ಬೆಂಗಳೂರು [ಅ.05] : ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ತನ್ನ ಸ್ನೇಹಿತೆ ಮನೆಗೆ ನುಗ್ಗಿ ದರೋಡೆ ಕೃತ್ಯ ಎಸಗಿದ್ದ ಆರೋಪದ ಮೇರೆಗೆ ಬೌನ್ಸ್‌ ಸಂಸ್ಥೆ ನೌಕರ ಸೇರಿದಂತೆ ಇಬ್ಬರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮೇ ಲೇಔಟ್‌ನ ರಾಕೇಶ್‌ ಗೌಡ ಹಾಗೂ ಮಂಜುನಾಥ ನಗರದ ಇರ್ಫಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 16 ಗ್ರಾಂ ಚಿನ್ನಾಭರಣ ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಬಾಗಲಗುಂಟೆಯಲ್ಲಿ ನೆಲೆಸಿರುವ ಗೆಳತಿ ಸಂಗೀತಾ ಅವರ ಮನೆಗೆ ಮಂಗಳವಾರ ನುಗ್ಗಿ ಸಹೋದ್ಯೋಗಿ ಜತೆ ತೆರಳಿ ರಾಕೇಶ್‌ ದರೋಡೆ ನಡೆಸಿದ್ದ. ಈ ಕೃತ್ಯದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ವೆಂಕಟೇಗೌಡ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಪ್ರಕರಣ ಪತ್ತೆ ಹಚ್ಚಿದ್ದಾರೆ.

ಹಣಕಾಸು ವ್ಯವಹಾರ:  ಶ್ರೀರಾಮಪುರದ ಸಂಗೀತಾ, ಕೆಲ ವರ್ಷಗಳಿಂದ ತನ್ನ ಪತಿ ಮತ್ತು ಇಬ್ಬರು ಮಕ್ಕಳ ಜತೆ ಬಾಗಲಗುಂಟೆ ಸಮೀಪ ನೆಲೆಸಿದ್ದಾರೆ. ಒಂದು ಅಂತಸ್ತಿನ ಮನೆ ಕಟ್ಟಿಸಿರುವ ಸಂಗೀತಾ ಪೋಷಕರು, ಆ ಮನೆಯನ್ನು ಇಬ್ಬರು ಹೆಣ್ಣು ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಅದರಂತೆ ನೆಲಮಹಡಿಯಲ್ಲಿ ಸಂಗೀತಾ ನೆಲೆಸಿದ್ದರೆ, ಮೇಲಿನ ಅಂತಸ್ತಿನಲ್ಲಿ ಆಕೆಯ ಸೋದರಿ ಕುಟುಂಬ ವಾಸವಾಗಿದೆ. ಕೃತ್ಯ ನಡೆದಾಗ ಅಕ್ಕನ ಚೀರಾಟ ಕೇಳಿ ಆಕೆಯ ಸೋದರಿ ರಕ್ಷಣೆಗೆ ಬಂದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ದಿನಗಳ ಹಿಂದೆ ಮಲ್ಲೇಶ್ವರದ ಸಮೀಪ ಸ್ಪಾನಲ್ಲಿ ಕೆಲಸ ಮಾಡುವಾಗ ಸಂಗೀತಾಳಿಗೆ ಬೌನ್ಸ್‌ ಸಂಸ್ಥೆ ನೌಕರ ರಾಕೇಶ್‌ ಪರಿಚಯವಾಗಿತ್ತು. ಈ ಸ್ನೇಹದಲ್ಲಿ ಇಬ್ಬರ ಮಧ್ಯೆ ಹಣಕಾಸು ವ್ಯವಹಾರ ನಡೆದಿತ್ತು. ಇದೇ ವಿಷಯವಾಗಿ ಅವರ ಮಧ್ಯೆ ಮನಸ್ತಾಪವಾಗಿತ್ತು. ತಾನು ನೀಡಿದ ಹಣ ಕೊಡದೆ ಹೋದಾಗ ಗೆಳತಿ ಮನೆಗೆ ಆತ ಕನ್ನ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಕೃತ್ಯ ನಡೆಯುವ ಮುನ್ನ ಮನೆಗೆ ಬಂದ ರಾಕೇಶ್‌, ಹಣ ನೀಡುವಂತೆ ಸಂಗೀತಾ ಬಳಿ ಕೇಳಿದ್ದ. ಆದರೆ ಆಕೆ ಏನೇನೂ ಸಬೂಬು ಹೇಳಿ ಮನೆಯಿಂದ ಗೆಳೆಯನನ್ನು ಸಾಗ ಹಾಕಿದ್ದಳು. ಇದಾದ ಕೆಲ ಹೊತ್ತಿನ ಬಳಿಕ ಇರ್ಫಾನ್‌ ಜತೆ ಬಂದು ರಾಕೇಶ್‌ ದರೋಡೆ ನಡೆಸಿದ್ದ. ಇರ್ಫಾನ್‌ ಸಹ ಬೌನ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಹಣದಾಸೆಯಿಂದ ಕೃತ್ಯಕ್ಕೆ ಆತ ಸಹಕರಿಸಿದ್ದ. ಈ ದರೋಡೆ ಬಳಿಕ ಆಭರಣವನ್ನು ಅಡವಿಟ್ಟು ಬಂದ ಹಣದಲ್ಲಿ 12 ಸಾವಿರ ರು.ವನ್ನು ಇರ್ಫಾನ್‌ಗೆ ರಾಕೇಶ್‌ ಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.

ಬೈಕ್‌ ನೀಡಿದ ಸುಳಿವು

ಸಂಗೀತಾ ಅವರ ಮನೆಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಸಹೋದ್ಯೋಗಿ ಇರ್ಫಾನ್‌ ಜತೆ ತೆರಳಿದ ರಾಕೇಶ್‌, ಕುಡಿಯಲು ನೀರು ಕೇಳುವ ನೆಪದಲ್ಲಿ ಸಂಸ್ತತ್ರೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಆಗ ತನ್ನ ಗುರುತು ಸಿಗಬಾರದು ಎಂದು ಬಾಗಿಲು ತೆರೆದ ತಕ್ಷಣವೇ ಗೆಳತಿ ಮುಖದ ಮೇಲೆ ಬಟ್ಟೆಎಸೆದ ಆರೋಪಿಗಳು, ಬಳಿಕ ಆಕೆಯ ಕೈ-ಕಾಲು ಕಟ್ಟಿಹಾಕಿದ್ದಾರೆ. ಆನಂತರ ಆಭರಣ ದೋಚಿ ಪರಾರಿಯಾಗಿದ್ದರು. ಆ ಒಡವೆಯನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿಟ್ಟು 40 ಸಾವಿರ ರು. ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಬಾಗಲಗುಂಟೆ ಠಾಣೆ ಇನ್‌ಸ್ಪೆಕ್ಟರ್‌ ವೆಂಕಟೇಗೌಡ ನೇತೃತ್ವದ ತಂಡವು ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆಗ ಡ್ರೈವ್‌್ಜ ಆನ್‌ಲೈನ್‌ ಸಂಸ್ಥೆಯ ಬೈಕ್‌ವೊಂದು ಓಡಾಡಿರುವ ದೃಶ್ಯಾವಳಿಗಳು ಸಿಕ್ಕಿತು. ಅದರ ನೋಂದಣಿ ಸಂಖ್ಯೆ ಬೆನ್ನಹತ್ತಿದ್ದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.