ಬೆಂಗಳೂರು(ಫೆ.20): ರಸ್ತೆ ಗುಂಡಿ, ಅವೈಜ್ಞಾನಿಕ ಕಸ ವಿಲೇವಾರಿ, ಬೀದಿ ದೀಪ ಸೇರಿದಂತೆ ಹತ್ತು-ಹಲವು ಸಮಸ್ಯೆಗಳ ಕುರಿತು ಕಳೆದ ಹತ್ತು ದಿನದಲ್ಲಿ ಬಿಬಿಎಂಪಿಗೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ದೂರುಗಳು ಬಂದಿದ್ದು, ಇದು ಬೆಂಗಳೂರು ನಗರದ ನಾಗರಿಕರ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ಕೋಟಿ ಮೀರಿದ ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಪ್ರತಿ ನಿತ್ಯ ನೂರಾರು ಸಮಸ್ಯೆಅನುಭವಿಸುತ್ತಾರೆ. ಸಮಸ್ಯೆಗಳ ಕುರಿತು ಸಂಬಂಧ ಪಟ್ಟಸ್ಥಳೀಯ ಸಂಸ್ಥೆಗೆ ದೂರು ಸಲ್ಲಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಫೆ.8ರಂದು ‘ನಮ್ಮ ಬೆಂಗಳೂರು’ ಆ್ಯಪ್‌ ಬಿಡುಗಡೆ ಮಾಡಿದ್ದರು.

ಕಮಲ್‌ ಹಾಸನ್‌ ಚಿತ್ರದ ಶೂಟಿಂಗ್‌ ವೇಳೆ ಕ್ರೇನ್ ಬಿದ್ದು 3 ಬಲಿ!

ಈ ಆ್ಯಪ್‌ ಮೂಲಕ ನಗರದ ಬಿಬಿಎಂಪಿಯ (ಸಹಾಯ 2.0 ಆ್ಯಪ್‌), ಬಿಎಂಟಿಸಿ, ಜಲಮಂಡಳಿ, ಮೆಟ್ರೋ, ಬಿಡಿಎ, ಬಿಎಂಆರ್‌ಡಿಎಲ್‌ ಹಾಗೂ ಬೆಸ್ಕಾಂಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಿಬಿಎಂಪಿಯ ಸಹಾಯ 2.0 ಆ್ಯಪ್‌ಗೆ ಫೆ.8ರಿಂದ ಫೆ.19ರವರೆಗೆ ಕೇವಲ ಹತ್ತು ದಿನದಲ್ಲಿ ಬೀದಿ ವಿದ್ಯುತ್‌ ದೀಪದ, ಕಸ ವಿಲೇವಾರಿ, ರಸ್ತೆ ಗುಂಡಿ, ಕಟ್ಟಡ ನಕ್ಷೆ, ಖಾತಾ ಸಮಸ್ಯೆ, ಕಾಮಗಾರಿ ವಿಳಂಬ, ಮರ ತೆರವು, ಮಳೆ ನೀರು ಗಾಲುವೆ, ಬೀದಿನಾಯಿ ಹಾವಳಿ, ಸೊಳ್ಳೆ ಕಾಟ ಸೇರಿದಂತೆ ಬರೋಬ್ಬರಿ 3,156 ದೂರುಗಳು ಬಂದಿವೆ.

ಅದರಲ್ಲಿ ಈವರೆಗೆ ಕೇವಲ 874 ದೂರುಗಳನ್ನು ಬಿಬಿಎಂಪಿ ಅಧಿಕಾರಿಗಳು ಪರಿಹಾರ ಮಾಡಿದ್ದಾರೆ. ಇನ್ನು 2,282 ದೂರುಗಳು ಪರಿಹಾರ ಮಾಡಬೇಕಾಗಿದೆ. ಈ ಪೈಕಿ ನಿಗದಿತ ಅವಧಿಯೊಳಗೆ ಬಿಬಿಎಂಪಿ ಅಧಿಕಾರಿಗಳು ದೂರು ಪರಿಹಾರ ಮಾಡದಿರುವ 242 ದೂರುಗಳು ಬಾಕಿ ಉಳಿದಿವೆ.

