ಕಾಲು ಕೆಜಿ ಬೇಳೆಯಲ್ಲಿ ತಿಂಗಳು ಪೂರ್ತಿ ಸಾಂಬಾರು, ಹುಳ ತುಂಬಿದ ಅಕ್ಕಿ, ಬೆಳೆಯಲ್ಲೇ ಅಡುಗೆ

ಬರೀ ಕಾಲು ಕೆಜಿ ಬೇಳೆಯಲ್ಲಿ ತಿಂಗಳು ಪೂರ್ತಿ ಸಾಂಬಾರು ಮಾಡಿರುವ ಘಟನೆ ತುಮಕೂರಿನ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ಹುಳ ತುಂಬಿದ ಅಕ್ಕಿ, ಕಾಳುಗಳಲ್ಲಿಯೇ ಅಡುಗೆ ಮಾಡಿ ನೀಡಲಾಗುತ್ತಿದ್ದು, ಬಹಳಷ್ಟು ಸಲ ಮಕ್ಕಳು ಉಪವಾಸವಿರುವಂತಾಗಿದೆ.

 

250 grams of dal used whole month in tumakur girls hostel

ತುರುವೇಕೆರೆ(ಜ.24): ನಾವು ಬಡವರ ಮಕ್ಕಳು ಅಂತ ಇಷ್ಟೊಂದು ತಾತ್ಸಾರನಾ. ಅವರು ಹೇಗೆ ಮಾಡಿ ಹಾಕಿದ್ರೂ ತಿನ್ನಬೇಕಾ, ಅದರ ಬಗ್ಗೆ ಏನನ್ನೂ ಕೇಳಬಾರದಾ. ನಮ್‌ ನೋವನ್ನೂ ಕೇಳೋರು ಯಾರೂ ಇಲ್ವಾ ಸಾರ್‌. ಇದು ಪಟ್ಟಣದ ಸಮಾಜ ಕಲ್ಯಾಣಾ ಇಲಾಖೆಯಡಿ ನಡೆಯುತ್ತಿರುವ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರ ಅಳಲು.

ಹೌದು, ಇದು ನೂರಕ್ಕೆ ನೂರು ಸತ್ಯ. ಈ ವಸತಿ ಶಾಲೆಯಲ್ಲಿ ವಾರ್ಡನ್‌ ಆಗಿರುವ ನಾಗಮಣಿಗೆ ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆಯ ಹಾಸ್ಟಲ್‌ಗಳ ಜವಾಬ್ದಾರಿ ನೀಡಲಾಗಿದೆ. ಇವರು ವಾರದಲ್ಲಿ ಒಂದೆರೆಡು ದಿನ ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವಸತಿ ನಿಲಯದಲ್ಲಿ 5 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಒಟ್ಟು 24 ವಿದ್ಯಾರ್ಥಿನಿಯರಿದ್ದು, ಬಹುಪಾಲು ಗ್ರಾಮಾಂತರ ಹಾಗೂ ಬಡ ಮಕ್ಕಳೇ ಇಲ್ಲಿ ಆಶ್ರಯ ಪಡೆದಿದ್ದಾರೆ.

ಹುಳ ಬಂದಿರೋ ಕಾಳುಗಳೇ ಮಕ್ಕಳಿಗೆ ಆಹಾರ:

ಈ ವಸತಿ ನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಎಂಬುದು ಮರೀಚಿಕೆಯೇ ಆಗಿದೆ. ಅಕ್ಕಿ, ಬೇಳೆ, ಗೋದಿ, ಅವಲಕ್ಕಿ ಮೊದಲಾದ ದಿನಸಿ ಪದಾರ್ಥಗಳಿಗೆ ಹುಳು ಮುತ್ತಿಕ್ಕಿವೆ. ಪಿತಪಿತ ಎಂದು ಕಪ್ಪನೆಯ ಹುಳು, ಬಿಳಿಯ ಹುಳು ಹರಿದಾಡುತ್ತಿವೆ. ಅವೇ ಈ ಮಕ್ಕಳ ದಿನ ನಿತ್ಯದ ಆಹಾರ. ಸಾಂಬಾರ್‌, ಅನ್ನದಲ್ಲಿ ಹುಳಗಳು ಇವೆ ಮೇಡಮ್‌ ಎಂದರೆ ಬಾಯಿ ಮುಚ್ಕೊಂಡು ತಿನ್ರೆ. ನಿಮ್ಮನೇಲಿ ಇದ್ದಿದ್ದರೆ ಸುಮ್ನೆ ತಿನ್ತಿರ್ಲಿಲ್ವಾ. ಅಂತಾ ಬೈತಾರೆ. ಏನ್‌ ನಿಮ್‌ ಮನೇಲಿ ಹೈಕ್ಲಾಸ್‌ ಆಗಿ ಮಾಡ್ತಾರಾ. ಸುಮ್ನೆ ತಿಂದು ಹೋಗ್ರೆ ಅಂತ ದಬಾಯಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿನಿಯರು.

