ಬಳ್ಳಾರಿ(ಜೂ.25):  ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಇದರಿಂದ ಸೋಂಕಿನಿಂದ ಮೃತರ ಸಂಖ್ಯೆ 7ಕ್ಕೇರಿದೆ. ತೀವ್ರಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ರಾಯದುರ್ಗಂ ಮಂಡಲಂನ 28 ವರ್ಷದ ಯುವಕ ಇಲ್ಲಿನ ವಿಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜೂ. 18ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತರಾಗಿದ್ದು, ಇವ​ರಿಗೆ ಕೊರೋನಾ ವೈರಸ್‌ ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹೊಸ 28 ಪ್ರಕರಣಗಳು ಪತ್ತೆ:

ಜಿಲ್ಲೆಯಲ್ಲಿ ಬುಧವಾರ 28 ವೈರಸ್‌ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಒಟ್ಟು 537 ಜನರಿಗೆ ಸೋಂಕು ಹಬ್ಬಿದಂತಾಗಿದೆ. ದೃಢಗೊಂಡ ಸೋಂಕಿತರ ಪೈಕಿ ಸಂಡೂರಿನ 4 ವರ್ಷದ ಮಗು ಹಾಗೂ 8 ವರ್ಷದ ಬಾಲಕಿ ಇದ್ದಾರೆ. ಹೆಚ್ಚಿನವರು 18ರಿಂದ 30 ವರ್ಷದೊಳಗಿನವರಾಗಿದ್ದಾರೆ. ಸಂಡೂರು 10, ಬಳ್ಳಾರಿ 7, ಹೊಸಪೇಟೆ 3, ಸಿರುಗುಪ್ಪ 3, ಹಗರಿಬೊಮ್ಮನಹಳ್ಳಿ 1, ಕೂಡ್ಲಿಗಿ 3 ಹಾಗೂ ಆಂಧ್ರಪ್ರದೇಶದ ರಾಯದುರ್ಗದ ಓರ್ವ ಯುವಕನಿದ್ದಾನೆ. ಬುಧವಾರ ಖಚಿತವಾಗಿರುವ ಸೋಂಕಿತರ ಪೈಕಿ ಜಿಂದಾಲ್‌ ಉದ್ಯೋಗಿಗಳು ಐದು ಜನರಿದ್ದಾರೆ.

ಸಿಬ್ಬಂದಿಗೆ ಕೊರೋನಾ ಸೋಂಕು: ಸಿರುಗುಪ್ಪದ PLD ಬ್ಯಾಂಕ್‌ ಸೀಲ್‌ಡೌನ್‌

ಈ ವರೆಗೆ ಜಿಲ್ಲೆಯಲ್ಲಿ 3,70,828 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. 15,117 ಜನರ ಗಂಟಲುದ್ರವ ಪರೀಕ್ಷೆಯಾಗಿದೆ. ಈ ಪೈಕಿ 537 ಪಾಸಿಟಿವ್‌ ಬಂದಿದ್ದು 14,291 ನೆಗೆಟೀವ್‌ ಬಂದಿವೆ. 145 ಜನರು ಗುಣಮುಖರಾಗಿದ್ದಾರೆ. ಇನ್ನು 289 ಜನರ ಗಂಟಲುದ್ರವದ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.