ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ. ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. 

ಉತ್ತರಕನ್ನಡ(ನ.26): ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಭಾನುವಾರ) ನಡೆದಿದೆ. ದುರ್ಘಟನೆಯಲ್ಲಿ ಬೈಕ್‌ ಸವಾರನಿಗೆ ಸಣ್ಣಪುಟ್ಟ ಗಾಯಗಳಾದ್ರೆ, ಮತ್ತೋರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿವೆ. 

ಭಟ್ಕಳದ ಕಾರ್ಗಲ್ ಮೂಲದ ನಿಕಿತಾ ಮಹಾಬಲೇಶ್ವರ ಗೊಂಡ (23) ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಮೃತ ನಿಕಿತಾ ಬೈಕ್‌ನ ಮಧ್ಯದ ಸೀಟ್‌ನಲ್ಲಿ ಕುಳಿತ್ತಿದ್ದಳು. ಬೈಕ್‌ ಚಲಾಯಿಸುತ್ತಿದ್ದ ಭಟ್ಕಳ ಗುಲ್ಮಿ ನಿವಾಸಿ ಗಣೇಶ್ ಗೊಂಡ (35)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್‌ನಲ್ಲಿದ್ದ ಇನ್ನೋರ್ವ ಗುಲ್ಮಿ ನಿವಾಸಿ ಗಿರಿಜಾ ಗೊಂಡ (45) ಅವರು ಗಂಭೀರವಾಗಿ ಗಾಯಗೊಂಡಿದ್ದಾಳೆ. 

ತುಮಕೂರು: ಬೆಂಗಳೂರು ಕಂಬಳ‌ ನೋಡಿ ವಾಪಸ್‌ ಬರೋವಾಗ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು

ಹೆಚ್ಚಿನ ಚಿಕಿತ್ಸೆಗಾಗಿ ಗಿರಿಜಾ ಗೊಂಡ ಅವರನ್ನು ಮಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಈ ಮೂವರು ಭಟ್ಕಳದಿಂದ ಶಿರಾಲಿಗೆ ತ್ರಿಬಲ್ ರೈಡಿಂಗ್‌ನಲ್ಲಿ ತೆರಳುತ್ತಿದ್ದರು. ಭಟ್ಕಳದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಯತ್ನಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಸ್ಥಳದಿಂದ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.