ಹೊಸದುರ್ಗ [ಜ.12]:  ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೂರು ದಿನಗಳ ಹಿಂದಷ್ಟೇ ಚಿರತೆ ಸೆರೆ ಸಿಕ್ಕಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೊಂದು ಚಿರತೆ ಬೋನಿನಲ್ಲಿ ಸೆರೆಯಾಗಿದ್ದು ಪಟ್ಟಣದ ಜನರ ನಿದ್ದೆಗಡಿಸಿದೆ.

ಪಟ್ಟಣದ ಕುಂಚಿಟಿಗ ಮಠದ ಸಮೀಪ ತೋಟವೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಶುಕ್ರವಾರ ರಾತ್ರಿ ಸೆರೆಯಾಗಿದ್ದು, ಈ ಮೂಲಕ ಒಂದೇ ವಾರದಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆ ಬೋನಿಗೆ ಬಿದ್ದಂತಾಗಿದೆ. ಆದರೆ, ಇದುವರೆಗೂ ಹೊಸದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದೀಗ ನಗರ ಪ್ರದೇಶದಲ್ಲೇ ಒಂದೇ ವಾರದಲ್ಲಿ ಎರಡೆರಡು ಚಿರತೆಗಳು ಸೆರೆಯಾಗಿರುವುದು ಮತ್ತಷ್ಟುಆತಂಕ ಸೃಷ್ಟಿಸಿದೆ.

ಘಟನೆ ವಿವರ:  ಪಟ್ಟಣದ ಕುಂಚಿಟಿಗ ಮಠದ ಹಿಂಭಾಗದಲ್ಲಿರುವ ರಾಗಿ ಶಿವಲಿಂಗಪ್ಪ ಅವರ ದಾಳಿಂಬೆ ತೋಟದ ಶೆಡ್‌ನಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಭಾನುವಾರ ರಾತ್ರಿ ಚಿರತೆಯೊಂದು ಕೊಂದು ತಿಂದು ಅಲ್ಲೇ ಬಿಟ್ಟು ಹೋಗಿತ್ತು. ಸೋಮವಾರ ಬೆಳಗ್ಗೆ ವಿಷಯ ತಿಳಿದ ಮಾಲೀಕ ಶಿವಲಿಂಗಪ್ಪ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಅರಣ್ಯ ಇಲಾಖೆ ವಲಯ ಅರಣ್ಯಾಕಾರಿ ಪ್ರದೀಪ್‌ ಪವಾರ್‌ ನೇತೃತ್ವದ ತಂಡ ಚಿರತೆ ಹೆಜ್ಜೆ ಗುರುತಿನ ಜಾಡು ಹಿಡಿದು ಬೋನನ್ನು ಇರಿಸಿದ್ದರು.

ಮಂಗಳವಾರ ತಡರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಚಿರತೆ ಸೆರೆ ಸಿಕ್ಕಿತ್ತಾದರೂ, ಇನ್ನೊಂದು ಚಿರತೆ ಇದೆ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪುನಃ ಅದೇ ಜಾಗದಲ್ಲಿ ಮತ್ತೊಂದು ಬೋನನ್ನು ಇಡಲಾಗಿತ್ತು. ಶುಕ್ರವಾರ ರಾತ್ರಿ ಸುಮಾರು 10ಗಂಟೆ ಸಮಯದಲ್ಲೇ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದೇ ಸಮಯದಲ್ಲಿ ಸಮೀಪವೇ ಇರುವ ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ ಕಾರ್ಯಕ್ರಮ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಇತ್ತೀಚಿಗೆ ತಾಲೂಕಿನಲ್ಲಿ ಕಾಡು ಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ತಾಲೂಕಿನಲ್ಲಿ 3 ಚಿರತೆ ಹಾಗೂ 4 ಕರಡಿ ದಾಳಿ ಪ್ರಕರಣಗಳು ನಡೆದಿದ್ದವು. ಈ ಘಟನೆಗಳಲ್ಲಿ ಹಲವಾರು ಜನ ಹಾಗೂ ಕಾಡು ಪ್ರಾಣಿಗಳು ಸಾವನ್ನಪ್ಪಿದ್ದವು. ಈ ರೀತಿ ಕಾಡುಪ್ರಾಣಿಗಳ ದಾಳಿ ಪ್ರಕರಣಗಳಿಂದ ಜನ ಸಾಮಾನ್ಯರಿಗೂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೂ ತಲೆ ನೋವು ಶುರುವಾಗಿದೆ. ಇಲಾಖೆಯಲ್ಲಿ ಯಾವುದೇ ರಕ್ಷಾ ಕವಚಗಳಿಲ್ಲದ ಕಾರಣ ಕಾಡು ಪ್ರಾಣಿಗಳ ದಾಳಿ ಘಟನೆಗಳ ವೇಳೆ ಇಲಾಖೆ ಸಿಬ್ಬಂದಿ ಸಹ ಅಸಹಾಯಕರಾಗುವಂತಾಗಿದೆ.

3 ತಾಲೂಕುಗಳಲ್ಲಿ ನರಹಂತಕ ಚಿರತೆ ಸಂಚಾರ: ಭೀತಿಯಲ್ಲಿ ಜನ..

ಪಟ್ಟಣದ ಸೇರಿ ತಾಲೂಕಿನ ತಣಿಗೆಕಲ್ಲು, ಬುರುಡೇಕಟ್ಟೆ, ಹಾಗೂ ಹಾರಗೊಂಡನಹಳ್ಳಿ ಬಳಿ ಚಿರತೆ ಪ್ರತ್ಯಕ್ಷಕೊಂಡ ಬಗ್ಗೆ ಸಾರ್ವಜನಿಕರ ಮನವಿ ಮೇರೆಗೆ ಕಳೆದ 2-3 ತಿಂಗಳಿಂದ ಬೋನುಗಳನ್ನು ಇರಿಸಲಾಗಿದೆ. ಆದರೆ, ಎಲ್ಲೆಲ್ಲೂ ಚಿರತೆ ಪತ್ತೆಯಾಗದೆ, ಪಟ್ಟಣ ಪ್ರದೇಶದಲ್ಲಿ ಮಾತ್ರ ಚಿರತೆಗಳು ಸೆರೆ ಸಿಕ್ಕಿವೆ. ಉಳಿದ ಭಾಗದಲ್ಲಿ ಯಾವುದೇ ಚಿರತೆ ಸೆರೆ ಸಿಕ್ಕಿಲ್ಲ. ಅಲ್ಲದೆ, ಮತ್ತೆ ಜನರಿಗೆ ಕಾಣಿಸಿಕೊಂಡ ಬಗ್ಗೆಯೂ ಮಾಹಿತಿ ಇಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಯೋಗೀಶ್‌ ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಸೆರೆ ಸಿಕ್ಕ ಚಿರತೆಯನ್ನು ಕೊಳ್ಳೆಗಾಲದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇದೀಗ ಸಿಕ್ಕಿರುವ ಚಿರತೆಯನ್ನು ಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಯಕ್ಕೆ ಕರೆದೊಯ್ಯಲಾಗಿದೆ. ಅದಕ್ಕೆ ಚಿಕಿತ್ಸೆ ನೀಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಯೋಗೀಶ್‌, ಉಪವಲಯ ಅರಣ್ಯಾಧಿಕಾರಿ, ಹೊಸದುರ್ಗ.