ಚಿಕ್ಕಬಳ್ಳಾಪುರದಲ್ಲಿ 13ಕ್ಕೇರಿದ ಸೋಂಕಿತರ ಸಂಖ್ಯೆ
ಈವರೆಗೆ ಗೌರಿಬಿದನೂರು ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ಸೋಂಕು ಇದೀಗ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೂ ಸೋಕಿದ್ದು, ನಗರದ 65 ವರ್ಷದ ವೃದ್ಧರೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರ(ಏ.15): ಈವರೆಗೆ ಗೌರಿಬಿದನೂರು ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ಸೋಂಕು ಇದೀಗ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೂ ಸೋಕಿದ್ದು, ನಗರದ 65 ವರ್ಷದ ವೃದ್ಧರೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.
ಗೌರಿಬಿದನೂರು ಹೊರತುಪಡಿಸಿ ಇತರೆಡೆ ಸೋಂಕು ಪತ್ತೆಯಾಗದ ಕಾರಣ ನೆಮ್ಮದಿಯಾಗದ್ದ ಜನತೆಗೆ ಇದೀಗ ಆತಂಕ ಆರಂಭವಾಗಿದೆ. ಜಿಲ್ಲೆಯಲ್ಲಿ ಈವರೆಗೆ 12 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಎಲ್ಲ ಪ್ರಕರಣಗಳೂ ಗೌರಿಬಿದನೂರಿಗೆ ಸೇರಿದ್ದವು. ಇದೀಗ ಚಿಕ್ಕಬಳ್ಳಾಪುರದಲ್ಲಿ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೇರಿದಂತಾಗಿದೆ.
ಲಾಕ್‌ಡೌನ್: ಮೈಸೂರಿನಲ್ಲಿ ವಿಶೇಷ ರೈಲು ಆರಂಭ
ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡಿನ ನಿವಾಸಿ 65 ವರ್ಷದ ವೃದ್ಧ ವ್ಯಕ್ತಿಗೆ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಇವರಿಗೆ ಸೋಂಕು ಬರಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಇವರು ಸ್ಟೀಲ್‌ಪಾತ್ರೆ ಸಾಮಾನಿನ ವ್ಯಾಪಾರಿಯಾಗಿದ್ದು, ಚಿಕ್ಕಬಳ್ಳಾಪುರ ಬಿಟ್ಟು ಹೊರ ಹೋಗಿಲ್ಲ, ಜೊತೆಗೆ ಸೋಂಕಿತ ಪ್ರದೇಶಗಳಿಗೂ ಹೋಗಿಲ್ಲ ಎನ್ನಲಾಗಿದ್ದು, ಇಂತಹ ವ್ಯಕ್ತಿಗೆ ಸೋಂಕು ಬರಲು ಮೂಲ ಏನು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮನೆ ಕೆಲಸದಾಕೆಗೂ ಕ್ವಾರಂಟೈನ್:
ಸೋಂಕಿತನಿಗೆ 52 ವರ್ಷದ ಪತ್ನಿ, 38 ವರ್ಷದ ಮಗ, 24 ವರ್ಷದ ಮತ್ತೊಬ್ಬ ಮಗ, 26 ವರ್ಷದ 3ನೇ ಮಗ ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಹಾಸ್ಪಿಟಲ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕಿತ ವ್ಯಕ್ತಿ ಅಸ್ತಮಾ, ಬಿಪಿ, ಮಧುಮೇಹದಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏ.8 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕರಿಗಳು ತಿಳಿಸಿದ್ದಾರೆ.
6 ಮಂದಿ ಮೇಲೆ ನಿಗಾ:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಜನತೆಗೆ ಆತಂಕ ಆರಂಭವಾಗಿದ್ದು, 12 ಪ್ರಕರಣಗಳಿಂದ ರೆಡ್‌ಝೋನ್ ಪಟ್ಟಿಗೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆ ಈಗ ಮತ್ತಷ್ಟುಸೋಂಕಿತ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ 6 ಮಂದಿ ಸಂಪರ್ಕಿತರಿಗೆ ಕ್ವಾರಂಟೈನ್ ಮಾಡಿ, ನಿಗಾ ಇಡಲಾಗಿದೆ.
17ನೇ ವಾರ್ಡ್ ಸೀಲ್‌ಡೌನ್:
ಪ್ರಸ್ತುತ ಸೋಂಕು ಪತ್ತೆಯಾಗಿರುವ ಚಿಕ್ಕಬಳ್ಳಾಪುರದ 17ನೇ ವಾರ್ಡು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಈ ವಾರ್ಡಿನಿಂದ ಯಾರೂ ಹೊರಹೋಗದಂತೆ ಮತ್ತು ಇತರರು ಒಳ ಬರದಂತೆ ಎಚ್ಚರ ವಹಿಸಲಾಗಿದೆ. ಜೊತೆಗೆ ಸೋಂಕಿತನ ಮನೆ ಸೇರಿದಂತೆ ಇಡೀ ರಸ್ತೆಗೆ ರಾಸಾಯನಿಕ ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಲಾಗಿದೆ. ರಸ್ತೆ, ಚರಂಡಿಗಳನ್ನು ಸೋಮವಾರ ರಾತ್ರಿಯೇ ಸ್ವಚ್ಛಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 12 ಮಂದಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಬ್ಬ ಮಹಿಳೆ ಮೃತಪಟ್ಟು, 8 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಮೂವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಸೋಂಕು ಪತ್ತೆಯಾಗಿರುವ ವ್ಯಕ್ತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲು ಅಧಿಕಾರಿಗಳು ಕ್ರಮ ವಹಿಸಿರುವುದಾಗಿ ತಿಳಿದುಬಂದಿದೆ.