ಶಿವನ ಧ್ಯಾನಕ್ಕೆ ಸಜ್ಜಾದ ಕಲಬುರಗಿ: ಶಿವರಾತ್ರಿಗೆ 25 ಅಡಿ ಎತ್ತರದ ತೊಗರಿ ಶಿವಲಿಂಗ

ಶಿವರಾತ್ರಿಗೆ 25 ಅಡಿ ತೊಗರಿ ಶಿವಲಿಂಗ ಕಲಬುರಗಿ- ಸರಡಗಿ ಏರ್ಪೋರ್ಟ್ ರಸ್ತೆ ಗೀತಾ ನಗರ ಬ್ರಹ್ಮಕುಮಾರಿ ಅಮೃತ ಸರೋವರದಲ್ಲಿ ದೆ ತೊಗರಿ ಶಿವಲಿಂಗ ನಾಳಿನ ಶಿವರಾತ್ರಿಯ ಪ್ರಮುಖ ಆಕರ್ಷಣೆ | 3 ಕ್ವಿಂಟಲ್ ತೊಗರಿ ಬಳಸಿ 25 ಅಡಿ ಎತ್ತರದ ಶಿವಲಿಂಗ ನಿರ್ಮಾಣ|

25 Feet High Tur Dal Shivalinga in Kalaburagi

ಶೇಷಮೂರ್ತಿ ಅವಧಾನಿ 

ಕಲಬುರಗಿ(ಫೆ.20): ಬಿಸಿಲೂರು ಕಲಬುರಗಿ ಮಹಾನಗರದ ಹೊರವಲಯದಲ್ಲಿ ರುವ ಬ್ರಹ್ಮಕುಮಾರಿ ವಿವಿ ‘ಅಮೃತ ಸರೋವರ’ ಅಂಗಳದಲ್ಲಿ ಈ ಬಾರಿ ಶಿವರಾತ್ರಿಯನ್ನು ಹಿಂದೆಂದಿಗಿಂತ ತುಂಬ ಭಿನ್ನವಾಗಿ ಹಾಗೂ ನವ ನವೀನವಾಗಿ ಆಚರಿಸಲು ಭರದ ಸಿದ್ಧತೆಗಳು ಸಾಗಿವೆ. 

ಕಳೆದ ಬಾರಿ ‘ಕಲ್ಪತರು’ ತೆಂಗಿನಕಾಯಿ ಸಾವಿರಾರು ಸಂಖ್ಯೆಯಲ್ಲಿ ಬಳಸಿ ಆಕರ್ಷಕ ಶಿವಲಿಂಗ ನಿರ್ಮಿಸಿ ಶಿವರಾತ್ರಿ ಸುತ್ತಮುತ್ತ ಕಲಬುರಗಿ ಹಾಗೂ ಸುತ್ತಲಿನ ಸೀಮೆಯಲ್ಲಿ ಮನೆಮಾತಾಗಿದ್ದ ಬ್ರಹ್ಮಕುಮಾರಿ ವಿವಿ ಈ ಬಾರಿ ಬಿಸಿಲೂರಿನ ಹೆಸರಾಂತ ‘ತೊಗರಿ ಬ್ರ್ಯಾಂಡ್’ ಬಳಸಿ ಶಿವರಾತ್ರಿ ಅವಿಸ್ಮರಣೀಯವಾಗಿಸಲು ಹೊರಟಿದೆ. 

