ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ, ಸಾರಾಯಿ ಎಂದು ಭಾವಿಸಿ ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿದ ಪರಿಣಾಮ ರಮೇಶ್ ಹೊಸಳ್ಳಿ (25) ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಇತರ ಇಬ್ಬರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಪ್ಪಳ: ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವನೆ ಮಾಡಿದ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್

ಮೃತನನ್ನು ರಮೇಶ್ ಹೊಸಳ್ಳಿ (25)ಎಂದು ಗುರುತಿಸಲಾಗಿದೆ. ಫೆ.4ರ ರಾತ್ರಿ ಸುಮಾರು 8 ಗಂಟೆಗೆ ಗ್ರಾಮದ ಸೀಮೆಯ ಬಸವರಾಜ ಶಾನಭೋಗ ಎಂಬುವವರ ಹೊಲದಲ್ಲಿ ಮೃತ ಯುವಕ ಸೇರಿದಂತೆ ಶರಣಪ್ಪ ಹಂಚಿನಾಳ,ಶರಣಪ್ಪ ಗುರಿಕಾರ, ಅಮರಯ್ಯ ಹಿರೇಮಠ ಇದ್ದಾಗ ಈ ವೇಳೆ ಮಾರುತಿ ರಾಮಪ್ಪ ಬಂಡಿ ಮತ್ತು ಶರಣಪ್ಪ ಪವಾಡೆಪ್ಪ ಗುರಿಕಾರ ಎಂಬುವವರು ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಅನ್ನು ಸರಾಯಿ ಎಂದು ನೀಡಿ ಕುಡಿಸಲು ನೀಡಿದರೆಂದು ಆರೋಪಿಸಲಾಗಿದೆ.

ಸ್ಪಿರಿಟ್ ಸೇವಿಸಿದ ನಂತರ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಶನಿವಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಮರಯ್ಯ ಹಿರೇಮಠ ಹಾಗೂ ಶರಣಪ್ಪ ಹಂಚಿನಾಳ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೊಬ್ಬ ಯುವಕ ಶರಣಪ್ಪನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.

ಇಬ್ಬರ ವಿರುದ್ಧ ಪ್ರಕರಣ ದಾಖಲು

ಮೃತನ ತಂದೆ ಯಮನಪ್ಪ ಹೊಸಳ್ಳಿ ನೀಡಿದ ದೂರಿನ ಮೇರೆಗೆ ಸ್ಪಿರಿಟ್ ಕುಡಿಯಲು ನೀಡಿದ ಇಬ್ಬರ ವಿರುದ್ಧ ಮುನಿರಾಬಾದ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.