ಶಿವಮೊಗ್ಗ, [ಸೆ.02]: ತಾನು ಪ್ರೀತಿಸುತ್ತಿದ್ದ ಹುಡುಗಿ ರಾಖಿ ಕಟ್ಟಲು ಬಂದಾಗ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ಸಾಗರ ತಾಲೂಕಿನ ಅಣಲೇಕೊಪ್ಪದಲ್ಲಿ ನಡೆದಿದೆ.

ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ನಿವಾಸಿ ರಾಕೇಶ್ (22) ಎನ್ನುವಾತನೇ ಯುವತಿಗೆ ಚಾಕುವಿನಿಂದ ಹಲ್ಲೆ ಮಾಡಿದ ಯುವಕ. ಈತ ಅಣಲೇಕೊಪ್ಪದಲ್ಲಿರುವ ತಮ್ಮ ಸಂಬಂಧಿಕರ ಮನೆ ಪಕ್ಕದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಗಾಗ ತಮ್ಮ ಸಂಬಂಧಿಕರ ಮನೆಗೆ ಬಂದು ಲೈನ್ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ.

ಆದ್ರೆ ಇದಕ್ಕೆ ಹುಡುಗಿ ಇಷ್ಟ ಇಲ್ಲ ಎಂದು ಹೇಳಿದ್ದಾಳೆ. ಹಾಗಾದ್ರೆ ರಾಖಿ ಕಟ್ಟು ಬಾ ಎಂದು ರಾಕೇಶ್ ಕರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಇಂದು [ಸೋಮವಾರ] ರಾಕೇಶ್ ಗೆ ರಾಖಿ ಕಟ್ಟಲು ಮುಂದಾಗಿದ್ದಾಳೆ. ಇದ್ರಿಂದ ಕೆರಳಿದ ರಾಕೇಶ್ ಚಾಕುವಿನಿಂದ ಯುವತಿಯ ಮುಖಕ್ಕೆ ತಿವಿದು ಪರಾರಿಯಾಗಿದ್ದಾನೆ.

ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.