ಜನರನ್ನು ಪರಶಿವನ ಧ್ಯಾನಕ್ಕೆ ಹಚ್ಚುವ ದಿಶೆಯಲ್ಲಿ ‘ಶಿವರಾತ್ರಿ’ ಸುತ್ತಮುತ್ತ ಹೆಚ್ಚಿನ ಪರಿಶ್ರಮ ವಹಿಸಿಸುವ ಬ್ರಹ್ಮ ಕುಮಾರಿ ಈಶ್ವರೀಯ ವಿವಿ ಆಡಳಿತ ವರ್ಗ ‘ತೊಗರಿ’ ಕಾಳು ಬಳಸಿ ಸುಂದರ ಶಿವಲಿಂಗ ನಿರ್ಮಿಸುವ ಮೂಲಕ ಮತ್ತೊಮ್ಮೆ ಲಕ್ಷಾಂತರ ಜನ ಶಿವರಾತ್ರಿ ಸುತ್ತಮುತ್ತ ಪರಮ ಪಿತನ ಶ್ರವಣ, ಮನನ, ಧ್ಯಾನಾದಿಗಳೊಂದಿಗೆ ಶಿವರಾತ್ರಿ ಸಡಗರದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಲಬುರಗಿ- ಶ್ರೀನಿವಾಸ ಸರಡಗಿ ಏರ್ಪೋರ್ಟ್ ರಸ್ತೆಯಲ್ಲಿರುವ ಗೀತಾ ನಗರದ ಗುಡ್ಡದ ಮೇಲಿರುವ  5 ಎಕರೆ ಪರಿ ಸರವನ್ನೇ ಹಸಿರು ನಂದನವನವಾಗಿಸುವ ಮೂಲಕ ಈಗಾಗಲೇ ಸರ್ವರ ಗಮನ ಸೆಳೆದಿರುವ ಬ್ರಹ್ಮಕುಮಾರಿ ವಿವಿ ಇದೇ ಅಂಗಳದ ಹುಲ್ಲುಗಾವಲಲ್ಲಿ ನಾಳಿನ (ಫೆ.21ರ) ಶಿವರಾತ್ರಿ ಸ್ಪೇಷಲ್ ತೊಗರಿ ಶಿವಲಿಂಗ ನಿರ್ಮಿಸಿದೆ. 3 ಕ್ವಿಂಟಲ್ ತೊಗರಿ ಕಾಳು ಬಳಸಿ ನೆಲದಿಂದ 25 ಅಡಿ ಎತ್ತರ ಕಂಗೊಳಿಸುತ್ತಿರುವ ಶಿವಲಿಂಗ ತಕ್ಷಣ ಭಕ್ತಿಭಾವ ಉಕ್ಕಿಸುವಂತಿದೆ. ಹಸಿರು ವನಸಿರಿ, ಸುತ್ತಲಿನ ಹುಲ್ಲು ಹಾಸಿನಲ್ಲಿ ಕೆಂಪು ತೊಗರಿ ಕಾಳುಗಳಿಂದ ಕಂಗೊಳಿಸುತ್ತಿರುವ ಶಿವಲಿಂಗ ಫೆ.21ರ ಶಿವರಾತ್ರಿಯಿಂದ ಸಾವಿರಾರು ಶಿವ ಭಕ್ತರನ್ನು ತನ್ನತ್ತ ಸೆಳೆಯಲು ಸಿದ್ಧವಾಗಿ ನಿಂತಿದೆ. 

* ನೆಲದಿಂದ 25 ಅಡಿ ಎತ್ತರದ ಶಿವಲಿಂಗ ಇದು 
* ಶಿವಲಿಂಗ ನಿರ್ಮಾಣಕ್ಕೆ 3 ಕ್ವಿಂಟಲ್ ತೊಗರಿ ಕಾಳು ಬಳಕೆ 
* ತೊಗರಿ ಜೊತೆಗೇ ರುದ್ರಾಕ್ಷಿ ಮಾಲೆಗಳಿಂದ ವಿಶೇಷ ಅಲಂಕಾರ 
* ಶಿವಲಿಂಗದ ಎತ್ತರ 18 ಅಡಿ, ನೆಲದಿಂದ 7 ಅಡಿ ಬೃಹದಾಕಾರದ ಕಟ್ಟೆ ಮೇಲಿದೆ 
* ಕಟ್ಟೆ ಸುತ್ತಮುತ್ತ ಪ್ರಾಚೀನ ಕಾಲದ ಶಿಲ್ಪಕಲಾ ಸೌಂದರ್ಯ ಬಿಂಬಿಸುವ ಭಿತ್ತಿಚಿತ್ರಗಳು 
* ಶಿವಲಿಂಗಕ್ಕೆ ಬಳಸಲಾಗಿರುವ 3 ಕ್ವಿಂಟಲ್ ತೊಗರಿ ಮರು ಬಳಕೆಗೆ ವ್ಯವಸ್ಥೆ

