ಮಂಗಳೂರು(ಮೇ 16): ಉಪ್ಪಿನಂಗಡಿಯ ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕುಂಟಾಲಪಲ್ಕೆ ಕರ್ಲಬಿ ಸೇತುವೆಯ ಬಳಿ 50ಕ್ಕೂ ಮಿಕ್ಕಿದ ಮಂಗಗಳನ್ನು ವಿಷ ಪ್ರಾಶಣ ಹಾಗೂ ಹಲ್ಲೆ ನಡೆಸಿ ತಂದು ಬಿಟ್ಟಿದ್ದು, ಈ ಪೈಕಿ 14 ಮಂಗಗಳು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಎಲ್ಲಿಂದಲೋ ಹಿಡಿದು ತಂದು ಹಾಕಲಾಗಿದ್ದ ಸ್ಥಿತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾದ ಮಂಗಗಳ ಪೈಕಿ ಬಹುತೇಕ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದು, ತಲೆಗೆ ಗಾಯಗಳಾಗಿದ್ದವು. ಪ್ರಕರಣ ಪತ್ತೆಯಾದಾಗ ರಾತ್ರಿಯಾಗಿದ್ದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ: ರಾಜ್ಯಕ್ಕೆ ತಡವಾಗಿ ಮುಂಗಾರು ಪ್ರವೇಶ

ಗಂಭೀರವಾಗಿ ಗಾಯಗೊಂಡಿದ್ದ ಮೂರು ಮರಿ ಮಂಗಗಳೂ ಸೇರಿದಂತೆ ಒಟ್ಟು ಹದಿನಾಲ್ಕು ಮಂಗಗಳು ಸಾವನ್ನಪ್ಪಿದ್ದು, ಉಳಿದ ಮಂಗಗಳು ಪ್ರಜ್ಞೆ ಮರುಕಳಿಸಿದ ಬಳಿಕ ಸಮೀಪದ ಕಾಡಿನೊಳಕ್ಕೆ ಹೋಗಿರುವ ಸಾಧ್ಯತೆ ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳಾದ ಎಸಿಎಫ್‌ ಸುಬ್ರಹ್ಮಣ್ಯ ರಾವ್‌, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್‌, ಪಶು ವೈದ್ಯಾಧಿಕಾರಿ ಡಾ. ವಿನಯ್‌ ಕುಮಾರ್‌, ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್‌, ಫಾರೆಸ್ಟರ್‌ ಜಗದೀಶ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಂಗಗಳಿಗೆ ವಿಷ ಪ್ರಾಶಣ ಹಾಗೂ ತಲೆಗೆ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.