ಒಟ್ಟು 31 ಸಾವಿರ ದೂರು ಬಾಕಿ:

ಇನ್ನು ಫೆ.8ಕ್ಕಿಂತ ಹಿಂದೆ ಬಿಬಿಎಂಪಿಗೆ ಸಾರ್ವಜನಿಕರಿಂದ ಸಹಾಯ ಆ್ಯಪ್‌ಗೆ ಬಂದ 31 ಸಾವಿರ ದೂರುಗಳನ್ನು ಪರಿಹರಿಸುವುದು ಬಾಕಿ ಇದೆ. ಆ ದೂರುಗಳನ್ನು ಪರಿಹಾರ ಮಾಡಿ ವರದಿ ನೀಡುವಂತೆ ಬಿಬಿಎಂಪಿಯ ಎಲ್ಲ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ಜತೆಗೆ ಹಳೇ 31 ಸಾವಿರ ದೂರುಗಳನ್ನು ಬಿಬಿಎಂಪಿ ಅಭಿವೃದ್ಧಿ ಪಡಿಸಿರುವ ಹೊಸ ಸಹಾಯ 2.0 ಆ್ಯಪ್‌ಗೆ ಜೋಡಣೆ ಮಾಡುವಂತೆಯೂ ಸೂಚನೆ ನೀಡಲಾಗಿದೆ. ಅಲ್ಲದೇ ದೂರವಾಣಿ ಮೂಲಕ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಬರುವ ದೂರುಗಳನ್ನು ಈ ಆ್ಯಪ್‌ಗೆ ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಸ್ಯೆ ಪರಿಹಾರ ಕುರಿತು ವಾರಕ್ಕೊಂದು ಸಭೆ:

ಬಿಬಿಎಂಪಿಯ ಎಲ್ಲ ಅಧಿಕಾರಿಗಳು ಈ ಆ್ಯಪನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಬರುವ ದೂರುಗಳನ್ನು ತಕ್ಷಣ ಪರಿಹಾರ ಮಾಡಿ ಆ್ಯಪ್‌ ಮೂಲಕ ಮಾಹಿತಿ ನೀಡಬೇಕು. ವಿಳಂಬ ಮಾಡುವ ಅಧಿಕಾರಿ ಹಾಗೂ ಆಯಾ ಇಲಾಖೆಯ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಸೋಮವಾರ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರ ದೂರು ಪರಿಹಾರ ಮಾಡಿದ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಬೇಕೆಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ನಮ್ಮ ಬೆಂಗಳೂರು ಆ್ಯಪ್‌’ಗೆ ಬಂದ ದೂರು (ಫೆ.8-ಫೆ.19)

ವಿಭಾಗ ಬಂದ ದೂರು ಪರಿಹಾರವಾದ ದೂರು

ವಿದ್ಯುತ್‌ 822 445

ರಸ್ತೆ 666 80

ಕಸ 1,033 322

ಪ್ರಾಣಿ ನಿಯಂತ್ರಣ 215 13

ಆರೋಗ್ಯ 67 3

ನಗರ ಯೋಜನೆ 38 0

ಅರಣ್ಯ 80 8

ಕಂದಾಯ 21 1

ಲೊಕೇಷನ್‌ ಕೊಡುತ್ತಿಲ್ಲ

ದೂರುದಾರರು ರಸ್ತೆ ಗುಂಡಿ ಹಾಗೂ ಕಸ ಇನ್ನಿತರ ಸಮಸ್ಯೆ ಬಗ್ಗೆ ದೂರು ಸಲ್ಲಿಕೆ ಮಾಡುವ ಸಂದರ್ಭದಲ್ಲಿ ನಿರ್ದಿಷ್ಟಸ್ಥಳ ಲೊಕೇಷನ್‌ ಅನ್ನು ನಮ್ಮ ಬೆಂಗಳೂರು ಆ್ಯಪ್‌ನಲ್ಲಿ ಸಲ್ಲಿರುವುದಕ್ಕೂ ಅವಕಾಶವಿದ್ದರೂ ಸಲ್ಲಿಸುತ್ತಿಲ್ಲ. ಹೀಗಾಗಿ, ಸಮಸ್ಯೆ ಇರುವ ಸ್ಥಳವನ್ನು ಗುರುತಿಸುವುದು ಕ್ಲಿಷ್ಟಕರವಾಗಿದೆ. ಉಳಿದಂತೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಾಕಷ್ಟುದೂರು ದಾಖಲಾಗಿವೆ. ಪರಿಹಾರ ಮಾಡುವ ಕಾರ್ಯವೂ ನಡೆಯುತ್ತಿದೆ. -ಬಿ.ಎಚ್‌.ಅನಿಲ್‌ಕುಮಾರ್‌, ಆಯುಕ್ತರು ಬಿಬಿಎಂಪಿ.

-ವಿಶ್ವನಾಥ ಮಲೇಬೆನ್ನೂರು