ಕನಕಪುರ (ಅ.04) :  ನೀರು ಕುಡಿಯಲು ಕೆರೆಗಿಳಿದ ಎರಡು ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

35 ರಿಂದ 40 ವರ್ಷ ವಯಸ್ಸಿನ ಹೆಣ್ಣಾನೆ, 15 ರಿಂದ 16 ವರ್ಷ ವಯಸ್ಸಿನ ಮರಿ ಆನೆ ಸಾವನ್ನಪ್ಪಿದೆ. ಕೆರೆಯ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿದ ಪರಿಣಾಮ ಆನೆಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ತಾಲೂಕಿನ ಕೋಡಿಹಳ್ಳಿ ವಲಯ ಬನ್ನೇರುಘಟ್ಟ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದ ಹೊಸದುರ್ಗ ವಿಭಾಗದ ರಾಮದೇವರ ಬೆಟ್ಟದ ಚಿಕ್ಕಗೊಂಡನಹಳ್ಳಿ ಬಳಿಯಿರುವ ಹೊಸಕೆರೆಗೆ ಶುಕ್ರವಾರ ಸಂಜೆ ಸುಮಾರು 8 ರಿಂದ 10 ಆನೆಗಳ ಹಿಂಡು ನೀರು ಕುಡಿಯಲು ಬಂದಿವೆ. ಅದರಲ್ಲಿ ಎರಡು ಆನೆಗಳು ಕೆರೆಯ ಮಧ್ಯ ಭಾಗಕ್ಕೆ ತೆರಳಿವೆ. 

ಕೊನೆಗೂ ಕಂದಮ್ಮನ ಬಳಿ ಬಾರದ ತಾಯಿ ಆನೆ! ಕಣ್ಣೀರಿಡುತ್ತಲೇ ತೆರಳಿದ ಮರಿಯಾನೆ ...

ಕೆರೆಯ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿದ ಪರಿಣಾಮ ಎರಡೂ ಆನೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಶನಿವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಹಿರಿಯ ಅಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆರೆ ಮಧ್ಯ ಭಾಗದಲ್ಲಿದ್ದ ಆನೆಗಳ ಶವಗಳನ್ನು ಕ್ರೇನ್ ನ ಸಹಾಯದಿಂದ ಹೊರ ತರಲು ಪ್ರಯತ್ನಿಸಲಾಯಿತು. ಮಳೆ ಜತೆಗೆ ಕೆರೆಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಆನೆಗಳ ಶವಗಳನ್ನು ಹೊರ ತರಲು ಸಾಧ್ಯವಾಗಿಲ್ಲ. ಭಾನುವಾರ ಬೆಳಿಗ್ಗೆ ಕೆರೆಗಳಿಂದ ಆನೆ ಶವಗಳನ್ನು ಹೊರತಂದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅರಣ್ಯ ಇಲಾಖೆಯ ಸಿಸಿಎಫ್ ಗೋಕುಲ್ , ಪಿಸಿಸಿಎಫ್ ಅಜಯ್ಚಂದ್ರ, ಎಸಿಎಫ್ ಪ್ರಕಾಶ್ , ಡಿಸಿಎಫ್ ಪ್ರಶಾಂತ್ ಸಂಕಿನ ಮಠ, ಆರ್ ಎಫ್ ಒ ಪ್ರಶಾಂತ್ , ಚಂದನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.