2010-11ರಿಂದ 2019-20ನೇ ಸಾಲಿನವರೆಗೆ ಕೈಗೊಂಡ ತಪಾಸಣೆಯಲ್ಲಿ ಒಟ್ಟು 3,51,25,729 ರು. ಹಣ ದುರುಪಯೋಗ

ಮಂಡ್ಯ ಮಂಜುನಾಥ

ಮಂಡ್ಯ(ಸೆ.23): ಜಿಲ್ಲಾ ಪಂಚಾಯ್ತಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಚೇರಿಯ ಲೆಕ್ಕಪತ್ರಗಳ ಬಗ್ಗೆ 2010-11ರಿಂದ 2019-20ನೇ ಸಾಲಿನವರೆಗೆ ಕೈಗೊಂಡ ತಪಾಸಣೆಯಲ್ಲಿ ಒಟ್ಟು 3,51,25,729 ರು. ಹಣ ದುರುಪಯೋಗವಾಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ನೌಕರರ ವಿರುದ್ಧದ ಆರೋಪಗಳ ಕುರಿತು ವಿವರವಾದ ಇಲಾಖಾ ವಿಚಾರಣೆಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 11ರ ಅಡಿ ಕ್ರಮ ಕೈಗೊಂಡು ನಿವೃತ್ತ ನ್ಯಾಯಾಧೀಶ ಜಿ.ಎಸ್‌.ಸೋಮಶೇಖರ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಚಂದ್ರಹಾಸ, ರಾಮಕೃಷ್ಣ, ಎಸ್‌.ವಿ.ಪದ್ಮನಾಭ, ಪ್ರಕಾಶ್‌ ಗೋಪಾಲಕೃಷ್ಣ ಪವರ್‌, ಎಸ್‌.ಕುಮಾರ್‌, ಲೆಕ್ಕ ಪರಿಶೋಧಕರಾದ ಕೆ.ಪುಟ್ಟಬೋರಯ್ಯ, ಆರ್‌.ರಾಜು, ಲೆಕ್ಕ ಅಧೀಕ್ಷಕ ವಿ.ಪಿ. ಆನಂದಕುಮಾರ್‌, ನಗದು ಸಹಾಯಕರಾದ ಬಿ.ಆರ್‌.ಚಂದ್ರಶೇಖರ್‌, ಟಿ.ಲಕ್ಷ್ಮೇಕಾಂತ್‌, ಬಿ.ರಮೇಶ್‌ ಅವರ ವಿರುದ್ಧ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ 408, 409, 465, 468, 417 ಹಾಗೂ 420ರಡಿ ಪ್ರಕರಣ ದಾಖಲಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.

ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ ಬಿಜೆಪಿ: ಮಹಮ್ಮದ್‌ ನಲಪಾಡ್‌

ಏನಾಗಿತ್ತು?

2010-11ರಿಂದ 2019-20ರವರೆಗೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ ಕಚೇರಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ, ಸಂಸದರ ನಿಧಿ, ಟೆಂಡರ್‌ದಾರರ ಭದ್ರತಾ ಠೇವಣಿ ಸೇರಿದಂತೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 3.51 ಕೋಟಿ ರು. ಹಣ ದುರುಪಯೋಗವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಣ ದುರ್ಬಳಕೆ ಮಾಡಿಕೊಂಡಿರುವುದರ ಹಿಂದೆ ಅಧಿಕಾರಿಗಳ ಕೈವಾಡವಿರುವುದು ಇಲಾಖಾ ವಿಚಾರಣೆಯಿಂದ ಗೊತ್ತಾಗಿದೆ.

ಕಚೇರಿಯ ಡಿ-ಗ್ರೂಪ್‌ ನೌಕರ ಎಚ್‌.ಎಲ್‌.ನಾಗರಾಜು ಆರಂಭದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ 52.25 ಲಕ್ಷ ರು., ಕಾರ್ಪೋರೇಷನ್‌ ಬ್ಯಾಂಕ್‌ನಿಂದ 20,66,465 ರು. ಸೇರಿದಂತೆ 72,91,465 ರು.ವನ್ನು ಬ್ಯಾಂಕ್‌ ಖಾತೆಯಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿತ್ತು. ಇದರ ಆಧಾರದ ಮೇಲೆ ಎಚ್‌.ಎಲ್‌.ನಾಗರಾಜು ವಿರುದ್ಧ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್‌.ವಿ.ಪದ್ಮನಾಭ ನಗರದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದರು.

