ವರುಣದಲ್ಲಿ 15 ವರ್ಷದ ಅಪ್ಪ -ಮಕ್ಕಳ ಆಟ ಅಂತ್ಯ : ಸಿಂಹ
ಕರ್ನಾಟಕವನ್ನು ಗುಂಡಾಗಿರಿ ರಾಜ್ಯಮಾಡಲು ಎಸ್‌ಡಿಪಿಐ ಬೆಂಬಲ ಪಡೆಯುತ್ತಿದ್ದೀರಾ ಎಂದು ಪ್ರಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು
ಮೈಸೂರು : ಕರ್ನಾಟಕವನ್ನು ಗುಂಡಾಗಿರಿ ರಾಜ್ಯಮಾಡಲು ಎಸ್‌ಡಿಪಿಐ ಬೆಂಬಲ ಪಡೆಯುತ್ತಿದ್ದೀರಾ ಎಂದು ಪ್ರಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಬರುವುದಕ್ಕಾಗಿ ರಾಜಕೀಯ ಹತ್ಯೆಯನ್ನು ಗುರಿಯಾಗಿಸಿಕೊಂಡಿರುವ ಎಸ್‌ಡಿಪಿಐ ಬೆಂಬಲ ಕೇಳಲಾಗುತ್ತಿದೆ. ಉತ್ತರ ಭಾರತದಲ್ಲಿ ಸೆಮಿ, ಪಿಎಫ್‌ಐ, ಕೆಎಫ್‌ಡಿ ಮುಂತಾದ ಸಂಘಟನೆ ನಿಷೇಧವಾದ ಮೇಲೆ ಹುಟ್ಟಿಕೊಂಡ ಎಸ್‌ಡಿಪಿಐನ ಬೆಂಬಲ ಕೇಳಲಾಗುತ್ತಿದೆ ಎಂದರು.
ಎಸ್‌ಡಿಪಿಐನ ಕಾರ್ಯಕರ್ತರು ರಾಜಕೀಯ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾವು ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಕೈ ಜೋಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜು ಹತ್ಯೆ ಆರೋಪ ಅಬೀದ್ ಪಾಷ ಈ ಹಿಂದೆ ಹುಣಸೂರಿನ ಇಬ್ಬರು ಯುವಕರನ್ನು ಹತ್ಯೆಗೈದಿದ್ದ. ಕಾಂಗ್ರೆಸ್‌ನ ಶಾಸಕರ ಕತ್ತು ಕೂಯ್ಯುವ ಕೆಲಸವನ್ನು ಎಸ್‌ಡಿಪಿಐ ಮಾಡಿದ್ದರೂ ಸಿದ್ದರಾಮಯ್ಯ ಅವರ ಬೆಂಬಲವನ್ನೇ ಕೋರುತ್ತಿರುವುದು ನೋಡಿದರೆ, ಮುಂದೊಂದು ದಿನ ಕರ್ನಾಟಕವನ್ನು ಮತ್ತೊಂದು ಕೇರಳ ಮಾಡಿ, ಅವರಿಗೆ ಅಧಿಕಾರ ಬಿಟ್ಟುಕೊಡುವಂತಿದೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗ ನಿಷೇಧತ ಸಂಘಟನೆಗೆ ಸೇರಿದವರ ಮೇಲಿದ್ದ ಸುಮಾರು 175 ಪ್ರಕರಣಗಳನ್ನು ಪೊಲೀಸರ ವಿರೋಧದ ನಡುವೆಯು ಸಂಪುಟ ಸಭೆಯಲ್ಲಿ ಮಂಡಿಸಿ ಹಿಂದಕ್ಕೆ ಪಡೆದರು. ಆಗಲೇ ಸರಣಿ ಹತ್ಯೆಗೆ ದಾರಿ ಮಾಡಿಕೊಟ್ಟಾಂತಾಯಿತು. ಇವರೆಲ್ಲರೂ ಸಿದ್ದರಾಮಯ್ಯ ಅವರ ದತ್ತು ಮಕ್ಕಳು ಎಂಬುದು ಅರಿವಿಗೆ ಬಂತು ಎಂದರು.
ಇದಾದ ಬಳಿಕ ಪಿರಿಯಾಪಟ್ಟಣ, ಬಂಟ್ವಾಳ, ಸೂರತ್ಕಲ್, ಪ್ರವೀಣ್ ನೆಟ್ಟಾರು ಮುಂತಾದವರ ಹತ್ಯೆ ನಡೆಯಿತು. ಮುಂದಿನ 2047ರ ವೇಳೆಗೆ ಇಸ್ಲಾಮಿಕ್ ಕಾರಿಡಾರ್ ಮಾಡಲು ಇವರು ಹೊರಟಂತಿದೆ. ಉತ್ತರಪ್ರದೇಶದಂತೆ 10 ಸಾವಿರ ಎನ್‌ಕೌಟಂರ್ ಪರಿಸ್ಥಿತಿ ಕರ್ನಾಟಕದಲ್ಲಿಯೂ ನಿರ್ಮಾಣ ಆಗಬೇಕೆ? ಎಸ್‌ಐಗಳಾದ ಮಲ್ಲಿಕಾರ್ಜುನ ಬಂಡೆ, ಜಗದೀಶ್ ಅವರನ್ನು ಹತ್ಯೆ ಮಾಡಿದವರು ಯಾರು? ಎಂದು ಅವರು ಪ್ರಶ್ನಿಸಿದರು. ನೆಹರು ಅವರನ್ನು ಪ್ರಧಾನಿ ಮಾಡಲು ದೇಶವನ್ನೆ ಹೊಡೆದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬರುವ ಉದ್ದೇಶದಿಂದ ಅದೇ ಕೆಲಸ ಮಾಡುತ್ತಿದೆ ಎಂದು ದೂರಿದರು.