ತೊಗರಿ ಶಿವಲಿಂಗ ನಿರ್ಮಾಣಕ್ಕೆ 8 ದಿನದಿಂದ ಸತತ ಕೆಲಸ ತೊಗರಿ ಶಿವಲಿಂಗ ನಿರ್ಮಾಣದ ಕೆಲಸ ವಾರದಿಂದ ನಿರಂತರ ಸಾಗಿದೆ. ಮೌಂಟ್ ಅಬುದಿಂದಲೇ ಎಂಜಿನಿಯರ್ ಮನೋಜ್ ಕಲಬುರಗಿಗೆ ಆಗಮಿಸಿದ್ದಾರೆ. ಸ್ಥಳೀಯವಾಗಿ ಶಿವಲೀಲಾ, ಬಿಕೆ ಪ್ರೇಮ್, ಬಿ.ಕೆ. ವಿಜಯಾ ಅಕ್ಕ, ಬಿ.ಕೆ. ದಾನೇಶ್ವರಿ ಸಹಕಾರ ನೀಡಿದ್ದಾರೆ. ಪ್ರತಿ ಶಿವರಾತ್ರಿಗೆ ವಿಶೇಷ ಅಲಂಕಾರ ಶಿವನಿಗೆ ಮಾಡುವ ಬ್ರಹ್ಮಕುಮಾರಿ ವಿವಿ ಈ ಬಾರಿ ಸ್ಥಳೀಯವಾಗಿ ಬೆಳೆಯುವ ತೊಗರಿಯನ್ನೇ ಬಳಸಿ ಗಮನ ಸೆಳೆದಿದೆ.

ಶಿವ ಅಲಂಕಾರ ಪ್ರಿಯನಲ್ಲ ಆದರೂ ಹೆಚ್ಚು ಜನರನ್ನು ಶಿವರಾತ್ರಿ ಧ್ಯಾನ, ಉಪವಾಸಾದಿಗಳತ್ತ ಆಕರ್ಷಿಸುವ ಮೂಲಕ ಶಿವನ ಸ್ಮರಣೆಗೆ ತೊಡಗುವಂತೆ ಮಾಡಲೆಂದೇ ವಿಭಿನ್ನ ಅಲಂಕಾರದ ಶಿವಲಿಂಗಗಳ ನಿರ್ಮಾಣ ಮಾಡಲಾಗಿದೆ. ಯಾದಗಿರಿ, ಕಲಬುರಗಿ, ಲಾತೂರ ಸೇರಿದಂತೆ ಸುತ್ತಲಿನ 1 ಲಕ್ಷಕ್ಕೂ ಅಧಿಕ ಶಿವಭಕ್ತರು ಅಮೃತ ಸರೋವರಕ್ಕೆ ಬಂದು ತೊಗರಿ ಶಿವಲಿಂಗ ದರುಶನ ಪಡೆಯುವ ನಿರೀಕ್ಷೆ ಇದೆ ಎಂದು ಕಲಬುರಗಿ ಬ್ರಹ್ಮಕುಮಾರಿ ಈಶ್ವರೀಯ ವಿವಿ ಮುಖ್ಯಸ್ಥರು ಬಿ.ಕೆ. ವಿಜಯಾ ಹೇಳಿದ್ದಾರೆ.  

ತೊಗರಿ ಶಿವಲಿಂಗ ಫೆ.21ರ ಶಿವರಾತ್ರಿಯಿಂದಲೇ 21 ದಿನಗಳ ಕಾಲ ಸಾರ್ವಜನಿಕರ ದರುಶನಕ್ಕೆ ಮುಕ್ತವಾಗಿರಲಿದೆ. ಸಾರ್ವಜನಿಕರು ಗೀತಾ ನಗರದ ಅಮೃತ ಸರೋವರಕ್ಕೆ ಭೇಟಿ ನೀಡುವ ಮೂಲಕ ವಿಶೇಷ ಶಿವಲಿಂಗ ದರುಶನದ ಜೊತೆಗೆ ಜೋಳ, ಚಿಪ್ಪು, ಮುತ್ತು, ಹವಳ, ಮನೂಕು, ಗೋಡಂಬಿ, ಪ್ರಣತಿ, ರುದ್ರಾಕ್ಷಿ, ನೋಟಿನ ವಿಶೇಷ ಅಲಂಕಾರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರುಶನ ಪಡೆದು ಪುನೀತರಾಗಲಿ ಎಂದು ಕಲಬುರಗಿ ಬ್ರಹ್ಮಕುಮಾರಿ ಶಿವಲೀಲಾ ಅಮೃತ ಸರೋವರ ಗೀತಾ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios