Asianet Suvarna News Asianet Suvarna News

ಉಡುಪಿ ಇತಿಹಾಸ ಹೇಳುವ 16ನೇ ಶತಮಾನದ ಜೈನ ಶಾಸನ ಪತ್ತೆ

*  ಪ್ರಸ್ತುತ ತುಂಡಾದ ಸ್ಥಿತಿಯಲ್ಲಿರುವ ಈ‌ ಶಾಸನ
*  ಶ್ರೀ ಚೆನ್ನ ಪೂಜಾರಿಯವರ ಗದ್ದೆಯಲ್ಲಿದ್ದು "ಯಕ್ಷ" ಎಂದು ಪೂಜಿಸಿ ಸಂರಕ್ಷಿಸಿಕೊಂಡು ಬಂದಿದ್ದರು
*  ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನ 5 ಅಡಿ ಎತ್ತರ ಮತ್ತು 1.5 ಅಡಿ ಅಗಲವಿದೆ 

16th Century Jain Inscription Discovered in Udupi grg
Author
Bengaluru, First Published Jul 12, 2022, 2:05 PM IST

ಉಡುಪಿ(ಜು.12): ಬೈಂದೂರು ತಾಲೂಕಿನ ಗೋಳಿಬೇರು ಪ್ರದೇಶದಲ್ಲಿನ 16ನೇ ಶತಮಾನದ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ (ಅಂಗಸಂಸ್ಥೆ: NTC-AOM) ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ.‌ ಕೃಷ್ಣಯ್ಯ ಮತ್ತು ಯು. ಕಮಲಬಾಯಿ ಪ್ರೌಢಶಾಲಾ ನಿವೃತ್ತ ಶಿಕ್ಷಕರಾದ ಕೆ.‌ ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು ವಸ್ತುಸಂಗ್ರಹಾಲಯದ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ. 

ಪ್ರಸ್ತುತ ತುಂಡಾದ ಸ್ಥಿತಿಯಲ್ಲಿರುವ ಈ‌ ಶಾಸನವು ಶ್ರೀ ಚೆನ್ನ ಪೂಜಾರಿಯವರ ಗದ್ದೆಯಲ್ಲಿದ್ದು "ಯಕ್ಷ" ಎಂದು ಪೂಜಿಸಿ ಸಂರಕ್ಷಿಸಿಕೊಂಡು ಬಂದಿದ್ದರು. ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 5 ಅಡಿ ಎತ್ತರ ಮತ್ತು 1.5 ಅಡಿ ಅಗಲವಿದೆ. 

16th Century Jain Inscription Discovered in Udupi grg

ನೀಲಾವರ ಗೋಶಾಲೆಯಲ್ಲಿ ಸಗಣಿಯಿಂದ ವಿದ್ಯುತ್‌ ಉತ್ಪಾದನೆಗೆ ಚಿಂತನೆ!

ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನದ ಮುಂಭಾಗದಲ್ಲಿ 33 ಸಾಲು ಹಾಗೂ ಹಿಂಭಾಗದಲ್ಲಿ 33 ಸಾಲು, ಒಟ್ಟು 66 ಸಾಲುಗಳನ್ನು ಹೊಂದಿದ್ದು, ಶಾಸನ ಅಧ್ಯಯನ ನಡೆಸುವವರ ಗಮನ ಸೆಳೆದಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆ ಮತ್ತು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. 

"ಜಿಯಾ ಶ್ರೀ ಮತ್ಪರಮ ಗಂಭೀರ ಸ್ಯಾದ್ವ‌ ದಾಮೋಗ ಲಾಂಛನಂ ತ್ರೈಲೋಕ್ಯನಾಥಸ್ಯ ಸಾಸನಂ ಜಿನ ಸಾಸನಂ" ಎಂಬ ಜಿನ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1452 ನೆಯ ವಿಕೃತಿ ಸಂವತ್ಸರದ ದ್ವಿತೀಯ ವೈಶಾಖ ಶುದ್ಧ ಪಂಚಮಿ, ಅಂದರೆ ಕ್ರಿ. ಶ 1530 ರ ಕಾಲಮಾನಕ್ಕೆ ಸೇರುತ್ತದೆ. ಈ ಕಾಲಮಾನವು ವಿಜಯನಗರ ತುಳುವ ದೊರೆ ಅಚ್ಯುತ್ತರಾಯನಿಗೆ ಸೇರಿದೆ.