ಅಪ್ಪ- ಮಗನ ದರ್ಬಾರ್ ಅಂತ್ಯ
ಕಳೆದ 15 ವರ್ಷಗಳಿಂದ ವರುಣ ಕ್ಷೇತ್ರದಲ್ಲಿ ನಡೆದ ಅಪ್ಪ- ಮಗನ ದರ್ಬಾರ್ ಅಂತ್ಯವಾಗಲಿದೆ. ಜಿಲ್ಲೆಯಲ್ಲಿ ಸುಮಾರು 8ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಡಿ. ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೂ ಅಮೃತ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ ಎಂದರು.
ಬಲಿಪಶು ಯಾರು ಗೊತ್ತಾಗುತ್ತದೆ
ಇಲ್ಲಿ ಸೋಮಣ್ಣ ಬಲಿಪಶು ಆಗುತ್ತಾರೆ ಎಂಬುದೆಲ್ಲ ಸುಳ್ಳು. ಅವರು ಬಲಿ ಪಡೆಯಲು ಬಂದಿದ್ದಾರೆ. ಯಾರು ಬಲಿ ಆಗುತ್ತಾರೆ ಎಂಬುದು ಮೇ 13ಕ್ಕೆ ಗೊತ್ತಾಗುತ್ತದೆ. 2015ರಲ್ಲಿ ರಾಜ್ಯದ ಅನೇಕ ಕಡೆ ಉಪ ಚುನಾವಣೆ ನಡೆಯಿತು. ಆಗ ಸಚಿವರು, ಮುಖ್ಯಮಂತ್ರಿಗಳು ಸೇರಿ ಎಲ್ಲರೂ ಪ್ರಚಾರಕ್ಕೆ ಹೋದರು. ಈ ವೇಳೆ ದೇವದುರ್ಗ ಕ್ಷೇತ್ರ ಗೆದ್ದುಬರುವಂತೆ ಸೋಮಣ್ಣ ಅವರಿಗೆ ಜವಾಬ್ದಾರಿ ನೀಡಲಾಯಿತು. ಅಲ್ಲಿ ಗೆಲ್ಲುವುದೇ ಇಲ್ಲ ಎಂದುಕೊಂಡಿದ್ದಾಗ 10 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆದ್ದಿತು. ಅಂತೆಯೇ ಚಿಂಚೋಳಿಯನ್ನು ಗೆದ್ದು ಬಂದರು. ಅವರ ಜಾತಿಯವರು ಹೆಚ್ಚು ಪ್ರಾಬಲ್ಯವಿಲ್ಲದ ಗೋವಿಂದರಾಜನಗರ ಕ್ಷೇತ್ರದಲ್ಲಿಯೇ ಗೆದ್ದವರು. ಅವರು ಎಲ್ಲಾ ಜನರ ನಾಯಕ ಎಂದರು.
ವರುಣ ಕ್ಷೇತ್ರದಲ್ಲಿ ನಮಗೆ ಸಿಗುತ್ತಿರುವ ಸ್ಪಂದನೆ ದೊಡ್ಡದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂಬ ಅನುಮಾನ, ಭಯವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರು ನಮ್ಮ ಕೈ ಹಿಡಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಯದಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಸ್ಪರ್ಧಿಸುತ್ತಿದ್ದ ಸಿದ್ದರಾಮಯ್ಯ ಅವರು ಏಕೋ ಕೋಲಾರವೂ ಕಷ್ಟಎಂದು ತಿಳಿದು ಹಳೆ ಗಂಡನ ಪಾದವೇ ಗತಿ ಅಂತ ವರುಣಕ್ಕೆ ಬಂದಿದ್ದಾರೆ. ಸೋಮಣ್ಣ ಸರ್ವ ಜನಾಂಗದ ನಾಯಕ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಾಕಷ್ಟುನೆರವು ನೀಡಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರ .319 ಕೋಟಿ ಕೊಟ್ಟಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ಮಿಸಿದೆ. ಅಮೃತ್, ಜಲಜೀವನ ಮಿಷನ್, ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದಷ್ಟೇ ಪಾಲು ರಾಜ್ಯ ಸರ್ಕಾರದ್ದೂ ಇದೆ. ರೈತರಿಗೆ ಉಚಿತ ವಿದ್ಯುತ್, ಪೆರಿಪಿರಲ್ ರಿಂಗ್ ರಸ್ತೆ, ಸ್ಮಾರ್ಚ್ ಸಿಟಿ ಮುಂತಾದ ಅನೇಕ ಯೋಜನೆಗೆ ರಾಜ್ಯ ಸರ್ಕಾರ ನೆರವಾಗಿದೆ ಎಂದರು.
ನಾನು ಮೈಸೂರು ಚಾಮರಾಜನಗರ, ಕೊಡಗು ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ಬೇರೆ ಎಲ್ಲಿಗೂ ಹೋಗುವುದಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿವಿ. ಕವೀಶ್‌ಗೌಡ ಮಾತನಾಡಿ, ಏ.18 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಪಕ್ಷದ ಅನೇಕ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ. ಯುವಕರ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟುಅಭಿವೃದ್ಧಿ ಆಗಬೇಕಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಇದ್ದರು.