ಮುಂದಿನ ಚುನಾವಣೆ ಸ್ಪರ್ಧೆ ಕ್ಷೇತ್ರ ತಿಳಿಸಿದ ಯೋಗೇಶ್ವರ್
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಚಿವ ಸಿ ಪಿ ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣ (ಫೆ.15): ಇದು ನನ್ನ ಕಾರ್ಯಕ್ಷೇತ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದರು.
ನಗರದ 5ನೇ ಅಡ್ಡರಸ್ತೆಯ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಚುನಾವಣೆಗೆ ಹುಣಸೂರಿನಲ್ಲಿ ಸ್ಪರ್ಧೆ ಮಾಡುತ್ತಾರೆನ್ನುವ ಮಾತು ಸತ್ಯಕ್ಕೆ ದೂರ, ಅಲ್ಲಿಗೆ ನಾನು ಏತಕ್ಕೆ ಹೋಗಲಿ, ಈ ಕ್ಷೇತ್ರದಲ್ಲೇ ಇರುತ್ತೇನೆ. ರಾಜ್ಯ ಬಜೆಟ್‌ನಲ್ಲಿ ಪ್ರವಾಸೋದ್ಯಮ ಇಲಾಖೆಗೆ 5 ಸಾವಿರ ಕೋಟಿ ರು. ಮೀಸಲಿಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವರೊಟ್ಟಿಗೂ ಭೇಟಿ ಮಾಡಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮುಂದಿನ ವಾರ ಅಧಿಕಾರಿಗಳ ಸಭೆ ಕರೆದು ಎಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ರೂಪುರೇಷೆ ರಚಿಸಲಾಗುತ್ತದೆ, ಸಾರ್ವಜನಿಕರೂ ಸಹ ತಮ್ಮ ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಡಲಾಗುವುದು, ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಟ್ಟಗಳು, ಜಲಾಶಯಗಳ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಯೋಗೇಶ್ವರ್ ತಿಳಿಸಿದರು.
ಎಲ್ಲಾದರೂ ಸೈ, ನನಗೆ ಸಮಸ್ಯೆ ಇಲ್ಲ : ಯೋಗೇಶ್ವರ್ ...
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಮನ್ವಯತೆ ಸಾಧ್ಯವಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿರಲಿ ಎಲ್ಲವೂ ಸುಲಲಿತವಾಗಿ ಆಗುತ್ತಿವೆ, ರಾಜ್ಯದ ಸಂಸದರು ಸಹ ಸಾಥ್ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗೆ ಇನ್ನಷ್ಟುಪರಿಣಾಮಕಾರಿಯಾಗಿ ಶ್ರಮಿಸಲಾಗುತ್ತದೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪೆಟ್ರೋಲ್, ಡೀಸೆಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಯ ಮೇಲೆ ನಿಂತಿದೆ, ದೇಶ ವಿದ್ಯುತ್ ಸ್ವಾವಲಂಬನೆ ಸಾಧಿಸಿದೆ, ವಿದ್ಯುತ್ ಚಾಲಿತ ವಾಹನಗಳ ಹೆಚ್ಚಿನ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನತೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಮಾಡಿದರೆ ಪೆಟ್ರೋಲ್ ಬೆಲೆ ತಾನೇ ಇಳಿಕೆಯಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಪಂ ಅಧ್ಯಕ್ಷ ರಾಜಣ್ಣ, ಮುಖಂಡರಾದ ಮಲವೇಗೌಡ, ಕೃಷ್ಣಪ್ಪ, ವಿ.ಬಿ.ಚಂದ್ರು, ವಕೀಲ ಎಂ.ಕೆ.ನಿಂಗಪ್ಪ, ಅಕ್ಕೂರು ಗ್ರಾ.ಪಂ.ಅಧ್ಯಕ್ಷ ಅಶೋಕ್, ಜೆ.ಬ್ಯಾಡರಹಳ್ಳಿ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಇದ್ದರು.
ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ರಸ್ತೆಗಳು, ಮೆಟ್ರೋ 2ನೇ ಹಂತ, ಮೂಲಸೌಕರ್ಯ ಕಲ್ಪಿಸಲು ಭರಪೂರ ಅನುದಾನ ಸಿಕ್ಕಿದೆ. ಕೊರೋನಾ ದೇಶವನ್ನು ಆರ್ಥಿಕವಾಗಿ ಜರ್ಜರಿತವಾಗಿಸಿದ್ದರೂ ಕೇಂದ್ರದ ಕಟ್ಟುನಿಟ್ಟಿನ ಆಡಳಿತ ದೇಶವನ್ನು ದಿವಾಳಿಯಾಗುವತ್ತ ದೂಡದೆ ಸಮರ್ಥವಾಗಿ ನಿಭಾಯಿಸುತ್ತಿದೆ.
ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಸಚಿವ