಟು ಅಂದಾಜು ಮೊತ್ತ .38.81 ಕೋಟಿಗಳಾಗಿವೆ. ಈ ಕಾಮಗಾರಿಯೊಂದಿಗೆ ಉಳಿದ ಮೂರು ಅಂಡರ್‌ ಪಾಸ್‌ಗಳನ್ನು ಕೂಡ ನಿರ್ಮಾಣ ಮಾಡಲು ಬಿಡಿಎ ಸಭೆಯಲ್ಲಿ ನಿರ್ಧರಿಸಿದೆ. ಇದರಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕೊರತೆ ನೀಗಲಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5, 6ನೇ ಬ್ಲಾಕ್‌ ನಿವಾಸಿಗಳ ಸಮಸ್ಯೆ ನಿವಾರಣೆ

ಎಂಎಆರ್‌ ಯೋಜನೆಯಲ್ಲಿ ಈ ಹಿಂದೆ ಐದು ವೃತ್ತಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ನಂತರ ಯೋಜನೆಯಿಂದ 5ನೇ ವೃತ್ತವನ್ನು ಕೈಬಿಡಲಾಗಿತ್ತು. ಇದರಿಂದ 5 ಮತ್ತು 6ನೇ ಬ್ಲಾಕ್‌ ನಿವಾಸಿಗಳು ಮೂರು ಕಿ.ಮೀ ಬಳಸಿ ಮುಖ್ಯ ರಸ್ತೆಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಬ್ಲಾಕ್‌ 5 ಮತ್ತು 6 ನಡುವೆ ರಾಜಕಾಲುವೆ ಮತ್ತು ಎರಡು ಕುಂಟೆಗಳಿದ್ದು (ಪಾಂಡ್‌) ಅವುಗಳ ಮೇಲೆ ಒಂದು ಮೇಲ್ಸೇತುವೆ ನಿರ್ಮಿಸಿ ಎಂಎಆರ್‌ ರಸ್ತೆಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಬ್ಲಾಕ್‌ 5ರಿಂದ ಮಾಗಡಿ ರಸ್ತೆಗೆ ಹೋಗಲು ಮತ್ತು ಬ್ಲಾಕ್‌ 6ರಿಂದ ಮೈಸೂರು ರಸ್ತೆ ಭಾಗಕ್ಕೆ ಬರಲು ರೈಲ್ವೆ ಹಳಿಯ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಮೇಲೆ ರಸ್ತೆಗಳನ್ನು ನಿರ್ಮಿಸಿ ಯೂಟರ್ನ್‌ ಪಡೆಯಲು ಅನುವು ಮಾಡಿಕೊಡಲು ಯೋಜನೆ ರೂಪಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಬೆಂಗಳೂರು: ಕೆಂಪೇಗೌಡ ಬಡಾವಣೆಗೆ ಬಿಡಿಎ ಅನ್ಯಾಯ..!

ಮೈಸೂರು ರಸ್ತೆಗೆ ಸಂಪರ್ಕ

ಎಂಎಆರ್‌ನ ಒಂದು ತುದಿಯು ಮಾಗಡಿ ರಸ್ತೆಗೆ ಮತ್ತು ಇನ್ನೊಂದು ತುದಿ ನಮ್ಮ ಮೆಟ್ರೋ ರೈಲು ಡಿಪೋ ಹಾಗೂ ರೈಲು ಮಾರ್ಗದ ಅಡಿಯಲ್ಲಿ ಸುರಂಗದ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗ ಮಾರ್ಗ 500 ಮೀಟರ್‌ ಉದ್ದ ಇದ್ದು, ಮೈಸೂರು ರಸ್ತೆಯನ್ನು ಸಂಪರ್ಕಿಸಲು ರೈಲ್ವೆ ಮಾರ್ಗಗಳ, ಮೆಟ್ರೋ ಡಿಪೋ ಅಡಿಯಲ್ಲಿ ಸುರಂಗದ ಮೂಲಕ ಮುಖ್ಯ ಕಾರೇಜ್‌ ಮಾರ್ಗ ಮಾತ್ರ ಹಾದು ಹೋಗುತ್ತದೆ. ಸವೀರ್‍ಸ್‌ ರಸ್ತೆಗಳು ಮೈಸೂರು ರಸ್ತೆ ಸಂಪರ್ಕ ಕಲ್ಪಿಸುವುದಿಲ್ಲ. ಆದರೆ, ಮಾಗಡಿ ರಸ್ತೆಯನ್ನು ಮುಖ್ಯ ಕ್ಯಾರೇಜ್‌ ಮಾರ್ಗ, ಸವೀರ್‍ಸ್‌ ರಸ್ತೆ ಎರಡರಿಂದಲೂ ಕೂಡ ಸಂಪರ್ಕಿಸಬಹುದು. ಅಂಡರ್‌ಪಾಸ್‌ ನಿರ್ಮಾಣದಿಂದ ಮೇಜರ್‌ ಆರ್ಟಿರಿಯಲ್‌ ರಸ್ತೆ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಸಿಗಲಿದೆ. 500 ಮೀಟರ್‌ ಉದ್ದದ ಸುರಂಗ ಮಾರ್ಗವು 6ನೇ ಲೇನ್‌ ರಾಷ್ಟ್ರೀಯ ಮೈಸೂರು ರಸ್ತೆ ಹೆದ್ದಾರಿಯಲ್ಲಿ ಏಕೈಕ ನಿರ್ಗಮನವಾಗಿದೆ.

ಎಂಎಆರ್‌ ರಸ್ತೆಯೂ ನೂರು ಮೀಟರ್‌(330 ಅಡಿ) ಅಗಲದ ರಸ್ತೆಯಾಗಿದೆ. ಇದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟಿ ಹೋಗಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ನಿವಾರಿಸಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಬಿಡಿಎ ಆಯುಕ್ತರು ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆವು. ಬಿಡಿಎ ಮೂರು ಅಂಡರ್‌ಪಾಸ್‌ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡಿದ್ದರಿಂದ ನಿವಾಸಿಗಳಿಗೆ ಅನುಕೂಲವಾಗಲಿದೆ ಅಂತ ಎನ್‌ಪಿಕೆಎಲ್‌ ಓಪನ್‌ಫೋರಂ ಕಾರ್ಯದರ್ಶಿ ಸೂರ್ಯಕಿರಣ್‌ ತಿಳಿಸಿದ್ದಾರೆ. 

Follow Us:
Download App:
  • android
  • ios