ಬೆಂಗಳೂರು [ಡಿ.21]:  ಪೌರತ್ವ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಕ್ರಮಕ್ಕೆ ತಡೆ ನೀಡದ ಹೈಕೋರ್ಟ್‌, ಸಕಾರಣವಿಲ್ಲದೆ ನಿಷೇಧಾಜ್ಞೆ ಜಾರಿಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಕಾರಣ ಆ ಕುರಿತು ವಿಸ್ತೃತ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.

ಕಾಂಗ್ರೆಸ್‌ ಸಂಸದ ರಾಜೀವ್‌ ಗೌಡ ಮತ್ತು ಶಾಸಕಿ ಸೌಮ್ಯ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ನಿಷೇಧಾಜ್ಞೆಗೆ ತಡೆಯಾಜ್ಞೆ ನೀಡುವಂತೆ ಕೋರಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, ನಾಳೆ (ಶನಿವಾರ) ಮಧ್ಯರಾತ್ರಿಗೆ ನಿಷೇಧಾಜ್ಞೆ ಜಾರಿ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ, ತಡೆ ನೀಡಲಾಗದು ಎಂದು ಹೇಳಿದರು. ಆದರೆ, ನಿಷೇಧಾಜ್ಞೆ ಜಾರಿಯು ಸಕಾರಣವಿಲ್ಲದೆ ಜಾರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ನಿಷೇಧಾಜ್ಞೆ ಜಾರಿಯ ಕಾನೂನು ಸಿಂಧುತ್ವದ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು 2020ರ ಜ.7ಕ್ಕೆ ಮುಂದೂಡಿದರು. ಅಷ್ಟರಲ್ಲಿ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದರು.

ಹಿಂಸಾಚಾರ ಪೊಲೀಸರ ಪೂರ್ವ ನಿಯೋಜಿತ ಕೃತ್ಯ: ಆರೋಪ...

ಹಾಗೆಯೇ, ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿದಾರರು ಮೂರು ದಿನಗಳಲ್ಲಿ ಹೊಸದಾಗಿ ಪೊಲೀಸರಿಗೆ (ಸರ್ಕಾರ) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಪೊಲೀಸರು ಆ ಅರ್ಜಿಯನ್ನು ಮೆರಿಟ್‌ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆ ಕುರಿತು ಸುಪ್ರಿಂ ಕೋರ್ಟ್‌ ಹೊರಡಿಸಿರುವ ತೀರ್ಪಿನ ಅನುಸಾರ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರೆ, ಅರ್ಜಿದಾರರ ಪರ ಪ್ರೊ.ರವಿವರ್ಮ ಕುಮಾರ್‌ ವಾದಮಂಡಿಸಿದರು.