ಕೊಳೆತ ಬಾಳೆ ಹಣ್ಣು:

ಕೊಳೆತು ಹೋಗಿರೋ ಬಾಳೇಹಣ್ಣೇ ನಮಗೆ ಗತಿ. ಮೊಟ್ಟೆ, ಚಿಕನ್‌ ನೋಡಿ ಎಷ್ಟೋ ತಿಂಗಳುಗಳಾಗಿವೆ. ದೋಸೆ, ಚಪಾತಿ, ಪೂರಿಗೆಲ್ಲಾ ಬರೀ ಚಟ್ನಿ, ಸಾಂಬಾರೋ ನೀರೋ ನೀರು. ತರಕಾರಿ ಎಂಬುದನ್ನು ಎಣಿಸಿ ಇಡಬಹುದು. ಇದನ್ನು ಕೇಳಿದರೆ ಮನೆಗೆ ಕಳುಸ್ತೀನಿ ಅಂತ ಹೇಳ್ತಾರೆ. ಹೀಗಾದರೆ ನಾವು ಹೇಗೆ ಇಲ್ಲಿ ಇರೋದು ನೀವೇ ಹೇಳಿ ಎಂದು ನೊಂದು ಪ್ರಶ್ನಿಸುತ್ತಾರೆ ಇಲ್ಲಿನ ಮಕ್ಕಳು.

ಕಿತ್ತು ಹೋದ ಹಾಸಿಗೆಗಳು:

ಸರ್ಕಾರ ವಸತಿ ನಿಲಯಗಳ ಮೂಲಸೌಕರ್ಯಕ್ಕಾಗಿ ಕೋಟ್ಯಂತರ ಖರ್ಚು ಮಾಡುತ್ತಿದೆ. ಆದರೆ, ಇಲ್ಲಿ ಹಾಸಿಗೆಗಳು ಕಿತ್ತು ಹೋಗಿವೆ. ನಾರು ಹೊರ ಬಂದಿವೆ. ಧೂಳು ಮೂಗಿಗೆ ಬಡಿಯುತ್ತವೆ. ಬೆಡ್‌ ಶೀಟ್‌ ಮತ್ತು ಹೊದಿಕೆಗಳು ಹರಿದು ಹೋಗಿವೆ. ಹೊಸದು ಬಂದಿದ್ದರೂ ನಮಗೆ ಕೊಟ್ಟಿಲ್ಲ. ಈ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಹಾಸ್ಟೆಲ್‌ ಪಕ್ಕದಲ್ಲೇ ಅವರ ಆಫೀಸ್‌ ಇದ್ದರೂ ಇದುವರೆಗೂ ಇಲ್ಲಿಗೆ ಬಂದಿಲ್ಲ. ತನಿಖೆ ಮಾಡಿಲ್ಲ ಎಂದು ಮಕ್ಕಳು ಬೇಸರ ವ್ಯಕ್ತಪಡಿಸಿದರು.

ಕಾಲು ಕೇಜಿ ಬೇಳೆಯಲ್ಲೇ ತಿಂಗಳವರೆಗೂ ಸಾಂಬರ್‌:

24 ಮಕ್ಕಳಿಗೆ ಕಾಲು ಕೇಜಿ ಬೇಳೆಯಲ್ಲಿ ಸಾಂಬಾರು ಮಾಡಿ ಹಾಕಬೇಕು. ಟೀ ಪುಡಿ ಕಾಯಿಸಿದರೆ, ರಕ್ತದ ಬಣ್ಣ ಬರುತ್ತೆ. ತರಕಾರಿಗಳು ಕೊಳೆತು ಹೋಗಿರುತ್ತೆ. ವಾರಕ್ಕೊಮ್ಮೆ ಒಂದಿಷ್ಟುತರಕಾರಿ ತಂದರೆ ಮುಗೀತು. ಅದನ್ನೇ ಹೊಂದಿಸಿಕೊಂಡು ಅಡುಗೆ ಮಾಡಬೇಕು. ಪೇಪರ್‌ನಲ್ಲಿ ಸುತ್ತಿ ಒಂದಿಷ್ಟುಬೇಳೆ ಕಾಳುಗಳನ್ನು ಕೊಡ್ತಾರೆ. ಅದನ್ನೇ ಹಾಕಿ ಅಡುಗೆ ಮಾಡಬೇಕು. ಅವರು ಬರುವ ತನಕ ಅಷ್ಟರಲ್ಲೆ ಅಡುಗೆ ಪೂರೈಸಬೇಕು ಎಂದು ಮಕ್ಕಳು ಕನ್ನಡಪ್ರಭದೊಂದಿಗೆ ತಮ್ಮ ಅಳಲು ವ್ಯಕ್ತಪಡಿಸಿದರು.

ಎಷ್ಟೋ ದಿನ ಕಡ್ಲೆ ಪುರಿಯೇ ಊಟ!