ಈ ಸಂದರ್ಭದಲ್ಲಿ ಹಾಡುವಳ್ಳಿ ಸಾಳುವ ಮನೆತನದ ಸಂಗೀರಾಯನ‌ ಮಗ ಗುರುರಾಯನು ಒಡೆಯನು ಸಂಗೀತಪುರ (ಹಾಡುವಳ್ಳಿ) ರಾಜಧಾನಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂದು ಶಾಸನದಿಂದ ತಿಳಿದುಬರುತ್ತದೆ.
ಈ ಕಾಲದಲ್ಲಿ ಶ್ರೀ‌ ಅಕಲಂಕ ದೇವರುಗಳ ದಿವ್ಯ ಶ್ರೀಪಾದ ಪದಂಗಳಿಗೆ ಮನ್ಮಹ ಮಂಡಳೇಶ್ವರ ಗುರುರಾಜ್ಸರು ಮಾಡಿದ ದಾನದ ಬಗ್ಗೆ ಶಾಸನವು ಉಲ್ಲೇಖಿಸುತ್ತದೆ.

ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾ ಧಾರಣೆ; ಯತಿಗಳಿಂದ ಮುದ್ರೆ ಹಾಕಿಸಿಕೊಳ್ಳಲು ಮುಗಿಬಿದ್ದ ಭಕ್ತರು

ಈ ಸಂದರ್ಭದಲ್ಲಿ ದಾನವಾಗಿ ಬಿಟ್ಟ ಭೂಮಿಯ ಚತುಸ್ಸೀಮೆಯ ಗಡಿಗಳು, 260 ಮುಡಿ ಭತ್ತದ ವೃತ್ತಿಯನ್ನು ದಾಖಲಿಸಲಾಗಿದೆ. ಈ ದಾನವನ್ನು ಅಕಲಂಕ ದೇವರಿಗೆ, ವಿಜಯಕೀರ್ತಿ ದೇವರಿಗೆ  ಶಿಷ್ಯ ಪರಂಪರೆಯು ನಡೆಸಿಕೊಂಡು ಬರಬೇಕೆಂದು ಸಹಿರಣ್ಯೋದಕ ದಾನವನ್ನು ಗುರುರಾಜ ಒಡೆಯರ ಕೈಯಲ್ಲಿ ಅಕಲಂಕ ದೇವರುಗಳು ಧಾರೆಯೆರೆಸಿಕೊಂಡರು‌‌. ಉಳಿದಂತೆ ಶಾಸನದಲ್ಲಿ ಗಂಗರನಾಡ ಸೀಮೆ, ಗೋಳಿಯ ಬರ ಎಂಬ ಉಲ್ಲೇಖಗಳಿದ್ದು, ಇದು ಪ್ರಸ್ತುತ ಕರೆಯಲ್ಪಡುವ ಗಂಗನಾಡು ಮತ್ತು ಗೋಳಿಬೇರು ಪ್ರದೇಶದ ಪ್ರಾಚೀನ ಹೆಸರುಗಳಾಗಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಸನದ‌ ಕೊನೆಯಲ್ಲಿ ಶಾಪಾಶಯ ವಾಕ್ಯ

ಶಾಸನದ‌ ಪ್ರಾಥಮಿಕ ಮಾಹಿತಿಯನ್ನು ವಿಶ್ವನಾಥ ಪೂಜಾರಿಯವರು ನೀಡಿದ್ದು, ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ರವಿ ಸಂತೋಷ್ ಆಳ್ವ ಮತ್ತು ಗೋಪಾಲ ಪೂಜಾರಿ ಸಹಕಾರ ನೀಡಿರುತ್ತಾರೆ.
 

Follow Us:
Download App:
  • android
  • ios