ಬೆಂಗಳೂರು: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮಕ್ಕಳು ಸೇರಿ 13 ಮಂದಿಗೆ ಗಾಯ
ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿರುವುದು ಗಮನಕ್ಕೆ ಬಂದಿಲ್ಲ. ಬೆಳಗ್ಗೆ ಮನೆಯಲ್ಲಿ ಲೈಟ್ ಹಾಕುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಒಂದು ಭಾಗದ ಗೋಡೆ ಉರುಳಿ ಬಿದ್ದಿದೆ.
ಬೆಂಗಳೂರು(ಮಾ.04): ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು, ಆರು ಮಹಿಳೆಯರು ಸೇರಿ ಒಟ್ಟು 13 ಮಂದಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮರಿಯಪ್ಪನಪಾಳ್ಯ ನಿವಾಸಿಗಳಾದ ಅಜ್ಮಲ್ ಪಾಷಾ (46), ನಾಜೀಮ ಪಾಷಾ (42), ರಿಯಾನಾ (14), ಅಜ್ವಾನ್ (12), ಫಯಾಜ್ (10), ಅಮೀನ ಜಾನ್ (52), ಶಬನಾಬ್ (18), ನಾಸೀಮಾ (40), ಸಲ್ಮಾ (33), ರೇಷ್ಮಾಬಾನು (48) ಸೇರಿದಂತೆ 13 ಜನರು ಗಾಯಗೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ: ಗ್ಯಾಸ್ ಸಿಲಿಂಡರ್ ಸ್ಫೋಟ: ಯುವಕ ಸಜೀವ ದಹನ
ಮಾಂಸದಂಗಡಿ ಮಾಲಿಕ ಅಜ್ಮಲ್ ಪಾಷಾ ಅವರು ಮರಿಯಪ್ಪನಪಾಳ್ಯದ 2ನೇ ಮುಖ್ಯರಸ್ತೆ 4ನೇ ಕ್ರಾಸ್‌ನ ಬಾಡಿಗೆ ಮನೆಯ 1ನೇ ಮಹಡಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಗುರುವಾರ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ನೆಂಟರು ಬಂದಿದ್ದರು. ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಸಿಲಿಂಡರ್ ಆಫ್ ಮಾಡದ ಪರಿಣಾಮ ಅನಿಲ ಸೋರಿಕೆಯಾಗಿದೆ. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿರುವುದು ಗಮನಕ್ಕೆ ಬಂದಿಲ್ಲ. ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮನೆಯಲ್ಲಿ ಲೈಟ್ ಹಾಕುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಒಂದು ಭಾಗದ ಗೋಡೆ ಉರುಳಿ ಬಿದ್ದಿದೆ.
ಮನೆಯೊಳಗೆ ಗಾಯಗೊಂಡವರ ಚೀರಾಟ ಕೇಳಿಸಿಕೊಂಡ ಸ್ಥಳೀಯರು, ಕೂಡಲೇ ನೆರವಿಗೆ ಧಾವಿಸಿದರು. ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಮನೆಯಿಂದ ಹೊರಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.