ಬೆಂಗಳೂರು [ಜ.11]:  ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ 164 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ. ಕೃಷ್ಣಮೂರ್ತಿ ತಿಳಿಸಿದರು.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ-2013ರ ಕುರಿತು ಬೆಂ.ನಗರ ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳು, ಸಗಟು ಆಹಾರ ಧಾನ್ಯಗಳ ಮಳಿಗೆ, ಅಂಗನವಾಡಿ ಕೇಂದ್ರಗಳು, ಮಧ್ಯಾಹ್ನ ಉಪಾಹಾರ ಯೋಜನೆಯಡಿಯಲ್ಲಿನ ಸರ್ಕಾರಿ ಶಾಲೆಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳು, ಬೌರಿಂಗ್‌, ವಿಕ್ಟೋರಿಯಾ ಆಸ್ಪತ್ರೆ ಮತ್ತು ಜಿಲ್ಲಾ ತೀವ್ರ ಅಪೌಷ್ಟಿಕ ಮಕ್ಕಳ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ಪರಿಶೀಲನೆ ಕುರಿತು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂ.ಉತ್ತರ ತಾಲೂಕಿನಲ್ಲಿ 46, ದಕ್ಷಿಣ ತಾಲೂಕಿನಲ್ಲಿ 39 ಮತ್ತು ಆನೇಕಲ್‌ ತಾಲೂಕಿನಲ್ಲಿ 41 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಾದ್ಯಂತ ಸಾಧಾರಣ ಅಪೌಷ್ಟಿಕತೆಯಿಂದ 14,568 ಮಕ್ಕಳು ಬಳಲುತ್ತಿದ್ದಾರೆ. ಇವರೆಲ್ಲರಿಗೂ ಪೌಷ್ಟಿಕ ಆಹಾರ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದರು.

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ : ಸಚಿವೆ ಜೊಲ್ಲೆ...

ಇಂತಹ ಮಕ್ಕಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು ಎಂಬ ನಿಯಮವಿದೆ. ಆದರೂ ಬೌರಿಂಗ್‌ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಿಗೆ ಬರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಅಧಿಕಾರಿಗಳಾದ ಮಂಜುಳಾಬಾಯಿ, ಮೊಹಮ್ಮದ್‌ ಅಲಿ, ಹಸಬಿ ಉಪಸ್ಥಿತರಿದ್ದರು.

ಶೇ.50 ಮಕ್ಕಳು ಬಿಸಿಯೂಟ ತಿನ್ನಲ್ಲ: ಡಾ.ಕೃಷ್ಣಮೂರ್ತಿ

ಆನೇಕಲ್‌ನಲ್ಲಿರುವ ಸರ್ಕಾರಿ ಹೊಸ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 163 ಮಕ್ಕಳ ದಾಖಲಾತಿ ಇದೆ. ಈ ಪೈಕಿ ಅರ್ಧಕ್ಕರ್ಧ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಿಲ್ಲ. ಸರ್ಕಾರ ನೀಡಿರುವ ತಟ್ಟೆಗಳನ್ನು ಬೀರುವಿನಲ್ಲಿ ಬೀಗ ಹಾಕಿ ಇಡಲಾಗಿದೆ ಹಾಗೂ ಸಾಂಬಾರ್‌ಗೆ ಬೇಳೆಯನ್ನೇ ಬಳಸುತ್ತಿಲ್ಲ. ಊಟ ರುಚಿಸದ ಕಾರಣ ಮಕ್ಕಳು ಮನೆಯಿಂದಲೇ ಡಬ್ಬಿಗಳನ್ನು ತರುತ್ತಿದ್ದಾರೆ ಎಂದು ಡಾ.ಕೃಷ್ಣಮೂರ್ತಿ ತಿಳಿಸಿದರು.

ಪಾಕೆಟ್ ಮನಿಯೇ ಮಕ್ಕಳ ಮನಿ ಮ್ಯಾನೇಜ್ಮೆಂಟ್ ಗುರು!...

ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆ ಊಟ ರುಚಿ ಇಲ್ಲ: ತುಮಕೂರು ರಸ್ತೆಯಲ್ಲಿರುವ ಸಿದ್ಧನಹಳ್ಳಿ ಶಾಲೆ ಮಕ್ಕಳು ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಸದೆ ರುಚಿಸುತ್ತಿಲ್ಲ ಎಂದು ಕಾರಣ ಹೇಳಿ ಕಡಿಮೆ ಪ್ರಮಾಣದಲ್ಲಿ ಊಟ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿ ಮಕ್ಕಳಿಗೆ 150 ಗ್ರಾಂ ಬದಲಾಗಿ 100 ಅನ್ನ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಇಸ್ಕಾನ್‌ ವತಿಯಿಂದ ಊಟ ಸರಬರಾಜು ಮಾಡಲಾಗುತ್ತಿದೆ. ಇಸ್ಕಾನ್‌ ಈರುಳ್ಳಿ-‘ಬೆಳ್ಳುಳ್ಳಿ ಬದಲಾಗಿ ಪೌಷ್ಟಿಕ ಅಂಶಗಳನ್ನು ಒಳಗೊಂಡ ಬೇರೆ ಪದಾರ್ಥಗಳನ್ನು ಬಳಸಲಾಗುತ್ತಿದೆ. ಆದರೂ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಊಟ ಮಾಡುತ್ತಿಲ್ಲ ಎಂಬ ಮಾಹಿತಿ ಪರಿಶೀಲನೆ ವೇಳೆ ತಿಳಿದು ಬಂದಿದೆ ಎಂದು ಹೇಳಿದರು.