ಬೀದರ್: ನಿರಂತರ ಮಳೆಗೆ 118 ಮನೆಗಳು ಕುಸಿತ, ಹೊಲದಲ್ಲಿ ನೀರು ನಿಂತು ಬೆಳೆ ನಾಶ
* ಬೀದರ್ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 166ರಷ್ಟು ಹೆಚ್ಚು ಮಳೆ
* ಮುಂಗಾರು ಬೆಳೆ ಸಮೀಕ್ಷೆ
* ಮಳೆಯಿಂದ ಬೆಳೆ ಹಾನಿಯಾಗುವ ಸಾಧ್ಯತೆ
ಬೀದರ್(ಜು.13): ಕಳೆದ ಶುಕ್ರವಾರದಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ನಿರಂತರ ಮಳೆಗೆ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಜನರು ಸಂಕಷ್ಟ ಎದುರಿಸುವಂತೆ ಮಾಡಿದ್ದರೆ, ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ನಾಶದ ಆತಂಕ ಎದುರಿಸುವಂತೆ ಮಾಡಿದೆ. ಜಿಲ್ಲೆಯ ರೈತರು ಬಿತ್ತನೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದು, ವ್ಯಾಪಾರಸ್ಥರು ಕೂಡ ಪಾಪನಾಶ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ವರುಣನ ಆರ್ಭಟ ಜಿಲ್ಲೆಯಾದ್ಯಂತ ಅನಾವೃಷ್ಟಿಯ ವಾತಾವರಣ ಸೃಷ್ಟಿಸಿ ರೈತ ತತ್ತರಿಸಿ ಹೋಗಿದ್ದು, ಭಗವಂತನಿಗೆ ಮಳೆ ನಿಲ್ಲಿಸಲು ಮೊರೆ ಇಡುವಂತೆ ಮಾಡಿದೆ.
ಸೋಯಾ, ಅವರೆ, ತೊಗರಿ ಇತ್ಯಾದಿ ಬೆಳೆ ಬಿತ್ತನೆ ಮಾಡಿದ್ದು, ಮೊಳಕೆ ಒಡೆಯುವ ಸಂದರ್ಭದಲ್ಲಿಯೇ ಅದಕ್ಕೆ ಬಸವನ ಹುಳುವಿನ ಕಾಟ ಎದುರಾಗಿದೆ. ಕಳೆದ 5-6 ದಿನಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಬಿತ್ತನೆ ಮಾಡಿದ್ದ ಹೊಲ ಗದ್ದೆಗಳಲ್ಲಿ ಮಳೆ ನೀರು ನಿಂತು ಸಂಪೂರ್ಣ ಬೆಳೆ ಹಾಳಾಗಲಾರಂಭಿಸಿದೆ. ಜಿಟಿ ಜಿಟಿ ಮಳೆಯಿಂದ ಗ್ರಾಮೀಣ ಭಾಗದ ಹಳೆ ಮನೆಗಳಿಗೆ ಹಾನಿಯಾಗಿದ್ದು, ಇಲ್ಲಿಯವರೆಗೆ 118 ಮನೆಗಳ ಗೋಡೆ ಕುಸಿದು ಬಿದ್ದಿವೆ. ಅನೇಕ ಕುಟುಂಬಗಳು ಆತಂಕಕ್ಕೆ ನೂಕಲ್ಪಟ್ಟಿದ್ದರೆ ಕೆಲವರು ಬೀದಿ ಪಾಲಾಗಿದ್ದಾರೆ. ಇಂತಹ ಮನೆಗಳನ್ನು ಗುರುತಿಸಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ಕೂಡ ಜೋರಾಗಿ ನಡೆಯುತ್ತಿದೆ.
ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ
ಜಿಲ್ಲಾಧಿಕಾರಿ ಭೇಟಿ, ಪರಿಹಾರ ವಿತರಣೆ:
ಬೀದರ್ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆಯನ್ನು ಜಿಲ್ಲಾಧಿಕಾರಿಗಳು ಮಂಗಳವಾರ ನಡೆಸಿದ್ದು, ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಶಾಲಿವಾನ್ ಹನಮಶೆಟ್ಟಿ ಅವರ ಮನೆ ಹಾನಿಯಾದ ಸ್ಥಳ ಪರಿಶೀಲನೆ ನಡೆಸಿ 10,000ರು. ಪರಿಹಾರ ಚೆಕ್ ವಿತರಿಸಿದರು.
ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಫಲಾನುಭವಿಗಳಾದ ಲಕ್ಷ್ಮೀಬಾಯಿ ಮತ್ತು ಕಾಂತಾಬಾಯಿ ಇವರಿಗೆ ಪರಿಹಾರ ಚೆಕ್‌ನ್ನು ಜಿ.ಪಂ ಸಿಇಒ ಶಿಲ್ಪಾ ಎಂ. ವಿತರಿಸಿದರು.
ನಂತರ ಜಿಲ್ಲೆಯಲ್ಲಿ ಬಸವನಹುಳು ಬೆಳೆಗೆ ಹಾನಿಯುನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ಸಮೀಪದ ಹೊಲಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ , ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕಮಲನಗರ, ಔರಾದ್ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ
ಜಿಲ್ಲೆಯಲ್ಲಿ ಕಮಲನಗರ ಹಾಗೂ ಔರಾದ್ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕಳೆದ ಒಂದು ವಾರದ ವಾಡಿಕೆ ಮಳೆ 36.50 ಮೀ.ಮೀ ಇದ್ದು ಆದರೆ 97.10 ಮೀ.ಮೀ ಮಳೆಯಾಗಿದೆ. ಶೇ. 166 ರಷ್ಟುಹೆಚ್ಚು ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಔರಾದ್ ತಾಲೂಕಿನಲ್ಲಿ ವಾಡಿಕೆ ಮಳೆ 40.50 ಮಿಮೀ ಇದ್ದು 126.10 ಮಿಮೀ ಮಳೆಯಾಗಿದೆ, ಬೀದರ್ ವಾಡಿಕೆ ಮಳೆ 43.20 ಮಿಮೀ ಇದ್ದು 109.50 ಮಿಮೀ ಮಳೆಯಾಗಿದೆ. ಭಾಲ್ಕಿ ತಾಲೂಕಿನಲ್ಲಿ ವಾಡಿಕೆ ಮಳೆ 37.20 ಮಿಮೀ ಇದ್ದು 103.90 ಮಿಮೀ ಮಳೆಯಾಗಿದೆ, ಬಸವಕಲ್ಯಾಣ ವಾಡಿಕೆ ಮಳೆ 34.5 ಮಿಮೀ ಇದ್ದು 69.30 ಮಿಮೀ ಮಳೆಯಾಗಿದೆ. ಹುಮನಾಬಾದ್ ವಾಡಿಕೆ ಮಳೆ 33.00 ಮಿಮೀ ಆಗಿದ್ದು 73.30 ಮಿಮೀ ಮಳೆಯಾಗಿದೆ, ಚಿಟಗುಪ್ಪ ವಾಡಿಕೆ ಮಳೆ 32.40 ಮಿಮೀ ಇದ್ದು 81.30 ಮಿಮೀ ಮಳೆಯಾಗಿದೆ, ಕಮಲನಗರ ತಾಲೂಕಿನಲ್ಲಿ ವಾಡಿಕೆ ಮಳೆ 36.70 ಮಿಮೀ ಆಗಿದ್ದು 126.30 ಮಿಮೀ ಮಳೆಯಾಗಿದೆ ಮತ್ತು ಹುಲಸೂರು ತಾಲೂಕಿನಲ್ಲಿ ವಾಡಿಕೆ ಮಳೆ 32.40 ಮಿಮೀ ಇದ್ದು 65.50 ಮಿಮೀ ಮಳೆಯಾಗಿದೆ.
ಪ್ರವಾಹದ ಅಬ್ಬರಕ್ಕೆ ಜೀಪ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಕುಟುಂಬ, ಹೊರಬರಲು ಯತ್ನಿಸುತ್ತಿದ್ದ ದೃಶ್ಯ ಸೆರೆ!
ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಯಾಗುವ ಸಾಧ್ಯತೆಯಿದ್ದು, ರೈತರು ತಮ್ಮ ಹೊಲಗಳಲ್ಲಿ ನಿಂತ ನೀರನ್ನು ಬಸಿಗಾಲುವೆಗಳ ಮೂಲಕ ಹೊರಹಾಕಿ ಸಸಿಗಳ ಬೇರು ಕೊಳೆಯುವುದನ್ನು ತಡೆಯಬಹುದು. ಮಳೆ ನಿಂತ ಮೇಲೆ ಬೆಳೆಗಳಿಗೆ ನ್ಯಾನೊ ಯೂರಿಯಾ (2.00 ಮೀ.ಲಿ. ಪ್ರತಿ ಲೀಟರ್) ಅಥವಾ 19:19:19 (3 ಗ್ರಾಂ. ಪ್ರತಿ ಲೀಟರ್‌ಗೆ) ಸಿಂಪರಣೆ ಮಾಡಿ ಬೆಳೆ ಚೇತರಿಕೆ ಆಗಲು ಕ್ರಮ ಕೈಗೊಳ್ಳಬಹುದಾಗಿದೆ. ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲು ಜು. 31 ಕೊನೆಯ ದಿನಾಂಕವಾಗಿದ್ದು, ಅಂತಿಮ ದಿನಾಂಕದವರೆಗೆ ಕಾಯದೇ ರೈತರು ಕೂಡಲೇ ಮುಂಗಾರು ಬೆಳೆಗಳಿಗೆ ಬೆಳೆ ವಿಮೆಗೆ ನೊಂದಾಯಿಸಲು ಕೋರಿದ್ದಾರೆ.
ಮುಂಗಾರು ಬೆಳೆ ಸಮೀಕ್ಷೆ:
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಆ್ಯಪ್ ಈಗಾಗಲೇ ಬಿಡುಗಡೆ ಆಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಡೌನಲೋಡ್ ಮಾಡಿಕೊಂಡು ರೈತರು ಸ್ವತಃ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೈತರು ಬೆಳೆ ಸಮೀಕ್ಷೆ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.