ಚಿತ್ರದುರ್ಗ(ಜು.25): ಶಾಲಾ ವಾಹನ ಪಲ್ಟಿಯಾದ ಪರಿಣಾಮ 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ಹೊಸದುರ್ಗ ತಾಲೂಕಿನ ಬಾಗೂರು ಬಳಿ ಬುಧವಾರ ಸಂಜೆ ನಡೆದಿದೆ.

ಇಬ್ಬರಿಗರ ತಲೆಗೆ ಪೆಟ್ಟು:

ವಾಹನದಲ್ಲಿ 40 ಮಕ್ಕಳು ಇದ್ದರು ಎನ್ನಲಾಗಿದ್ದು, ಆನಿವಾಳ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಕರಿಸಿದ್ದಸ್ವಾಮಿ ಹಾಗೂ ಹೊಸಕುಂದೂರು ಗ್ರಾಮದ 4ನೇ ತರಗತಿ ವಿದ್ಯಾರ್ಥಿ ಕೈಲಾಶ್‌ ಎಂಬುವರ ತಲೆಗೆ ಪೆಟ್ಟಾಗಿದ್ದು, ಇಬ್ಬರನ್ನೂ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮಕ್ಕಳಿಗೆ ಬಾಗೂರು ಹಾಗೂ ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದಾವಣಗೆರೆ: ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಚಾಲಕನ ನಿಯಂತ್ರಣ ತಪ್ಪಿ ಬಸ್ ಗುಂಡಿಗೆ:

ಬಾಗೂರು ಗ್ರಾಮದ ವಿದ್ಯಾವಾಹಿನಿ ಶಾಲೆಯ ಶಾಲಾ ವಾಹನ ಬಾಗೂರಿನಿಂದ ಆನಿವಾಳಕ್ಕೆ ತೆರಳುತ್ತಿತ್ತು. ಕುಂದೂರು- ಗೊಲ್ಲರಹಟ್ಟಿಕ್ರಾಸ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಮಗುಚಿಬಿದ್ದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಮಹಲಿಂಗ ವಿ. ನಂದಾಗಾವಿ, ಸಿಪಿಐ ರುದ್ರಪ್ಪ, ಬಿಇಒ ಎಲ್‌.ಜಯಪ್ಪ ಭೇಟಿ ನೀಡಿ ಪರಿಶಿಲಿಸಿದರು. ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರಮಕ್ಕೆ ಸ್ಥಳೀಯರ ಆಗ್ರಹ:

ತಾಲೂಕಿನಲ್ಲಿ ಖಾಸಗಿ ಶಾಲೆಗಳು ಹೆಚ್ಚಾಗಿದ್ದು, ವಾಹನಗಳ ಸಂಖ್ಯೆಯೂ ಹೆಚ್ಚಾಗಿವೆ. ಆದರೆ, ಅವುಗಳ ಸುರಕ್ಷತೆ ಬಗ್ಗೆ ಶಾಲಾ ಆಡಳಿತ ಮಂಡಳಿ ಅವರು ಗಮನ ನೀಡುತ್ತಿಲ್ಲ. ಬಹುತೇಕ ಶಾಲೆಗಳಲ್ಲಿ ಅತ್ಯಂತ ಹಳೆಯದಾದ ವಾಹನಗಳನ್ನು ಓಡಿಸುತ್ತಿದ್ದಾರೆ. ಅಲ್ಲದೆ, ಕೆಲವು ವಾಹನಗಳ ಚಾಲಕರ ಬಳಿ ವಾಹನ ಚಾಲನೆಯ ಪರವಾನಿಗೆಯೇ ಇರುವುದಿಲ್ಲ. ಹಾಗಾಗಿ, ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಬಗ್ಗೆ ಪೋಲೀಸ್‌ ಹಾಗೂ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.