ಉಡುಪಿ(ಜೂ.07): ಮಹಾರಾಷ್ಟ್ರದಿಂದ ಹೊರಟಿರುವ ಕೊರೋನಾ ಸುನಾಮಿ ಉಡುಪಿ ಜಿಲ್ಲೆಗೆ ಮತ್ತೆ ಅಪ್ಪಳಿಸಿದೆ. ಶನಿವಾರ ಜಿಲ್ಲೆಯಲ್ಲಿ 121 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಅವರೆಲ್ಲರೂ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 889 ಆಗಿದ್ದು, ಅವರಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ 847. ಶನಿವಾರ ದೃಢಪಟ್ಟ121 ಮಂದಿ ಸೋಂಕಿತರಲ್ಲಿ 120 ಮಂದಿ ಉಡುಪಿ ಜಿಲ್ಲೆಯವರು ಮತ್ತು ಒಬ್ಬರು ದ.ಕ. ಜಿಲ್ಲೆಯವರು. ಅವರಲ್ಲಿ 71 ಮಂದಿ ಪುರುಷರು, 34 ಮಂದಿ ಮಹಿಳೆಯರು ಮತ್ತು 16 ಮಂದಿ ಹತ್ತು ವರ್ಷದೊಳಗಿನ ಮಕ್ಕಳಿದ್ದಾರೆ.

ಕುಕ್ಕೆಯಲ್ಲಿ ಭಕ್ತರ ದರ್ಶನಕ್ಕೆ ಸಿದ್ಧತೆ ಹೀಗಿದೆ: ಇಲ್ಲಿವೆ ಫೋಟೋಸ್

ದ.ಕ. ಜಿಲ್ಲೆಯ ಸೋಂಕಿತರು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದುದರಿಂದ ಅವರ ವರದಿ ಇಲ್ಲಿ ಬಂದಿದೆ. ಅವರೀಗ ದ.ಕ. ಜಿಲ್ಲೆಗೆ ಹಿಂತಿರುಗಿದ್ದು ಅಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಅಲ್ಲಿನ ಜಿಲ್ಲಾಡಳಿತ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಉಡುಪಿ ಜಿಲ್ಲೆಯ 120 ಮಂದಿಯನ್ನು ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

101 ಸೋಂಕಿತರು ಗುಣಮುಖ:

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯ ನಡುವೆಯು ಸಂತೋಷದ ಸಂಗತಿ ಎಂದರೆ ಶನಿವಾರ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಸುಮಾರು 101 ಮಂದಿ ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಸಂತಸದಿಂದ ಮನೆಗೆ ಹಿಂತಿರುಗಿದ್ದಾರೆ. ಇನ್ನು ಪ್ರತಿದಿನ ನೂರರಷ್ಟುಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 233 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದೀಗ 655 ಮಂದಿ ಸಕ್ರಿಯ ಸೋಂಕಿತರಾಗಿ ಚಿಕಿತ್ಸೆಯಲ್ಲಿದ್ದಾರೆ.

ಯಾರೂ ಗಂಭೀರ ಆಗಿರಲಿಲ್ಲ

ಜಿಲ್ಲೆಯಲ್ಲಿ ಮುಂಬೈಯಿಂದ ಬಂದಿದ್ದ ಒಬ್ಬರು ಸೊಂಕಿತರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಇದುವರೆಗೆ ಸೋಂಕಿತರಲ್ಲಿ ತೀರಾ ಗಂಭೀರ ಎನ್ನುವ ಪರಿಸ್ಥಿತಿ ಯಾರಿಗೂ ಇರಲಿಲ್ಲ, ಯಾರಿಗೂ ಆಕ್ಸಿಜನ್‌ ಪೂರೈಕೆ, ವೆಂಟಿಲೇಟರ್‌ ಅಳವಡಿಕೆ ಅಥವಾ ಐಸಿಯು ಚಿಕಿತ್ಸೆ ಅಗತ್ಯ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಸಮಾಧಾನ ವ್ಯಕ್ತಪಡಿಸಿದ್ದಾರೆ.