Asianet Suvarna News Asianet Suvarna News

ಕಾರವಾರ: ಆರು ತಿಂಗಳಿಂದ 15 ಸಿಬ್ಬಂದಿಗಿಲ್ಲ ವೇತನ..!

* ಕಡಲ ತೀರದ ಸಿಬ್ಬಂದಿಗೆ ಆರ್ಥಿಕ ಸಂಕಷ್ಟ
* ಜಿಲ್ಲಾಡಳಿತಕ್ಕೆ ಪ್ರವಾಸಿಗರಿಲ್ಲದೆ ಆದಾಯವಿಲ್ಲ
* ಕೂಡಲೇ ವೇತನ ಪಾವತಿಗೆ ಅಗತ್ಯ ಕ್ರಮ: ಅಪರ ಜಿಲ್ಲಾಧಿಕಾರಿ
 

15 Emloyees Did Not Get Salary Since 6 Months in Uttara Kannada grg
Author
Bengaluru, First Published Jun 24, 2021, 10:27 AM IST

ಕಾರವಾರ(ಜೂ.24): ರವೀಂದ್ರನಾಥ ಟಾಗೋರ ಕಡಲ ತೀರಗಳ ಅಭಿವೃದ್ಧಿ ಸಮಿತಿ ಅಡಿಯಲ್ಲಿ ಜಿಲ್ಲೆಯ ವಿವಿಧೆಡೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಮಿತಿ ಜಿಲ್ಲಾಡಳಿತದ ಅಡಿಯಲ್ಲಿ ಬರುತ್ತಿದ್ದು, ವಿವಿಧ ಕಡಲ ತೀರಗಳನ್ನು ನೋಡಿಕೊಳ್ಳಲು ಸುಪ್ರವೈಸರ್‌, ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌, ವಾರ್‌ಶಿಪ್‌, ಬೀಚ್‌ ಕ್ಲೀನಿಂಗ್‌ ಇತ್ಯಾದಿ ಕೆಲಸಗಳಿಗೆ ನೇಮಕವಾದ 15 ಸಿಬ್ಬಂದಿಗೆ ಕಳೆದ ಡಿಸೆಂಬರ್‌ ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ಹೀಗಾಗಿ ನಿಯೋಜಿತ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

2020 ಡಿಸೆಂಬರ್‌ ತಿಂಗಳನಿಂದ ವೇತನ ನೀಡುವುದು ಬಾಕಿಯಿದೆ. ಸಮಿತಿಗೆ ಅಥವಾ ಜಿಲ್ಲಾಡಳಿತಕ್ಕೆ ಪ್ರವಾಸಿಗರಿಲ್ಲದೇ ಆದಾಯ ಬರುತ್ತಿಲ್ಲ. ಹೀಗಾಗಿ ವೇತನ ನೀಡುವುದು ಹೊರೆಯಾಗುತ್ತಿದೆ ಎನ್ನುವ ಮಾತು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿದ್ದು, ಕೋವಿಡ್‌ನಿಂದಾಗಿ ಪ್ರವಾಸಿಗರ ಆಗಮನ ಕಡಿಮೆಯಾಗಿದೆ ನಿಜ. ಆದರೆ ಈ ಎಲ್ಲಾ ಸಿಬ್ಬಂದಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಅವರು ಮಾಡಿದ ಕೆಲಸಕ್ಕೆ ವೇತನವನ್ನಾದರೂ ನೀಡಬೇಕಿದೆ.

'ಕೊರೋನಾ 3ನೇ ಅಲೆ ಎದುರಿಸಲು ಬಿಜೆಪಿ ಸನ್ನದ್ಧ'

ಈ ಹಿಂದೆ ಶಶಿಕಲಾ ಜೊಲ್ಲೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಈ ಸಮಿತಿಯನ್ನು ವಿಸರ್ಜಿಸಿ ಪ್ರವಾಸೋದ್ಯಮ ಇಲಾಖೆಗೆ ಈ ಎಲ್ಲಾ ಸಿಬ್ಬಂದಿ ಜವಾಬ್ದಾರಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ವರ್ಷ ಉರುಳಿದರೂ ಪ್ರವಾಸೋದ್ಯಮ ಇಲಾಖೆಗೆ ಕಾನೂನಾತ್ಮಕವಾಗಿ ಸಿಬ್ಬಂದಿ ಜವಾಬ್ದಾರಿ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ವಿಲೀನವಾಗದೇ ಇರುವುದು ಹಲವಾರು ತೊಂದರೆಗೆ ಕಾರಣವಾಗಿದೆ. ಸಮಿತಿಯ ಅಡಿಯಲ್ಲೂ ಬರದೇ, ಪ್ರವಾಸೋದ್ಯಮ ಇಲಾಖೆಗೂ ಸೇರದೆ ಸುಪ್ರವೈಸರ್‌, ಗೈಡ್‌, ವಾರ್‌ಶಿಪ್‌, ಬೀಚ್‌ ಕ್ಲಿನಿಂಗ್‌ ಸಿಬ್ಬಂದಿಯದ್ದು ತ್ರಿಶಂಕು ಸ್ಥಿತಿಯಾಗಿದೆ. ಕಳೆದ ಅಕ್ಟೋಬರ್‌ನಿಂದ ಈ ಮಾಚ್‌ರ್‍ ವರೆಗೆ . 2 ಲಕ್ಷ ಆದಾಯ ಬಂದಿದೆ. ಆದರೆ ವೇತನ ಮಾತ್ರ ಸಿಗುತ್ತಿಲ್ಲ.

ಸಮಿತಿಯ ಅಡಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಇದೇ ಉದ್ಯೋಗ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಮಕ್ಕಳಿಗೆ ಶಾಲೆಗಳು ಆರಂಭವಾಗುತ್ತಿದ್ದು, ಶುಲ್ಕ ಪಾವತಿ, ಅಕ್ಕಿ, ಬೆಳೇಕಾಳು, ದಿನಸಿ ಹೀಗೆ ದಿನನಿತ್ಯದ ಅವಶ್ಯಕ ವಸ್ತುಗಳ ಖರೀದಿಗೂ ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಆದಷ್ಟು ಶೀಘ್ರದಲ್ಲಿ ಬಾಕಿ ಉಳಿದ ವೇತನ ಪಾವತಿ ಮಾಡುವುದರ ಜತೆಗೆ ಈ ಹಿಂದೆ ನಿರ್ಧಾರವಾದಂತೆ ಪ್ರವಾಸೋದ್ಯಮ ಇಲಾಖೆಗೆ ಸಮಿತಿ ವಿಲೀನ ಮಾಡುವ ಪ್ರಕ್ರಿಯೆ ನಡೆಸಬೇಕಿದೆ.

ರವೀಂದ್ರನಾಥ ಟಾಗೋರ ಕಡಲ ತೀರಗಳ ಅಭಿವೃದ್ಧಿ ಸಮಿತಿ ಅಡಿಯಲ್ಲಿ ಇರುವ ಸಿಬ್ಬಂದಿಗೆ ತಾಂತ್ರಿಕ ಕಾರಣದಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ಪಾವತಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ. 
 

Follow Us:
Download App:
  • android
  • ios