ನಂತರದಲ್ಲಿ ಮಧ್ಯಂತರ ಲೆಕ್ಕ ಪರಿಶೋಧಕರ ತಂಡದಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ ಕಾರ್ಪೋರೇಷನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಎಸ್‌ಬಿಐ ಬ್ಯಾಂಕ್‌ಗಳ ಖಾತೆಯಲ್ಲಿದ್ದ ಹಣ ಕೂಡ ಕಚೇರಿಯಿಂದ ಅಧಿಕೃತ ಉದ್ದೇಶಗಳಿಗೆ ಪಾವತಿಯಾಗದೆ ದುರ್ಬಳಕೆಯಾಗಿರುವುದು ಕಂಡುಬಂದಿದೆ.

ಹಣ ಡ್ರಾ ಮಾಡಿದ್ದ ಡಿ-ಗ್ರೂಪ್‌ ನೌಕರ:

ವಿಚಿತ್ರವೆಂದರೆ ಇಷ್ಟೆಲ್ಲಾ ಅಧಿಕಾರಿಗಳು, ಲೆಕ್ಕ ಪರಿಶೋಧಕರು, ಅಧೀಕ್ಷಕರು, ನಗದು ಸಹಾಯಕರಿದ್ದರೂ ಹತ್ತು ವರ್ಷಗಳ ಅವಧಿಯವರೆಗೆ ಡಿ-ಗ್ರೂಪ್‌ ನೌಕರ ಎಚ್‌.ಎಲ್‌.ನಾಗರಾಜು ಮಾತ್ರ 3,51,25,729 ರು. ಹಣ ಡ್ರಾ ಮಾಡಿರುವುದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿತ್ತು. ಈತ 8 ಮೇ 2020ರಂದು ಮರಣ ಹೊಂದಿದ್ದಾನೆ.

ಬೆಳಕಿಗೆ ಬಂದದ್ದು ಹೇಗೆ?

ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೃತ ಗುತ್ತಿಗೆದಾರ ಮಾದಪ್ಪ ಅವರ ಹೆಸರಿನಲ್ಲಿ 1,39,285 ರು. ಭದ್ರತಾ ಠೇವಣಿ ಹಣವಿತ್ತು. ಈ ಹಣವನ್ನು ಯಾರಿಗೆ ಕೊಡಬೇಕು ಎಂಬ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ ಪ್ರಕರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದ ಮೆಟ್ಟಿಲೇರಿತು. ಸಂಬಂಧಿಸಿದ ವಾರಸುದಾರರಿಗೆ ಹಣ ನೀಡಲು ನ್ಯಾಯಾಲಯ ಸೂಚಿಸಿತ್ತು. ಅದರಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಂಡ್ಯ ಶಾಖೆಯ ಬ್ಯಾಂಕ್‌ ಖಾತೆ ಸಂಖ್ಯೆ (64045185776)ರಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಲೆಕ್ಕ ಅಧೀಕ್ಷಕರ ಜಂಟಿ ಖಾತೆಯಲ್ಲಿ ಇಡಲಾಗಿದ್ದ ಠೇವಣಿ ಹಣದ ಬಗ್ಗೆ 11 ಅಕ್ಟೋಬರ್‌ 2019ರಂದು ಪರಿಶೀಲನೆ ನಡೆಸಿದಾಗ ಬ್ಯಾಂಕ್‌ ಖಾತೆಯಲ್ಲಿ ಕೇವಲ 5067 ರು. ಮಾತ್ರ ಇರುವುದು ಕಂಡುಬಂದಿತು. ಆಗ ಹಣ ದುರ್ಬಳಕೆ ಪ್ರಕರಣ ಬಯಲಾಗಿತ್ತು.

ಲೋಪಗಳು ಏನು?

ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ 331 ಮತ್ತು ಕರ್ನಾಟಕ ಖಜಾನೆ ಸಂಹಿತೆ ನಿಯಮ 124 ಮತ್ತು 140ರ ಪ್ರಕಾರ ಮೂರು ವರ್ಷದ ನಗದು ವಹಿಯನ್ನು ನಿರ್ವಹಿಸಿಲ್ಲ. ಪ್ರತಿ ತಿಂಗಳು ಬ್ಯಾಂಕ್‌ ಪಾಸ್‌ ಶೀಟ್‌/ಪಾಸ್‌ ಪುಸ್ತಕದೊಂದಿಗೆ ಲೆಕ್ಕ ಸಮನ್ವಯಗೊಳಿಸದಿರುವುದು. ಚೆಕ್‌ ಪುಸ್ತಕದ ನಕಲು ಪ್ರತಿಯನ್ನು ತನಿಖೆಗೆ ಹಾಜರುಪಡಿಸದಿರುವುದು ಮಧ್ಯಂತರ ಲೆಕ್ಕ ಪರಿಶೋಧಕರ ತಂಡ ನಡೆಸಿದ ತನಿಖೆಯಿಂದ ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಅಧಿಕಾರಿಗಳು, ನೌಕರರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.

ನಾನು ದ್ವೇಷದ ರಾಜಕಾರಣ ಮಾಡಲ್ಲ: ಸಚಿವ ಕೆ.ಸಿ.ನಾರಾಯಣಗೌಡ

ಎಂಎಲ್‌ಎ/ಎಂಎಲ್‌ಸಿ/ಎಂಪಿ ಅನುದಾನಕ್ಕೂ ಕನ್ನ

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಚೇರಿಯಲ್ಲಿ ನಡೆದಿರುವ ಹಣ ದುರುಪಯೋಗ ಪ್ರಕರಣದಲ್ಲಿ ಕೈವಾಡ ನಡೆಸಿರುವ ಖದೀಮರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಲೋಕಸಭಾ ಸದಸ್ಯರ ನಿಧಿಗೂ ಕನ್ನ ಹಾಕಿರುವುದು ನಿಬ್ಬೆರಗಾಗುವಂತೆ ಮಾಡಿತ್ತು. ಮಂಡ್ಯದ ಕಾರ್ಪೋರೇಷನ್‌ ಬ್ಯಾಂಕ್‌ನ ಖಾತೆ ಸಂಖ್ಯೆ 52010232887108ರಲ್ಲಿ ಠೇವಣಿ ಇಡಲಾಗಿದ್ದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 98,26,384 ರು. ಎಗರಿಸಿದ್ದರು. ಇನ್ನು ಕೆನರಾಬ್ಯಾಂಕ್‌ ಖಾತೆ ಸಂಖ್ಯೆ 5251101001197ಯಲ್ಲಿ ಠೇವಣಿ ಇಟ್ಟಿದ್ದ ಲೋಕಸಭಾ ಸದಸ್ಯರ ಅನುದಾನದಲ್ಲಿ 22,226 ರು. ಹಣ ದುರ್ಬಳಕೆ ಆಗಿತ್ತು. ಉಳಿದಂತೆ 3054ರ ಅನುದಾನದಿಂದ 3,33,387 ರು. ಇತರೆ ಇಲಾಖೆಗಳ ಖಾತೆಯಿಂದ 1,14,798 ರು. ನೆಫ್ಟ್‌ ಖಾತೆಯಿಂದ 52,25,000 ರು. ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಿಂದ ಖಚಿತಪಟ್ಟಿತ್ತು.

ವಿಭಾಗ ಕಚೇರಿಯ ಅನುದಾನಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್‌ ಖಾತೆಯಲ್ಲಿ ಜಮೆ ಆಗಿದ್ದ ಹಣವನ್ನು ಬ್ಯಾಂಕ್‌ ಸಿಬ್ಬಂದಿ ಪ್ರಚಲಿತ ಆದೇಶ, ನಿಯಮಗಳಿಗೆ ವಿರುದ್ಧವಾಗಿ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿ ಗಂಭೀರ ಸ್ವರೂಪದ ಲೋಪವೆಸಗಿದ್ದಾರೆ. ಆದ್ದರಿಂದ ದುರುಪಯೋಗವಾಗಿರುವ ಮೊತ್ತವನ್ನು ಸರ್ಕಾರಕ್ಕೆ ಮರು ಪಾವತಿಸುವ ಸಂಬಂಧ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕಾರ್ಪೋರೇಷನ್‌ ಬ್ಯಾಂಕ್‌ ಮಂಡ್ಯ ಶಾಖೆ ಇವರ ವಿರುದ್ಧವೂ ಬೆಂಗಳೂರಿನ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಲಾಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.