Asianet Suvarna News Asianet Suvarna News

Uttara Kannada: ಕುಮಟಾದಲ್ಲಿ 12ನೇ ಶತಮಾನದ ಕನ್ನಡ ಶಾಸನ ಪತ್ತೆ

ಕುಮಟಾ ತಾಲೂಕಿನ ಕೋಡ್ಕಣಿ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದ ತೆಂಗಿನ ಮರದ ಬುಡದಲ್ಲಿ 12ನೇ ಶತಮಾನದ ಅವಧಿಗೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿಯಲ್ಲಿರುವ ಕನ್ನಡ ಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ. 

12th Century Kannada Inscription Found In Kumta Uttara Kannada gvd
Author
First Published Sep 6, 2022, 3:15 AM IST

ಕಾರವಾರ (ಸೆ.06): ಕುಮಟಾ ತಾಲೂಕಿನ ಕೋಡ್ಕಣಿ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದ ತೆಂಗಿನ ಮರದ ಬುಡದಲ್ಲಿ 12ನೇ ಶತಮಾನದ ಅವಧಿಗೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿಯಲ್ಲಿರುವ ಕನ್ನಡ ಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ. ಉ.ಕ. ಜಿಲ್ಲಾ ಶಾಸನ ಸಂಪುಟದ ರಚನೆ ಹಿನ್ನೆಲೆಯಲ್ಲಿ ಕೋಡ್ಕಣಿಯಲ್ಲಿ ಕೈಗೊಂಡ ಎರಡನೇ ಹಂತದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮಾಧ್ಯದಮವರ ಜತೆಗೆ ಮಾತನಾಡಿದ ಅವರು, ತಿಗಳಾರಿ ಲಿಪಿಯಲ್ಲಿರುವ ಈ ಶಾಸನ 32 ಸಾಲುಗಳಲ್ಲಿ ಬರೆದಿದೆ. ಇದು ಶಿಶುಗಲಿ ಪಾಂಡ್ಯರ ರಾಜ ವಿಕ್ರಮ ತೈಲನದ್ದಾಗಿದೆ. 

ಹೆಗ್ರ್ಗಡಹೇಯ (ಬಹುಶಃ ಈಗಿನ ಹೆಗಡೆ) ಗ್ರಾಮದಲ್ಲಿ ಲಿಷ್ಣಮನ ತಮ್ಮ ನಾರಾಯಣ ಮತ್ತು ಸೀಗೆಯ ನಾರಾಯಣರು ಪ್ರತಿಷ್ಠಾಪಿಸಿದ ದೇವರಿಗೆ ನಂದಾದೀಪ ಮತ್ತು ನೈವೇದ್ಯಕ್ಕಾಗಿ ವಿಕ್ರಮತೈಲ ಭೂಮಿದಾನ ನೀಡಿದ ವಿಷಯ ತಿಳಿಸುತ್ತದೆ. ಶಾಸನ ಹಟ್ಟಣದ (ಪಟ್ಟಣದ) ತೈಲನೂ ದೇವರಿಗೆ ಭೂಮಿ ಮತ್ತು ಹಣ ದಾನ ನೀಡಿದ್ದನ್ನು ಶಾಸನ ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಸ್ಪಷ್ಟವಾದ ತೇದಿಯ ಉಲ್ಲೇಖವಿಲ್ಲ. ಕೇವಲ ಮೀನದ ಬೃಹಸ್ಪತಿ ಎಂದು ಶಾಸನ ಮುಂದುವರಿಯುತ್ತದೆ. ಗುಂಡಬಾಳ ಮತ್ತು ತಂಬೊಳ್ಳಿಯಲ್ಲಿ ಈ ಮೊದಲು ದೊರೆತ ಶಾಸನಗಳ ಆಧಾರದಿಂದ ವಿಕ್ರಮ ತೈಲನ ಆಳ್ವಿಕೆ ಕ್ರಿ.ಶ. 1119ರಿಂದ 1125 ಎಂದು ವಿದ್ವಾಂಸರು ಗುರುತಿಸಿದ್ದಾರೆ.

Uttara kannada; ಅಪಾಯದಲ್ಲಿದೆ ಹೊನ್ನಾವರದ ತೂಗು ಸೇತುವೆ

ಗುಂಡಬಾಳ ಶಾಸನದಲ್ಲಿ ವಿಕ್ರಮ ತೈಲನನ್ನು ಹೈವಲದೇವಿಯ ಪ್ರಿಯಾನುಜ (ತಮ್ಮ) ಎಂದು ಹೇಳಿದೆ. ಇದಕ್ಕಿಂತ ಒಂದು ವರ್ಷ ಮುಂಚಿತವಾಗಿ ರಚನೆಯಾದ ತಂಬೊಳ್ಳಿ ಶಾಸನದಲ್ಲಿ ಕಾಮನ ಅಗ್ರ ಮಹೀಷಿ ಕಾಳಲದೇವಿಗೆ ಮಲ್ಲನಲ್ಲದೇ ಇನ್ನೊಬ್ಬ ಮಗನಿದ್ದನೆಂದೂ ಅವನ ಹೆಸರು ಬೊಪ್ಪದೇವನೆಂದೂ ತಿಳಿಸಿದೆ. ತಂಬೊಳ್ಳಿ ಶಾಸನವು ಬೊಪ್ಪದೇವನನ್ನು ಸ್ಪಷ್ಟವಾಗಿ ಮಲ್ಲನ ತಮ್ಮನೆಂದೂ ಕಾಳಲದೇವಿಯ ಮಗನೆಂದೂ ವರ್ಣಿಸುವ ಜೊತೆಗೆ ಹೈವಲದೇವಿಯ ಅನುಜನೆಂದೂ ಹೇಳಿರುವುದರಿಂದ ಆ ಎರಡು ಶಾಸನಗಳ ಬಲದಿಂದ ಈ ಕೊಡಕಣಿ ಶಾಸನದ ವಿಕ್ರಮ ತೈಲನಿಗೆ ಬೊಪ್ಪದೇವ ಎನ್ನುವ ಇನ್ನೊಂದು ಹೆಸರಿರುವುದೂ ನಮಗೆ ತಿಳಿಯುತ್ತದೆ. 

ಈ ದೊರೆಯ ಆಳ್ವಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ ದೊರೆತಿರುವ ಶಾಸನಗಳ ಅಭ್ಯಾಸದಿಂದ ವಿಕ್ರಮ ತೈಲ ಒಬ್ಬ ದಕ್ಷದೊರೆಯಾಗಿದ್ದ ಎನ್ನುವುದು ದೃಢವಾಗುತ್ತದೆ ಎಂದರು. ಪ್ರಸ್ತುತ ಶಾಸನ ಉಲ್ಲೇಖಿಸುವ ಹಟ್ಟಣದ ತೈಲ ವಿಕ್ರಮ ತೈಲನ ಮೊಮ್ಮಗ ಎನ್ನುವ ಸಂಗತಿ ಗುಂಡುಬಳೆ, ತಂಬೋಳ್ಳಿ ಮತ್ತು ಎಡತಾರೆ ಶಾಸನಗಳ ತುಲನಾತ್ಮಕ ಅಧ್ಯಯನದಿಂದ ತಿಳಿಯುತ್ತದೆ. ಈತನು ಇಂದಿನ ಕುಮಟಾ ತಾಲೂಕಿನ ಉಪ್ಪಿನಪಟ್ಟಣದಲ್ಲಿ ಆಳುತ್ತಿದ್ದ. ಈತನ ಸಹೋದರ ಮಲ್ಲಿದೇವ ಸಿರಿಯೂರಿಂದ (ಕುಮಟಾ ತಾಲೂಕಿನ ಹೊದಕೆ ಶಿರೂರು) ಆಳ್ವಿಕೆ ಮಾಡುತ್ತಿದ್ದ ಸಂಗತಿಗಳೂ ಆ ಅಧ್ಯಯನದಿಂದ ತಿಳಿಯುತ್ತದೆ.

ಈವರೆಗೆ ಹಟ್ಟಣದ ತೈಲನ ಅವಧಿ ಕ್ರಿ.ಶ. 1145ರಿಂದ 1183ಎಂದು ತಿಳಿಯಲಾಗಿತ್ತು. ಅದರೆ ಈಗ ದೊರೆತಿರುವ ಕೊಡ್ಕಣಿ ಶಾಸನದ ಅಧ್ಯಯನದಿಂದ ಹಟ್ಟಣದ ತೈಲನು ತನ್ನ ಅಜ್ಜ ವಿಕ್ರಮ ತೈಲನ ಅವಧಿಯಲ್ಲೇ ಉಪ್ಪಿನ ಪಟ್ಟಣದಿಂದ ಆಳ್ವಿಕೆ ಆರಂಭಿಸಿರಬಹುದು. ಅದೇ ವೇಳೆ ಈತನ ಸಹೋದರ ಮಲ್ಲಿದೇವ ಸಿರಿಯೂರಿಂದ ಹಾಗೂ ಅಜ್ಜ ಬೊಪ್ಪದೇವ ಅಥವಾ ವಿಕ್ರಮ ತೈಲ ಶಿಶುಗಲಿಯಿಂದ ಏಕಕಾಲದಲ್ಲಿ ಆಳುತ್ತಿದ್ದಿರಬೇಕು ಎಂಬ ಸುಳಿವು ದೊರೆಯುತ್ತದೆ ಎಂದು ವಿವರಿಸಿದರು.

ತಿಗಳಾರಿ ಇದು ತಮಿಳು ಗ್ರಂಥ ಲಿಪಿ ಮತ್ತು ಮಳಯಾಳಂ ಲಿಪಿಗಳ ಮಧ್ಯಂತರದ ರೂಪವಾಗಿದೆ. ಇತರ ಭಾರತೀಯ ಲಿಪಿಗಳಂತೆ ತಿಗಳಾರಿ ಲಿಪಿಯು ಕೂಡ ಅಶೋಕನ ಬ್ರಾಹ್ಮೀ ಲಿಪಿಯಿಂದ ವಿಕಸಿತಗೊಂಡಿದೆ. ಈ ಲಿಪಿಯು ಬ್ರಾಹ್ಮಿಜನ್ಯ ಲಿಪಿಯಾದ ಗ್ರಂಥ ಲಿಪಿಯ ಮೂಲಕ ವಿಕಾಸವಾದದ್ದು. ಸುಮಾರು 11-12ನೇ ಶತಮಾನದಲ್ಲಿ ತಮಿಳುನಾಡು-ಕೇರಳ ಪ್ರದೇಶದಿಂದ ಕರ್ನಾಟಕಕ್ಕೆ ಆಗಮಿಸಿತು ಎನ್ನುವ ಅಭಿಪ್ರಾಯ ವಿದ್ವಾಂಸರದ್ದಾಗಿದೆ.

ಗುಪ್ತ ಲಿಪಿ: ತಿಗಳಾರಿ ಲಿಪಿಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಹಿಂದಿನಿಂದಲೂ ಸಂಸ್ಕೃತ, ಕನ್ನಡ ಮತ್ತು ಕೆಲ ಮಟ್ಟಿಗೆ ತುಳು ಭಾಷೆಯನ್ನು ಬರೆಯಲು ಬಳಸಲಾಗುತಿದ್ದ ಲಿಪಿ. ಇದು ಒಂದು ರೀತಿಯಲ್ಲಿ ಗೂಢವಾದ ಲಿಪಿ. ಮಲೆಯಾಳಿ ಲಿಪಿಯನ್ನು ಹೋಲುವ ಈ ಲಿಪಿಯನ್ನು ಇಂದಿಗೂ ವಿದ್ವಾಂಸರು ಗುಪ್ತಲಿಪಿ ಎಂದು ಕರೆಯುತ್ತಾರೆ. ಬಹುತೇಕ ಸಂಸ್ಕೃತ ವಿದ್ವಾಂಸರು ತಮ್ಮ ಮಂತ್ರ, ತಂತ್ರ ಹಾಗೂ ಸಾಹಿತ್ಯಗಳು ಅನೇಕರಿಗೆ ಅರ್ಥವಾಗಬಾರದೆಂದು ರಹಸ್ಯವಾಗಿರಿಸಬೇಕೆಂದು ಈ ಲಿಪಿ ಬಳಸಿದರೆಂದು ಹೇಳಲಾಗುತ್ತದೆ.

ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಸಾತೇರಿದೇವಿ ಜಾತ್ರಾ ಮಹೋತ್ಸವ

ಬಹುತೇಕ ಕೃತಿಗಳು ಮಠ, ದೇವಸ್ಥಾನ ಹಾಗೂ ಸಂಸ್ಥಾನಗಳಲ್ಲಿ ಇವೆ. ಹಿಂದಿನ ಕಾಲದಲ್ಲಿ ಜನರು ವೈಯಕ್ತಿಕ ವಿವರಗಳನ್ನು ದಾಖಲಿಸಲೂ ಈ ಲಿಪಿ ಬಳಸಿದ್ದಾರೆ. ತಾಳೆಗರಿ ಗ್ರಂಥಗಳು ತಿಗಳಾರಿ ಲಿಪಿಯಲ್ಲಿವೆ. ಮಲೆನಾಡಿನಲ್ಲಿ ದೊರೆತ ಪ್ರಾಚೀನ ತಾಳೆ ಗ್ರಂಥಗಳು ಇದೇ ಲಿಪಿಯಲ್ಲಿವೆ. ಹಿಂದೆ ಮನೆಯ ಲೆಕ್ಕಪತ್ರಗಳನ್ನು ಕೂಡ ಈ ಲಿಪಿಯಲ್ಲಿ ಬರೆದಿರುವ ದಾಖಲೆಗಳಿವೆ ಎಂದು ಮಾಹಿತಿ ನೀಡಿದರು. ಡಾ. ಅರ್ಪಿತಾ ಅಶೋಕ ಶಾಸನದ ಲಿಪ್ಯಂತರ ಮಾಡಿದ್ದಾರೆ.

Follow Us:
Download App:
  • android
  • ios