ಚಿಕ್ಕಮಗಳೂರು: ಹೊಸಕೊಪ್ಪ ಬಳಿ ಕೆರೆಯಲ್ಲಿ 12 ಆನೆಗಳ ಹಿಂಡು
ಕಳೆದ ಕೆಲವು ದಿನಗಳಿಂದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲ ಕೊಪ್ಪ, ಕೆ.ಕಣಬೂರು, ಸಾತ್ಕೋಳಿ, ಮುಂಡಗೋಡು ಭಾಗದಲ್ಲಿ ಕಾಡಾನೆಗಳ ಹಿಂಡು ಬತ್ತದ ಗದ್ದೆ, ಅಡಕೆ ತೋಟಗಳಿಗೆ ದಾಳಿ ಇಡುತ್ತಿದೆ ಎಂದು ದೂರಿದ ಗ್ರಾಮಸ್ಥರು
ನರಸಿಂಹರಾಜಪುರ(ಡಿ.10): ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಹೊಸಕೊಪ್ಪದ ನಿವೃತ್ತ ಯೋಧ ಹಾಗೂ ಪ್ರಗತಿಪರ ಕೃಷಿಕ ಯತಿರಾಜ್ ಅವರ ಮನೆ ಸಮೀಪದ ಕೆರೆಯಲ್ಲಿ 12 ಕಾಡಾನೆಗಳ ಹಿಂಡು ಈಜಾಡಿಕೊಂಡು, ನೀರು ಕುಡಿದು ಸ್ನಾನ ಮಾಡಿಕೊಂಡು ಹೋದ ಪ್ರಕರಣ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಿವೃತ್ತ ಯೋಧ ಹೊಸಕೊಪ್ಪ ಯತಿರಾಜ್ ಅವರ ಮನೆಯಿಂದ 200 ಮೀಟರ್ ದೂರದ ಕೆರೆಗೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಬಂದು ನೀರು ಕುಡಿದು ನಂತರ ಈಜಾಡುತ್ತ ಅರ್ಧ ಗಂಟೆ ಕಳೆದ 12 ಕಾಡಾನೆಗಳ ಹಿಂಡು ನಂತರ ಕೆರೆಯಿಂದ ಕಾಡಿಗೆ ಪ್ರಯಾಣ ಬೆಳೆಸಿವೆ.
CHIKKAMAGALURU: ದೀಪದ ಕೆಳಗೆ ಕತ್ತಲು ಎಂಬಂತೆ ಸಪ್ತ ನದಿಗಳ ನಾಡಲ್ಲಿ ಹಳ್ಳಿಗರ ನೀರಿನ ಗೋಳು!
ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರಗತಿಪರ ಕೃಷಿಕ ಯತಿರಾಜ್, ಕಳೆದ ವರ್ಷ ಇದೇ ಕೆರೆಗೆ 20 ಕಾಡಾನೆಗಳ ಹಿಂಡು ಬಂದು ನೀರು ಕುಡಿದು ಹೋಗಿತ್ತು. ಈ ವರ್ಷ ಆನೆ ಮರಿಗಳು ಸೇರಿದಂತೆ 12 ಕಾಡಾನೆಗಳು ಬಂದಿವೆ. ಕಳೆದ ಕೆಲವು ದಿನಗಳಿಂದ 1-2 ಆನೆ ಮಾತ್ರ ಬರುತ್ತಿತ್ತು. ಆದರೆ, ಶುಕ್ರವಾರ 12 ಆನೆಗಳ ಹಿಂಡು ಬಂದಿದೆ. ಲಕ್ಕವಳ್ಳಿ ವನ್ಯಜೀವಿ ಅರಣ್ಯದಿಂದ ಭದ್ರಾ ಹಿನ್ನೀರು ದಾಟಿ ಪಕ್ಕದ ಗ್ರಾಮ ಗಳಾದ ಗುಳದಮನೆ, ಹಾಗಲಮನೆ, ಸಾತ್ಕೋಳಿ ಕಡೆಯಿಂದ ಕಾಡಾನೆಗಳು ಬರುತ್ತಿವೆ ಎಂದರು.
ಬತ್ತ, ಅಡಕೆ ಹಾನಿ:
ಕಳೆದ ಕೆಲವು ದಿನಗಳಿಂದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲ ಕೊಪ್ಪ, ಕೆ.ಕಣಬೂರು, ಸಾತ್ಕೋಳಿ, ಮುಂಡಗೋಡು ಭಾಗದಲ್ಲಿ ಕಾಡಾನೆಗಳ ಹಿಂಡು ಬತ್ತದ ಗದ್ದೆ, ಅಡಕೆ ತೋಟಗಳಿಗೆ ದಾಳಿ ಇಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೊರಲಕೊಪ್ಪ ನಾಗೇಂದ್ರ, ಪಪ್ಪಣ್ಣ ಗೌಡ, ಮುಂಡಗೋಡು ಸತೀಶ ಮುಂತಾದ ರೈತರ ಗದ್ದೆಗೆ ನುಗ್ಗಿದ ಕಾಡಾನೆಗಳ ಹಿಂಡು ಬತ್ತವನ್ನು ಹಾಳು ಮಾಡಿದೆ. ಇದರಿಂದ ರೈತರಿಗೆ ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಕಾಡಾನೆಗಳು ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.