ಕಳೆದ ಕೆಲ ದಿನಗಳ ಹಿಂದೆ ಹಾಸ್ಟೆಲ್‌ಗೆ ವಿದ್ಯುತ್‌ ರಿಪೇರಿ ಮಾಡಿಸಲಾಗಿದೆ ಎಂದು ಸುಮಾರು .50 ಸಾವಿರಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಲಾಗಿದೆ. ಆದ್ರೆ ಫ್ಯಾನೇ ಓಡಲ್ಲ. ಒಂದು ಸ್ವಿಚ್‌ ಹಾಕಿದರೆ ಎರಡೆರಡು ಲೈಟ್‌ ಆನ್‌ ಆಗುತ್ತವೆ. ಕೆಲವು ಆಫ್‌ ಆಗದೇ ಇಲ್ಲ. ವಸತಿ ಶಾಲೆಗೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ಚಿಕ್ಕನಾಯಕನಹಳ್ಳಿಯಿಂದಲೇ ವಾರ್ಡನ್‌ ತರ್ತಾರೆ. ಎಷ್ಟೊದಿನ ಕಡ್ಲೆ ಪುರಿಯಲ್ಲೇ ದಿನದೂಡಿಸಿದ್ದಾರೆ ಎನ್ನುತ್ತಾರೆ ಮಕ್ಕಳು.

ಜನಪ್ರತಿನಿಧಿಗಳ ನಿರ್ಲಕ್ಷ್ಯ:

ಬಡವರ ಮಕ್ಕಳಿರೋ ಇಂತಹ ವಸತಿ ಶಾಲೆಗಳನ್ನು ಯಾವ ಜನಪ್ರತಿನಿಧಿಗಳೂ ನೋಡಕ್ಕೆ ಬರಲ್ಲ. ಬಡವರು ಅಂದ್ರೆ ಅವರಿಗೂ ತಾತ್ಸಾರ. ಹಾಗಾಗಿ ಇಲ್ಲಿಯ ವಾರ್ಡನ್‌ ತಮ್ಮನ್ನು ಯಾರೂ ಕೇಳೋರಿಲ್ಲ ಅಂತ ಹೇಳಿ ತಮ್ಮ ಮನಸ್ಸಿಗೆ ಬಂದ ಹಾಗೆ ಮಾಡ್ತಾರೆ. ನಾವು ಅಧಿಕಾರಿಗಳಿಗೂ ಬೇಡವಾಗಿದ್ದೇವೆ. ಜನಪ್ರತಿನಿಧಿಗಳಿಗೂ ಬೇಡವಾಗಿದ್ದೇವೆ. ದಯಮಾಡಿ ನೀವಾದ್ರೂ ನಮ್ಮಗೆ ದಾರಿ ತೋರಿಸಿ. ಉತ್ತಮವಾದ ಊಟ, ತಿಂಡಿ, ಬಟ್ಟೆಕೊಡ್ಸಿ. ನಮ್‌ ಆರೋಗ್ಯ ಕಾಪಾಡಿಕೊಳ್ಳೋಕೆ ಸಹಕರಿಸಿ ಎಂದು ದೈನತೆಯಿಂದ ಮಕ್ಕಳು ಬೇಡಿಕೊಳ್ಳುತ್ತಿವೆ.

ಉಪವಾಸದ ಎಚ್ಚರಿಕೆ:

ಇದೇ ಅವ್ಯವಸ್ಥೆ ನಮ್ಮ ಹಾಸ್ಟೆಲ್‌ನಲ್ಲಿ ಮುಂದುವರಿದಲ್ಲಿ ಹಿರಿಯ ಅಧಿಕಾರಿಗಳು, ಶಾಸಕರು ಬರುವವರೆಗೂ ನಾವೆಲ್ಲರೂ ಉಪವಾಸ ಕೂರ್ತೀವಿ. ತಾಲೂಕು ಕಚೇರಿ, ಶಾಸಕರ ಮನೆ ಮುಂದೆ ಧರಣಿ ಕೂರ್ತೀವಿ ಎಂದು ಏರು ದನಿಯಲ್ಲೇ ಮಕ್ಕಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ.

ಇಲ್ಲಿ ಇಬ್ಬರು ಅಡಿಗೆಯವರು, ಒಬ್ಬರು ಸಹಾಯಕಿ ಇದ್ದಾರೆ. ಇವರನ್ನು ಮಕ್ಕಳ ದೂರಿನ ಬಗ್ಗೆ ಪ್ರಶ್ನಿಸಿದರೆ, ವಾರ್ಡನ್‌ ಏನು ನಮಗೆ ಕೊಡ್ತಾರೋ ಅದರಲ್ಲಿ ಅಡುಗೆ ಮಾಡ್ತೀವಿ ಎಂದು ತಮ್ಮ ಅಸಹಾಯಕತೆ ತೋರ್ಪಡಿಸುತ್ತಾರೆ.

-ಎಸ್‌.ನಾಗಭೂಷಣ

Latest Videos
Follow Us:
Download App:
  • android
  • ios